ಬೆಂಗಳೂರು: ನಗರದ ಅಭಿವೃದ್ಧಿಗೆ ಆಯಾ ಇಲಾಖೆಯೊಂದಿಗೆ ಸಮನ್ವಯ ಹೊಂದುವುದು ಬಹಳ ಮುಖ್ಯ. ಆದರೆ ಸಮನ್ವಯದ ಕೊರತೆಯಿಂದಾಗಿ ಐಟಿಬಿಟಿ ಸಿಟಿ ಬೆಂಗಳೂರು ತನ್ನ ಮಾರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಕಳೆದುಕೊಳ್ಳುವ ಸನ್ನಿವೇಶ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಸಂದರ್ಭದಲ್ಲಿ ಎದುರಾಗಿತ್ತು. ಇಷ್ಟೆಲ್ಲ ಆದ ನಂತರ ಎಚ್ಚೆತ್ತಿರುವ ಅಧಿಕಾರಿಗಳು ಎಲ್ಲ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ | ಪ್ರತಿವಾರ 3,000 ರಸ್ತೆ ಗುಂಡಿ ಪ್ರತ್ಯಕ್ಷ: ಅಧಿಕಾರಿಗಳ ತಪ್ಪು ಮಾಹಿತಿ ಎಂದ ಬಿಬಿಎಂಪಿ
ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಸಂದರ್ಭದಲ್ಲಿ ಹಾಕಿದ ಡಾಂಬಾರು ಕಿತ್ತು ಬಂದ ಹಿನ್ನೆಲೆ ಬಿಬಿಎಂಪಿಯಿಂದ ಎಲ್ಲ ಇಲಾಖೆಗಳ ಜೊತೆ ಸಮನ್ವಯ ಸಭೆಯನ್ನು ಸೋಮವಾರ ನಡೆಸಲಾಯಿತು. ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಗಾರ ರಾಕೇಶ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಿದರು. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಬಿಎಂಆರ್‌ಸಿಎಲ್‌ನ ಎಂ.ಡಿ.ಅಂಜುಮ್ ಫರ್ವೇಜ್, BWSSB, ಬಿಡಿಎ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಸರಿಯಾದ ಸಂವಹನ ಏಕೆ ಸಾಧ್ಯವಾಗುತ್ತಿಲ್ಲ ಎಂದು ಎಲ್ಲ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಅವರು, ಪ್ರತಿ ಸೋಮವಾರ ಸಭೆ ಸೇರಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸೂಚನೆ ನೀಡಿದರು. ರಸ್ತೆ ಗುಂಡಿ ಮುಚ್ಚದ ಕಾರಣ ಪ್ರಧಾನಿ ಕಚೇರಿಯಿಂದ ವರದಿ ಕೇಳಿ ಸೂಚನೆ ಬಂದಿದೆ. ನಾವು ಅವರಿಗೆ ಏನು ವರದಿ ಕೊಡುವುದು? ಎಂದು ಅಧಿಕಾರಿಗಳ ಮೇಲೆ ಗರಂ ಆದ ಘಟನೆಯೂ ನಡೆಯಿತು.
ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯ ಮಂತ್ರಿಗಳು ನೀಡಿದ ಸೂಚನೆ ಮೇರೆಗೆ ಸಭೆ ನಡೆಸಲಾಗಿದೆ. ಪ್ರತಿ ಸೋಮವಾರ ಎಲ್ಲ ಇಲಾಖೆಯವರು ಸೇರಿ ಸಮನ್ವಯ ಸಭೆ ನಡೆಸಲಾಗುತ್ತದೆ. ನಗರದಲ್ಲಿ ಮಳೆ ಬಂದಾಗ ವಾಟರ್ ಲಾಗಿಂಗ್ ಆಗುವ 54 ಸ್ಥಳಗಳ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಹೇಳಿದರು.
ಹೆಬ್ಬಾಳ, ಕೆ.ಆರ್. ಪುರಂ ಜಂಕ್ಷನ್, ಗೊರಗುಂಟೆ ಪಾಳ್ಯದಲ್ಲಿನ ಟ್ರಾಫಿಕ್ ನಿಯಂತ್ರಣ ಬಗ್ಗೆಯು ಸಭೆಯಲ್ಲಿ ಚರ್ಚೆ ನಡೆದಿದೆ. ಈ ಭಾಗದಲ್ಲಿ ಟ್ರಾಫಿಕ್ ತಡೆಗಟ್ಟಲು ತಾತ್ಕಾಲಿಕ ಹಾಗೂ ಶಾಶ್ವತ ಕ್ರಿಯಾ ಯೋಜನೆ ಮಾಡಲಾಗುವುದು. ಜೂನ್ 27ರ ರಾತ್ರಿ 11 ಗಂಟೆಗೆ ಪೊಲೀಸ್ ಇಲಾಖೆಯೊಂದಿಗೆ ತಪಾಸಣೆ ಮಾಡಲಿದ್ದೇವೆ. ನಗರದಲ್ಲಿ ಸುಲಲಿತ ಸಂಚಾರಕ್ಕೆ ಪೊಲೀಸ್ ಇಲಾಖೆಗೆ ಬೇಕಿರುವ ಸಹಕಾರ ಬಿಬಿಎಂಪಿ ನೀಡಲಿದೆ ಎಂದರು.
