ಬೆಂಗಳೂರು: 2020 ಮತ್ತು 2021ರಲ್ಲಿ ಇಡೀ ಜಗತ್ತನ್ನು ಕಾಡಿದ ಕೋವಿಡ್ 19ನ (Covid 19 Enquiry) ಪಶ್ಚಾತ್ ಕಂಪನಗಳು ಈಗ ಬೆಂಗಳೂರಿನ ಬಿಬಿಎಂಪಿ ಅಧಿಕಾರಿಗಳನ್ನು (BBMP officers) ಕಾಡಲು ಶುರುವಾಗಿದೆ. ಆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ನೇಮಕಗೊಂಡಿರುವ ತನಿಖಾ ತಂಡ (Covid scam) ಈಗ ಎಲ್ಲ ದಾಖಲೆಗಳನ್ನು ಕೇಳುತ್ತಿದೆ.
ಕೊರೊನಾ ಉತ್ತುಂಗ ಸ್ಥಿತಿಯಲ್ಲಿದ್ದಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕೋವಿಡ್ ಸೋಂಕಿತರನ್ನು ಕ್ವಾರಂಟೈನ್ ಮಾಡುವುದು, ಸೋಂಕಿತರು ವಾಸಿಸುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಸೀಲ್ ಮಾಡುವುದು, ಸೋಕಿಂತರಿಗಾಗಿ ಹೆಲ್ತ್ ಕೇರ್ ಸೆಂಟರ್ ವ್ಯವಸ್ಥೆ ಮಾಡುವುದು.. ಹೀಗೆ ಆರೋಗ್ಯ ರಕ್ಷಣೆಗಾಗಿ ಸುಮಾರು 1500 ಕೋಟಿ ರೂ. ಖರ್ಚು ಮಾಡಿದೆ. ಇದೀಗ ಸಾವಿರಾರು ಕೋಟಿ ರೂ. ವ್ಯವಹಾರದ ತನಿಖೆಯನ್ನು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಕೈಗೆತ್ತಿಕೊಂಡಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಡಾ ಕೆ ಸುಧಾಕರ್ ಆರೋಗ್ಯ ಮಂತ್ರಿಯಾಗಿದ್ದಾಗ ಕೋವಿಡ್ ಹಗರಣ ಬಹಳ ದೊಡ್ಡ ಸುದ್ದಿ ಮಾಡಿತ್ತು. ಹಿಂದಿನ ಸರ್ಕಾರದಲ್ಲಿ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಸಾರ್ವಜನಿಕ ಹಣ ದುರುಪಯೋಗದ ಆರೋಪ ಕೇಳಿಬಂದಿತ್ತು.
ಅದೀಗ ಮತ್ತೆ ಸುದ್ದಿಯಲ್ಲಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಟೈಮ್ ನಲ್ಲಿ ಮಾಡಲಾದ ಖರ್ಚು ವೆಚ್ಚದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಎಲ್ಲದಕ್ಕೂ ಲೆಕ್ಕ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲ ಅಲೆಯಲ್ಲಿ ಒಂದು ಏರಿಯಾ ಕಂಟೈನ್ಮೆಂಟ್ ಮಾಡಲು ದಿನಕ್ಕೆ 40 ಲಕ್ಷದವರೆಗೂ ಖರ್ಚು ಮಾಡಿದ್ದು, ಒಟ್ಟಾರೆಯಾಗಿ ಕಂಟೈನ್ಮೆಂಟ್ ಜೋನ್‌ಗೆ ಸುಮಾರು 300 ಕೋಟಿ ಕೋಟಿಯಷ್ಟು ಖರ್ಚು ಮಾಡಲಾಗಿದೆ.
ಇತ್ತ ಹೆಲ್ತ್ ಕೇರ್ ಸೆಂಟರ್ ನಿರ್ಮಾಣಕ್ಕೆ, ಬೆಡ್ ಹಾಗೂ ಆಕ್ಸಿಜನ್ ಗೆ ಸುಮಾರು 500 ಕೋಟಿ ಖರ್ಚು ಮಾಡಲಾಗಿತ್ತು. ಸ್ಯಾನಿಟೈಸೇಷನ್, ಮಾಸ್ಕ್, ಊಟ, ಹೋಟೆಲ್ ಕ್ವಾರಂಟೈನ್ ಗೆಲ್ಲ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಎಲ್ಲಾ ಸೇರಿ ಸುಮಾರು ಒಂದೂವರೆ ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಕೋವಿಡ್ ಟೈಮ್ ಎಂಬ ನೆಪದಲ್ಲಿ ಒಂದಕ್ಕೆ ಮೂರು ಪಟ್ಟು ಖರ್ಚು ಮಾಡಲಾಗಿದೆ. ಇದೀಗ ಅದೇ ಅಧಿಕಾರಿಗಳಿಗೆ ಕಂಟಕವಾಗುವ ಸಾಧ್ಯತೆಯಿದೆ.
ವಾಸ್ತವಿಕ ದರಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ದರ ನೀಡಿರುವ ಕಾರಣ ಅಧಿಕಾರಿಗಳು ದಾಖಲೆಗಳನ್ನು ನೀಡಲು ಕಷ್ಟಪಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ನೋಟೀಸ್ ನೀಡಿರುವ ತನಿಖಾ ಸಮಿತಿ ಎಲ್ಲಾ ಮೂಲ ದಾಖಲೆ ನೀಡುವಂತೆ ಸೂಚನೆ ನೀಡಿದೆ. ಬಿಬಿಎಂಪಿ ಅಧಿಕಾರಿಗಳು ಹೆಚ್ಚಿನ ದರದಲ್ಲಿ ನೀಡಲಾದ ಗುತ್ತಿಗೆ ಬಗ್ಗೆ ಹೇಗೆ ಮಾಹಿತಿ ನೀಡೋದು ಅಂತಾ ತಲೆ ಕೇಡಿಸಿಕೊಂಡಿದ್ದಾರೆ.