Site icon Vistara News

Congress politics : ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಗೆ ಕರ್ನಾಟಕದಿಂದ 15 ಲಕ್ಷ ರೂ. ಪರಿಹಾರ!

Congress Politics BY Vijayendra

ಬೆಂಗಳೂರು: ರಾಜ್ಯದಲ್ಲಿ ಹಲವಾರು ಕಡೆ ಆನೆ ದಾಳಿಗೆ ನಿತ್ಯ ಎಂಬಂತೆ ಸಾವುಗಳು ಸಂಭವಿಸುತ್ತಿವೆ. ರಾಜ್ಯ ಸರ್ಕಾರ ಇದರ ಬಗ್ಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಎಲ್ಲೆಡೆ ಇದೆ. ಇದರ ನಡುವೆ ರಾಜ್ಯ ಸರ್ಕಾರ ಕೇರಳದಲ್ಲಿ ಕಾಡಾನೆ ದಾಳಿಗೆ (Elephant Attack) ಒಳಗಾದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ (15 Lakh rupees Compensation) ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ನಾಯಕ (Congress Politics) ರಾಹುಲ್‌ ಗಾಂಧಿ (Congress leader Rahul Gandhi) ಅವರು ಪ್ರತಿನಿಧಿಸುತ್ತಿರುವ ವಯನಾಡ್‌ ಕ್ಷೇತ್ರದಲ್ಲಿ ನಡೆದ ದುರಂತಕ್ಕೆ ರಾಜ್ಯ ಸರ್ಕಾರ ಮಿಡಿದಿರುವುದನ್ನು ಬಿಜೆಪಿ ತೀವ್ರವಾಗಿ ಆಕ್ಷೇಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra), ಹಿರಿಯ ನಾಯಕ ಸಿ.ಟಿ. ರವಿ ಸೇರಿದಂತೆ ಹಿರಿಯ ನಾಯಕರು ಇದನ್ನು ಪ್ರಶ್ನೆ ಮಾಡಿದ್ದಾರೆ.

Congress politics : ರಾಜ್ಯದ ಜನರಿಗೆ ಮಾಡಿದ ದ್ರೋಹ ಎಂದ ಬಿ.ವೈ. ವಿಜಯೇಂದ್ರ

ಕರ್ನಾಟಕದ ಆನೆಯ ದಾಳಿಯಿಂದ ಕೇರಳದಲ್ಲಿ ವಯನಾಡು ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವಾಗುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲಹೆ ಮೇರೆಗೆ ಕರ್ನಾಟಕ ಸರ್ಕಾರ, ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಸಂಪೂರ್ಣವಾಗಿ ಅವಮಾನಕರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ತಮ್ಮ ‘X’ ಖಾತೆಯಲ್ಲಿ ಹೇಳಿಕೆ ನೀಡಿರುವ ಅವರು ರಾಹುಲ್ ಗಾಂಧಿಯವರ ವಯನಾಡ್ ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ 15 ಲಕ್ಷ ರೂ.ಗಳನ್ನು ಅಕ್ರಮವಾಗಿ ಮಂಜೂರು ಮಾಡಿರುವುದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕದಾದ್ಯಂತ ಬರಗಾಲ ಮತ್ತು ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ, ಸ್ವಲ್ಪವೂ ನಾಚಿಕೆಯಿಲ್ಲದೆ ರಾಜ್ಯದ ತುರ್ತು ಅಗತ್ಯಗಳತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿಯವರನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತಿರುವುದು ಖೇದಕರ. ಕಾಂಗ್ರೆಸ್ ಹೈಕಮಾಂಡ್‌ ಮೆಚ್ಚಿಸಲು ಕರ್ನಾಟಕದ ತೆರಿಗೆದಾರರ ಹಣವನ್ನು ಅನೈತಿಕವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವರುಗಳು ಹೊಣೆಹೊರಬೇಕು ಎಂದು ವಿಜಯೇಂದ್ರ ಟೀಕಿಸಿದ್ದಾರೆ.

Congress politics‌ : ರಾಜ್ಯ ಸರ್ಕಾರ ಪರಿಹಾರ ನೀಡಿದ್ದು ಎಷ್ಟು ಸರಿ?

