Site icon Vistara News

Constable Exam : ಫೆ. 25ರಂದು ಕಾನ್‌ಸ್ಟೇಬಲ್‌ ನೇಮಕ ಪರೀಕ್ಷೆ; ಶರ್ಟ್‌ಗೆ ಕಾಲರ್‌ ಇರಬಾರ್ದು, ಶೂ ಹಾಕ್ಲೇಬಾರ್ದು!

Constable Exam Bangalore

ಬೆಂಗಳೂರು: ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ (Police Department) ಖಾಲಿ ಇರುವ 1137 ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳ (Constable Exam) ಭರ್ತಿಗೆ ಫೆ. 25ರಂದು ಲಿಖಿತ ಪರೀಕ್ಷೆ (Written Exam) ನಡೆಯಲಿದೆ. ಯಾವ ಕಾರಣಕ್ಕೂ ಇಲ್ಲಿ ನಕಲು ಮಾಡಲು, ಹೊರಗಿನ ಮಾಹಿತಿ ಪಡೆದು ಪರೀಕ್ಷೆ ಬರೆಯಲು ಅವಕಾಶ ಸಿಗಬಾರದು ಎಂಬ ಕಾರಣಕ್ಕಾಗಿ ಪರೀಕ್ಷಾರ್ಥಿಗಳಿಗೆ (Exam for Constable Post) ಕಠಿಣ ವಸ್ತ್ರ ಸಂಹಿತೆಯನ್ನು (Dress Code) ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಕೆಲವೊಂದು ಷರತ್ತುಗಳು ಎಷ್ಟೊಂದು ಕಠಿಣವಾಗಿವೆ ಎಂದರೆ ಪುರುಷರು ಹಾಕೋ ಶರ್ಟ್‌ಗೆ ಕಾಲರ್‌ ಇರಬಾರದು, ಶೂವಂತೂ ಯಾರೂ ಹಾಕಲೇಬಾರದು! ಕಳೆದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪರೀಕ್ಷೆಯಲ್ಲಿ (PSI Exam) ನಡೆದಿರುವ ಅಕ್ರಮಗಳನ್ನು ಪರಿಗಣಿಸಿ ನಿಯಮಾವಳಿಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್‌ ಕಾನ್‌ ಸ್ಟೇಬಲ್‌ ಸಿವಿಲ್‌ (ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ ಲಾಗ್‌ ಅಡಿ ಬರುವ 1137 ಹುದ್ದೆಗಳಿಗೆ ಈ ಲಿಖಿತ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತದ ಕೇಂದ್ರಗಳಲ್ಲಿ ಬೆಳಗ್ಗೆ 11ರಿಂದ 12.30ರವರೆಗೆ ಈ ಪರೀಕ್ಷೆ ನಡೆಯಲಿದೆ. ಯಾರೆಲ್ಲ ಈ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೋ ಅವರಿಗೆ ಹಾಲ್‌ ಟಿಕೆಟ್‌ ಬಗ್ಗೆ ಮುಂದಿನ ದಿನಗಳಲ್ಲಿ ಎಸ್.ಎಂ.ಎಸ್. ಮೂಲಕ ಮಾಹಿತಿಯನ್ನು ನೀಡಲಾಗುವುದು ಹಾಗೂ ಹಾಲ್‌ ಟಿಕೆಟ್‌ ಲಿಂಕ್ ಅನ್ನು ಸಹ ಕಳುಹಿಸಲಾಗುತ್ತದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು, ನಿಗದಿಪಡಿಸಿದ ಕೇಂದ್ರದಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಬೇಕು ಸೂಚಿಸಿದೆ. ಪ್ರವೇಶಪತ್ರಗಳನ್ನು ರಾಜ್ಯ ಪೊಲೀಸ್ ಇಲಾಖೆ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಪೊಲೀಸ್ ನೇಮಕಾತಿ ವಿಭಾಗ ಪ್ರಕಟಣೆ ಹೊರಡಿಸಿದೆ. ಅದರ ಜತೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂದು ತಿಳಿಸಿದೆ.

ಇದನ್ನೂ ಓದಿ : KSET Exam 2024: ಕೆ-ಸೆಟ್‌ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರಕ್ಕೆ ವಿನಾಯಿತಿ; ಸಣ್ಣ ಕಿವಿಯೋಲೆ ತೆಗೆಸಿದ್ದಕ್ಕೆ ಕಿಡಿ

Constable Exam Bangalore1

ಹಾಗಿದ್ದರೆ ಏನೇನು ವಸ್ತ್ರ ಸಂಹಿತೆ ಇರಲಿದೆ?

ಪುರುಷ ಮತ್ತು ತೃತೀಯ ಲಿಂಗಿ ಪುರುಷ ಅಭ್ಯರ್ಥಿಗಳಿಗೆ

  1. ಪುರುಷ ಮತ್ತು ತೃತೀಯ ಲಿಂಗಿ ಪುರುಷ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸಬೇಕು.
  2. ಸಾಧ್ಯವಾದಷ್ಟು ಕಾಲ ರಹಿತ ಶರ್ಟ್‌ಗಳನ್ನು ಧರಿಸಬೇಕು.
  3. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸತಕ್ಕದ್ದಲ್ಲ.
  4. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ.
  5. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಚಪ್ಪಲಿ ಧರಿಸುವುದು.
  6. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳಿಗೆ ಸೂಚನೆಗಳು

  1. ಮಹಿಳಾ ಮತ್ತು ತೃತೀಯಲಿಂಗ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ.
  2. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು.
  3. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಅಭ್ಯರ್ಥಿಗಳು ಧರಿಸಬೇಕು.
  4. ಎತ್ತರವಾದ ಹಿಮ್ಮಡಿಯ ಶೂಗಳನ್ನು / ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸಬೇಕು.
  5. ಮಹಿಳಾ ಮತ್ತು ತೃತೀಯಲಿಂಗ ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದು ನಿಷೇಧಿಸಿದ (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ).
Exit mobile version