Site icon Vistara News

Bengaluru bandh : ಅನಿಲ್‌ ಕುಂಬ್ಳೆಗೂ ತಟ್ಟಿದ ಬಂದ್‌ ಬಿಸಿ; ವಿಮಾನ ನಿಲ್ದಾಣದಿಂದ ಬಸ್ಸಿನಲ್ಲೇ ಮನೆಗೆ ತೆರಳಿದ ಕ್ರಿಕೆಟರ್

Anil kumble in BMTC Bus

ದೇವನಹಳ್ಳಿ:‌ ಖಾಸಗಿ ಪ್ರಯಾಣಿಕರ ವಾಹನಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್‌ (Bengaluru bandh) ಬಿಸಿ ಖ್ಯಾತ ಕ್ರಿಕೆಟಿಗ ಅನಿಲ್‌ ಕುಂಬ್ಳೆ (Cricketer Anil kumble) ಅವರಿಗೂ ತಟ್ಟಿದೆ.

ಸೋಮವಾರ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bangalore Airport) ಬಂದು ಇಳಿಯುತ್ತಿದ್ದಂತೆಯೇ ಅವರಿಗೆ ಇಲ್ಲಿ ಖಾಸಗಿ ಪ್ರಯಾಣಿಕರ ವಾಹನಗಳ ಬಂದ್‌ ಬಗ್ಗೆ ಮಾಹಿತಿ ಸಿಕ್ಕಿದೆ. ಯಾವುದೇ ಆಪ್‌ ಆಧರಿತ ಇಲ್ಲವೇ ಖಾಸಗಿ ವಾಹನಗಳ ಸೇವೆ ಸಿಗುವುದಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಅವರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಸರ್ಕಾರಿ ಬಸ್‌ನ್ನೇ ಹತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿಯಾಗಿರುವ ಅವರು ಬಸ್‌ ಪ್ರಯಾಣದ ವಿಚಾರವನ್ನು ತಾವೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ವಿಮಾನ ನಿಲ್ದಾಣದಿಂದ ಮನೆಗೆ ಬರುವ ವೇಳೆ ಬಿಎಂಟಿಸಿಯಲ್ಲಿ ಪ್ರಯಾಣಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌, ಮಾಜಿ ಕೋಚ್‌ ಮತ್ತು ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಅನಿಲ್‌ ಕುಂಬ್ಳೆ ಅವರು ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಟ್ಯಾಕ್ಸಿ ಸಿಗದೆ ಬಸ್‌ನಲ್ಲಿ ಪ್ರಯಾಣಿಸಿದ್ದು ಈಗ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ. ಇದರೊಂದಿಗೆ ಬೆಂಗಳೂರಿನ ಖಾಸಗಿ ಪ್ರಯಾಣಿಕ ವಾಹನಗಳ ಪ್ರತಿಭಟನೆಯೂ ಸದ್ದು ಮಾಡಿದೆ.

ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ಹಿನ್ನೆಲೆಯಲ್ಲಿ ತಮಗೆ ಭಾರಿ ನಷ್ಟವಾಗಿದೆ. ಹೀಗಾಗಿ ತಮಗೂ ಗ್ಯಾರಂಟಿ ಪ್ಯಾಕೇಜ್‌ ಕೊಡಬೇಕು ಎಂಬ ಪ್ರಧಾನ ಬೇಡಿಕೆಯೊಂದಿಗೆ ಈ ಪ್ರತಿಭಟನೆ ನಡೆಯುತ್ತಿದೆ. ಕಳೆದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡ ಬಳಿಕ ಮುಷ್ಕರ ನಡೆಯುತ್ತಿದೆ.

ಸುಮಾರು 32 ಒಕ್ಕೂಟಗಳು ಬಂದ್‌ಗೆ ಕರೆ ನೀಡಿದ್ದು, ಬಹುತೇಕ ಯಶಸ್ವಿಯಾಗಿದೆ. ಈ ನಡುವೆ, ಕೆಲವು ಕಡೆ ಬಂದ್‌ ಕರೆಯನ್ನು ಮೀರಿ ಸಂಚರಿಸಿದ ವಾಹನಗಳ ಮೇಲೆ ಕಲ್ಲು ತೂರಾಟ ಗೂಂಡಾಗಿರಿ ಕೂಡಾ ನಡೆಸಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಬಿಡಲು ಹೋದವರು, ಅಲ್ಲಿಂದ ಪ್ರಯಾಣಿಕರನ್ನು ಕರೆತಂದವರ ಮೇಲೆ ಹಲ್ಲೆ ನಡೆಸಿದೆ.

ಇಂಥ ಗೂಂಡಾಗಿರಿಯನ್ನು ತಡೆಯಬೇಕು ಎಂದು ಔಟರ್‌ ರಿಂಗ್‌ ರೋಡ್‌ ಕಂಪನಿಸ್‌ ಅಸೋಸಿಯೇಷನ್‌ ಸರ್ಕಾರವನ್ನು ಒತ್ತಾಯಿಸಿದೆ. ಇದು ಹೊರ ವರ್ತುಲ ರಸ್ತೆಯಲ್ಲಿರುವ ಸಾಫ್ಟ್‌ವೇರ್‌ ಕಂಪನಿಗಳ ಒಕ್ಕೂಟವಾಗಿದೆ. ಬಂದ್‌ ಅನ್ನು ಗೂಂಡಾಗಿರಿಯ ಮೂಲಕ ಜಾರಿಗೊಳಿಸುವುದರ ವಿರುದ್ಧ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Bengaluru bandh : ಬಂದ್‌ ಹೆಸರಲ್ಲಿ ಗೂಂಡಾಗಿರಿ; ಟೆಕ್ಕಿಗಳು, ಜನರ ಆಕ್ರೋಶ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಅವಾಸ್ತವಿಕ ಬೇಡಿಕೆ ಎಂದ ಸಿದ್ದರಾಮಯ್ಯ

ರಾಷ್ಟ್ರಮಟ್ಟದ ಗಮನ ಸೆಳೆದ ಖಾಸಗಿ ಪ್ರಯಾಣಿಕರ ವಾಹನಗಳ ಒಕ್ಕೂಟದ ಬಂದ್‌ ಕರೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ವಾಹನಗಳ ಮಾಲೀಕರ ಒಕ್ಕೂಟ ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಡುತ್ತಿದೆ ಎಂದು ಅವರು ಮೈಸೂರಿನಲ್ಲಿ ಹೇಳಿದರು.

ʻʻಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಯೋಜನೆ ರೂಪಿಸಿದ್ದೇವೆ. ಖಾಸಗಿ ಬಸ್‌ನವರು ಶಕ್ತಿ ಯೋಜನೆಯಿಂದ ನಮಗೆ ನಷ್ಟ ಆಗುತ್ತಿದೆ, ಹಣ ಕೊಡಿ ಅಂತ ಕೇಳುತ್ತಿದ್ದಾರೆ. ಅದೆಲ್ಲ ಸಾಧ್ಯವೇ ?ʼʼ ಎಂದು ಪ್ರಶ್ನಿಸಿದ ಅವರು, ಬಂದ್ ಮಾಡುವುದು, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಜೀವಾಳ. ಬಂದ್ ಹಕ್ಕಿಕ್ಕಲು ಅವಕಾಶ ಇಲ್ಲ. ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿ. ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಗಮನ ಹರಿಸುತ್ತಾರೆʼʼ ಎಂದು ಸಿದ್ದರಾಮಯ್ಯ ಹೇಳಿದರು.

Exit mobile version