ರಾಹುಲ್ ಗಾಂಧಿ ಸೂಚನೆ ಬೆನ್ನಲ್ಲೆ ಅರಣ್ಯ ಸಚಿವರು, ನಿಮ್ಮ (ರಾಹುಲ್ ಗಾಂಧಿ) ಸಲಹೆಯಂತೆ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಜೊತೆಗೆ ಈ ಬಗ್ಗೆ ಬೀದರ್‌ನಲ್ಲಿ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಕೇರಳ ವ್ಯಕ್ತಿಯ ಕುಟುಂಬ ಪರಿಹಾರ ನೀಡಲಾಗಿದೆ ಎಂದಿದ್ದಾರೆ. ಮಾನವೀಯ ನೆಲೆಯಲ್ಲಿ ಪಕ್ಷದ ವತಿಯಿಂದ ಪರಿಹಾರ ನೀಡಲಿ, ಆದರೆ ಕಾಡಾನೆಗಳಿಗೂ ರಾಜ್ಯದ ಗಡಿಗಳನ್ವಯ ವ್ಯವಹರಿಸಿ, ಯಾರದ್ದೋ ರಾಜಕೀಯ ಲಾಭಕ್ಕೆ ಸರ್ಕಾರ ಖಜಾನೆ ಹಣ ಬಳಸುವುದು, ಸದನ ನಡೆಯುತ್ತಿರುವಾಗ ಸಚಿವರು ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದು, ಅದು ಕೂಡ ಹೊರ ರಾಜ್ಯದವರಿಗೆ ಈ ರೀತಿ ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿರುವುದು ಪ್ರಕರಣಕ್ಕೆ ಬೇರೆ ಸ್ವರೂಪ ನೀಡಿದ್ದು ಈ ಹಿನ್ನಲೆಯಲ್ಲಿ ವಿಜಯೇಂದ್ರ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ : Elephant attack: ಹೊಸೂರಿನಲ್ಲಿ ಕಾಡಾನೆ ದಾಳಿ; ಇಬ್ಬರು ಮಹಿಳೆಯರು ಸೇರಿ ಜಾನುವಾರುಗಳು ಸಾವು

ವಯನಾಡಿನಲ್ಲಿ ಆನೆ ದಾಳಿ ನಡೆದದ್ದು ಹೀಗೆ..

ನನ್ನ ತೆರಿಗೆ ನನ್ನ ಹಕ್ಕು; ಸಿದ್ದರಾಮಯ್ಯ ಹೋರಾಟ ಏನಾಯಿತು ಎಂದು ಕೇಳಿದ ಸಿ.ಟಿ. ರವಿ

ರಾಜ್ಯಕ್ಕೆ ಸಂಬಂಧವೇ ಇಲ್ಲದ ವಿಚಾರವೊಂದಕ್ಕೆ 15 ಲಕ್ಷ ರೂಪಾಯಿ ವ್ಯಯಿಸುವ ಈ ರಾಜ್ಯ ಸರ್ಕಾರ “ಯಾರದ್ದೋ ಮದುವೆಯಲ್ಲಿ ಉಂಡವನೆ ಜಾಣ” ಎಂಬ ಗಾದೆಗೆ ಅನ್ವರ್ಥನಾಮವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಅವರು ಕೂಡಾ ಟ್ವಿಟರ್‌ನಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದಾರೆ.

“ನನ್ನ ತೆರಿಗೆ ನನ್ನ ಹಕ್ಕು” “ನಮ್ಮ ದುಡ್ಡು ಇನ್ಯಾರಿಗೋ ಯಾಕೆ ಕೊಡಬೇಕು?”ಎಂದು ಎದೆ ತಟ್ಟಿಕೊಂಡು ಸುಳ್ಳೇ ನಾಟಕ ಮಾಡುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತವರ ಪರಿವಾರಗಣ ಯಾಕೆ ಕೇರಳದ ಕಾಂಗ್ರೆಸ್ ಸಂಸದನ ತಾಳಕ್ಕೆ ಏಕೆ ಕುಣಿಯುತ್ತಿದೆ?- ಎಂದು ಸಿ.ಟಿ. ರವಿ ಕೇಳಿದ್ದಾರೆ.

ತನ್ನ “ಧಣಿಗಳ” ಮನ ಮೆಚ್ಚಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ನಿರಂತರವಾಗಿ ವಿಶ್ವಾಸಘಾತ ಮಾಡುತ್ತಿದೆ. ನಕಲಿ ಗಾಂಧಿಗಳ ಹಿತಾಸಕ್ತಿಯ ರಕ್ಷಣೆಗೆ ಕನ್ನಡಿಗರು ಎಷ್ಟು ದಿನ ತಮ್ಮ ಹಿತಾಸಕ್ತಿಗಳನ್ನು ಬಲಿ ನೀಡಬೇಕು?- ಎಂದು ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.

