Site icon Vistara News

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇ.ಡಿ. ಕಿರುಕುಳ ವಿರೋಧಿಸಿ ಪ್ರತಿಭಟನೆ: ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಅನಗತ್ಯ ಕಿರುಕುಳ ನೀಡುತ್ತಿದ್ದು, ಜೂನ್ 13ರಂದು ದೇಶದ ಎಲ್ಲ ಭಾಗಗಳಲ್ಲಿರುವ ಇ.ಡಿ. ಕಚೇರಿ ಮುಂದೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ. ಆದರ ಅಂಗವಾಗಿ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್ ಬಳಿಯಿರುವ ಇ.ಡಿ. ಕಚೇರಿ ಮುಂದೆ ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ | ನ್ಯಾಷನಲ್‌ ಹೆರಾಲ್ಡ್‌: ಜೂ.23ರಂದು ಹಾಜರಾಗಲು ಸೋನಿಯಾ ಗಾಂಧಿಗೆ ED ಸಮನ್ಸ್‌

ದೆಹಲಿಯ ಕಾಂಗ್ರೆಸ್ ಕಚೇರಿಯಿಂದ ಇ.ಡಿ.ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ರಾಹುಲ್ ಗಾಂಧಿಯವರನ್ನು ಎಷ್ಟು ಹೊತ್ತು ವಿಚಾರಣೆ ನಡೆಸಲಾಗುವುದೋ ಅಷ್ಟೂಹೊತ್ತು ಪ್ರತಿಭಟನೆ ಮಾಡಲಾಗುವುದು.

ಈ ಪ್ರತಿಭಟನೆ ವಿಚಾರವಾಗಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರ ಜತೆ ಚರ್ಚೆ ನಡೆಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಜ್ಯದ ಇತರೆ ಭಾಗಗಳಿಂದ ಪ್ರತಿಭಟನೆಗೆ ಆಗಮಿಸುವವರು ಹಿಂದಿನ ದಿನವೇ ಬೆಂಗಳೂರಿಗೆ ಬರಬೇಕೆಂದು ಈ ಮೂಲಕ ಕರೆ ನೀಡುತ್ತಿದ್ದೇವೆ.

ನಾವು ಇ.ಡಿ. ಕಚೇರಿ ಒಳಗೆ ಪ್ರವೇಶ ಮಾಡುವುದಿಲ್ಲ. ರಾಷ್ಟ್ರದ ಜನತೆಯ ನೋವನ್ನು ವ್ಯಕ್ತಪಡಿಸಲು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿಯಾಗಲು ಎರಡು ಬಾರಿ ಅವಕಾಶ ಸಿಕ್ಕರೂ ದೇಶದ ಹಿತಕ್ಕಾಗಿ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದಾರೆ.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ರಾಜಕೀಯ ತ್ಯಾಗ ಹಾಗೂ ಬೆಳವಣಿಗೆಯನ್ನು ಸಹಿಸದ ಬಿಜೆಪಿ ಸರ್ಕಾರ ಅವರ ವಿರುದ್ಧ ವಿನಾಕಾರಣ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಟ್ಟು ಕಿರುಕುಳ ನೀಡುತ್ತಿದೆ. ಬಿಜೆಪಿ ಸರ್ಕಾರವೇ ಈ ಹಿಂದೆ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಬಿಟ್ಟಿದ್ದರೂ ಗಾಂಧಿ ಕುಟುಂಬಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಮತ್ತೆ ಆ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಿ ತನಿಖೆ ಆರಂಭಿಸಲಾಗಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಜವಾಹರಲಾಲ್ ನೆಹರು ಅವರ ಕಾಲದಿಂದ ಆರಂಭವಾಗಿದ್ದು, ಇದು ಕಾಂಗ್ರೆಸ್ ಪಕ್ಷದ ಪತ್ರಿಕೆಯಾಗಿದೆ. ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು ಇದನ್ನು ನಡೆಸಲು ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅಂದಿನಿಂದ ಆ ಪತ್ರಿಕೆಯ ಆಸ್ತಿಪಾಸ್ತಿಗಳನ್ನು ಉಳಿಸಿಕೊಂಡು ಬರಲಾಗಿದೆ.

ಈ ಹಿಂದೆ ಆಸ್ಕರ್ ಫರ್ನಾಂಡಿಸ್ ಅವರು ಅದಕ್ಕೆ ಟ್ರಸ್ಟಿಯಾಗಿದ್ದು, ಈಗ ಆಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಲಾಗಿದೆ. ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಆರ್ಥಿಕ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ಆರಂಭಿಸಿದೆ.

ನಮ್ಮ ನಾಯಕರುಗಳು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಅವರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಗಾಂಧಿ ಕುಟುಂಬದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿಯವರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ವಿಚಾರಣೆ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು, ರಾಹುಲ್ ಗಾಂಧಿಯವರು ಜೂನ್ 13ರಂದು ಇಡಿ ಕಚೇರಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಹೀಗಾಗಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಎಲ್ಲಾ ಇ.ಡಿ. ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಆರ್‌ಎಸ್‌ಎಸ್‌ ಅನ್ನು ಹೊಗಳಿದ್ದ ನೆಹರೂಗಿಂತ ಸಿದ್ದು, ಡಿಕೆಶಿ ದೊಡ್ಡವರೆ? ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

Exit mobile version