ಪ್ರಧಾನ ಮಂತ್ರಿ ಕಾರ್ಯಾಯಾಲಕ್ಕೆ ವರದಿ ಸಲ್ಲಿಕೆ
ರಸ್ತೆ ಗುಂಡಿ ವಿಚಾರವಾಗಿಯು ಚರ್ಚೆ ನಡೆಸಲಾಗಿದ್ದು, ಪೊಲೀಸರಿಂದ ರಸ್ತೆ ಗುಂಡಿ ಸಂಬಂಧ ಪಟ್ಟಿಯೊಂದನ್ನು ಕೊಟ್ಟಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು. ಇವತ್ತಿನವರೆಗೂ ಬಿಬಿಎಂಪಿ ಪ್ರಕಾರ 1,000 ಕ್ಕೂ ಹೆಚ್ಚು ರಸ್ತೆ ಗುಂಡಿಗಳಿವೆ. ಆದರೆ ಪೊಲೀಸ್ ಇಲಾಖೆ ಪ್ರಕಾರ 2,000 ಗುಂಡಿಗಳಿವೆ ಎನ್ನುತ್ತಿದ್ದಾರೆ. ಹೀಗಾಗಿ ಇದರ ಮಾಹಿತಿಯನ್ನೂ ನೀಡುವಂತೆ ಹೇಳಿದ್ದೇವೆ ಎಂದರು. ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಈಗಾಗಲೇ ವರದಿ ಕಳಿಸಿದ್ದೇವೆ. ಯಾವ ಗುಂಡಿಯ ವಿಚಾರವಾಗಿ ಟ್ವೀಟ್ ಆಗಿತ್ತೊ, ಆ ವಿಚಾರವಾಗಿ ಮಾತ್ರ ವರದಿ ಕಳಿಸಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸಾಗುವ ಹಾದಿಯುದ್ದಕ್ಕೂ ಹೊಸದಾಗಿ ಡಾಂಬರ್ ಹಾಕಲಾಗಿತ್ತು. ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮುಂಭಾಗ ಇರುವ ರಸ್ತೆಗೆ ಹಾಕಿದ್ದ ಡಾಂಬರ್ ಒಂದೇ ದಿನಕ್ಕೆ ಕಿತ್ತು ಹೋಗಿತ್ತು. ಬಿಬಿಎಂಪಿ ಅಧಿಕಾರಿಗಳು ಮತ್ತೊಮ್ಮೆ ರಸ್ತೆ ಗುಂಡಿ ಮುಚ್ಚಿದರೂ ಕೆಳಭಾಗದ ಲೀಕೇಜ್‌ನಿಂದ ಮತ್ತೆ ರಸ್ತೆ ಹಾಳಾಗಿತ್ತು.
ಈ ವಿಚಾರವಾಗಿ ಪ್ರತಿಕ್ರಿಯಿಸಿ ಆಯುಕ್ತರು, ಕಳೆದ ನವೆಂಬರ್ 2021ರಲ್ಲಿ ಆ ರಸ್ತೆ ನಿರ್ಮಾಣ ಮಾಡಲಾಗಿತ್ತು, ನಂತರ ಅಲ್ಲಿ ಸೀಪೇಜ್ ಕಂಡು ಬಂದಿತ್ತು. ಈಗ ಅದು ಹೆಚ್ಚಾಗಿದೆ. ಈ ಹಿನ್ನೆಲೆ ನೋಡಿದಾಗ ಅಲ್ಲಿ ಹಳೆ ಕಾಲದ ಒಂದು ವಾಟರ್ ಲೈನ್ ಇರುವುದು ಕಂಡು ಬಂದಿದೆ. ಪ್ರಧಾನಿ ಮೋದಿ ಬಂದಾಗ ನಾವು ಆ ರಸ್ತೆ ಡಾಂಬರ್ ಮಾಡಿಲ್ಲ. ಅದು ಪಿಎಂ ಓಡಾಡಿದ ಪಕ್ಕದ ರಸ್ತೆ ಆಗಿತ್ತು. ಆ ಜಾಗ ಸಿಂಕ್ ಆಗುತ್ತಿತ್ತು ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಅದನ್ನು ಮುಚ್ಚಲಾಗಿತ್ತು. ಮರಿಯಪ್ಪನ ಪಾಳ್ಯದಲ್ಲಿ ಎರಡು ಕಡೆ ಚಕ್ಕೆ ರೀತಿ ಬಂದಿರುವುದು ಬೇರೆ ರಸ್ತೆಯಲ್ಲಿ ಹೀಗಾಗಿ, ಪಿಎಂ ಕಚೇರಿಯಿಂದ ಕೇಳಿದ ರಸ್ತೆ ಬಗ್ಗೆ ಹಾಗೂ ಈ ರಸ್ತೆ ಪಕ್ಕದಲೇ ಕಾರ್ ಹೋಗಿತ್ತು, ಸಿಂಕ್ ಆಗಿತ್ತು ಎಂಬ ವರದಿಯನ್ನು ಕಳಿಸಿದ್ದೇವೆ ಎಂದರು.
ಇದನ್ನೂ ಓದಿ | ರಾತ್ರಿಯಿಡೀ ರಸ್ತೆ ಗುಂಡಿ ಮುಚ್ಚಿಸಿದ BBMP ಮುಖ್ಯ ಆಯುಕ್ತ