ರಿಲಾಂಚ್‌ ಮಾಡಿದರೂ ಉಡಾವಣೆಯಾಗದ ರಾಕೆಟ್‌ ರಾಹುಲ್‌ ಗಾಂಧಿ!

ನಕಲಿ ಗಾಂಧಿ ಪರಿವಾರದಲ್ಲಿ ಹುಟ್ಟಿದ್ದಾರೆ ಎನ್ನುವ ಏಕೈಕ ಸಾಧನೆಗೆ, ರಿಲಾಂಚ್ ಮೇಲೆ ರಿಲಾಂಚ್ ಮಾಡಿದರೂ ಉಡಾವಣೆಯಾಗದ ರಾಕೆಟ್ ನ ಹಾಗಿರುವ, ನಿಮ್ಮ ಅಧಿನಾಯಕನ ಆದೇಶಕ್ಕೆ ಕನ್ನಡಿಗರ ಹಣವನ್ನು ಏಕೆ ಖರ್ಚು ಮಾಡಲಾಗುತ್ತಿದೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೇ?!?

ಅಂದ ಹಾಗೆ ರಾಜ್ಯದ ಮಂತ್ರಿಯೊಬ್ಬರ ಅಧಿಕೃತ ಆದೇಶ ಪತ್ರದ ನಕಲನ್ನು ಹೊರ ರಾಜ್ಯದ ಕಾಂಗ್ರೆಸ್ ಪದಾಧಿಕಾರಿಗಳ ಹೆಸರಿನಲ್ಲಿ ಹೊರಡಿಸಿರುವ ಔಚಿತ್ಯ ಏನು? ಕೆ ಸಿ ವೇಣುಗೋಪಾಲ್ ನಿಮ್ಮ ಸರ್ಕಾರದ ಕೊರಿಯರ್ ಬಾಯ್ ಎನ್ನುವ ಕಾರಣಕ್ಕೋ? ಅಥವಾ ನಿಮ್ಮ ಸರ್ಕಾರದ ಪೆರ್ಸೆಂಟೇಜ್ (ಹೈಕಮಾಂಡ್ ತೆರಿಗೆ) ವ್ಯವಹಾರಕ್ಕೆ ಅನುಕೂಲವಾಗಲಿ ಎಂದೋ?

ತನ್ನ ವೈಫಲ್ಯಗಳಿಗೆ ಕೇಂದ್ರ ಸರ್ಕಾರವನ್ನು ಧೂಷಣೆ ಮಾಡುತ್ತಿರುವ ಅಸಮರ್ಥ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮದರಸಾಗಳಿಗೆ, ವಕ್ಫ್ ಆಸ್ತಿಗಳಿಗೆ, ಮತ್ತು ಇಂಥಹ ಎಡಬಿಡಂಗಿ ವಿಚಾರಗಳಿಗೆ ಖರ್ಚು ಮಾಡುವಲ್ಲಿ ಅಪಾರ ಹಾಗು ವಿಶೇಷ ಆಸಕ್ತಿ ಇರುವಂತೆ ಕಾಣುತ್ತದೆ.

ಸಿದ್ದರಾಮಯ್ಯ ಅವರದು ಜನವಿರೋಧಿ ತುಘಲಕ್‌ ದರ್ಬಾರ್!

ತುಘಲಕ್ ದರ್ಬಾರ್ ಅನ್ನುವುದನ್ನು ಇತಿಹಾಸದಲ್ಲಿ ಓದಿದ್ದೆವು, ಕೇಳಿದ್ದೆವು ಆದರೆ ಈಗ ಶ್ರೀಮಾನ್ ಸಿದ್ದರಾಮಯ್ಯ ಅವರ ರಾಜ್ಯಭಾರದಲ್ಲಿ ಜನವಿರೋಧಿ “ತುಘಲಕ್ ದರ್ಬಾರ್” ಅನುಭವಿಸಬೇಕಾಗಿ ಬಂದಿದ್ದು ಕನ್ನಡಿಗರ ಪಾಲಿನ ದುರ್ದೈವ.

ಆನೆ ದಾಳಿಗೆ ಒಳಗಾದ ಅಜೀಶ್‌ ಕುಟುಂಬದವರ ಜತೆ ರಾಹುಲ್‌ ಗಾಂಧಿ ಭೇಟಿಯಾದ ಕ್ಷಣಗಳು
Exit mobile version