Site icon Vistara News

Criminal Politics | ರೌಡಿಗಳ ಪಕ್ಷ ಸೇರ್ಪಡೆ; ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ ಎನ್‌. ರವಿಕುಮಾರ್‌ 16 ಪ್ರಶ್ನೆ

Criminal Politics

ಬೆಂಗಳೂರು: ರೌಡಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ, ಅದು ನಮ್ಮ ಸಂಸ್ಕೃತಿ ಅಲ್ಲ (Criminal Politics) ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಸ್ಪಷ್ಟಪಡಿಸಿದ್ದರೂ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪದೇಪದೆ ನಾಲಿಗೆ ಹರಿಯಬಿಡುತ್ತಿದ್ದಾರೆ. ಚರ್ಚೆಯನ್ನು ಮುಂದುರಿಸುವ ಮುನ್ನ ಈ ಇಬ್ಬರೂ ಮಹಾನ್ ಸುಳ್ಳುಗಾರ ನಾಯಕರು ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ ನಾಯಕರಿಗೆ ಎನ್‌.ರವಿಕುಮಾರ್‌ 1೬ ಪ್ರಶ್ನೆಗಳನ್ನು ಹಾಕಿ, ಅವುಗಳಿಗೆ ಉತ್ತರಿಸಿದ ಬಳಿಕ ರೌಡಿಗಳ ಪಕ್ಷ ಸೇರ್ಪಡೆ ಕುರಿತು ಚರ್ಚೆಗೆ ಬರುವಂತೆ ಹೇಳಿದ್ದಾರೆ

  1. ದೇವರಾಜ್ ಅರಸು ಕಾಲದಲ್ಲಿ ಅಂದಿನ ಭೂಗತ ರೌಡಿಗಳೊಂದಿಗೆ ಪವಿತ್ರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತು ಪೊಲೀಸರಿಂದ ಎಳನೀರು ತರಿಸಿ ಕೊಡುತ್ತಿದ್ದವರು ಯಾವ ಪಕ್ಷದಲ್ಲಿದ್ದರು ಎಂದು ಹೇಳಬಹುದೇ ಸಿದ್ದರಾಮಯ್ಯನವರೇ?
  2. ಯಲಹಂಕದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಅವರನ್ನು ಸೋಲಿಸಲು ಆಗುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಮನೆಯಲ್ಲೇ ಕುಳಿತು ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೊ ಬಿಡುಗಡೆ ಆಗಿದ್ದರ ಬಗ್ಗೆ ಏನು ಹೇಳುತ್ತೀರಿ ಸಿದ್ದರಾಮಯ್ಯನವರೇ?
  3. ಯಾರೋ ಕೆಲವರು ಕಾಂಗ್ರೆಸ್ ಪಕ್ಷದ ಬ್ಯಾನರ್ ಹರಿದು ಹಾಕಿದಾಗ, ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೀದಿ ರೌಡಿಯ ರೀತಿ ತಾವು ಆವಾಜ್ ಹಾಕಿದ್ದು ಯಾವ ಸಂಸ್ಕೃತಿ ಡಿ.ಕೆ. ಶಿವಕುಮಾರ್‌ರವರೇ?
  4. ಟಿಪ್ಪು ಕುರಿತು ನಿಮ್ಮ ಕುರುಡು ಪ್ರೇಮವನ್ನು ಖಂಡಿಸಿ ಕೊಡಗಿನ ಜನ ನಿಮ್ಮ ಕಾರಿಗೆ ಕಲ್ಲು ಹೊಡೆದಾಗ ಅದಕ್ಕೆ ಪ್ರತೀಕಾರವಾಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ತಾವು ಹೇಳಿದ್ದು ರೌಡಿ ಸಂಸ್ಕೃತಿಯ ಲಕ್ಷಣ ಅಲ್ಲವೇ ಸಿದ್ದರಾಮಯ್ಯನವರೇ?
  5. ಕರ್ನಾಟಕ ಕಾಂಗ್ರೆಸ್‌ ಯುವ ಘಟಕದ ಈಗಿನ ಅಧ್ಯಕ್ಷರು ತಮ್ಮ ಗ್ಯಾಂಗ್ ಜತೆ ಸೇರಿಕೊಂಡು ಒಬ್ಬ ಪಾಪದ ಹುಡುಗನಿಗೆ ಹಿಗ್ಗಾ ಮುಗ್ಗಾ ಬಡಿದಿದ್ದನ್ನು ಇಡೀ ರಾಜ್ಯ ನೋಡಿರುವುದು ಸುಳ್ಳು ಎನ್ನುತ್ತೀರೇ ಡಿ.ಕೆ. ಶಿವಕುಮಾರ್‌ರವರೇ?
  6. ಪ್ರತಿಭಟನೆ ಮಾಡೋಕೆ ಬಂದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ನಿಮ್ಮ ಪರಮಾಪ್ತ ಶಾಸಕ ರಮೇಶ್ ಕುಮಾರ್ ಹೇಳಿದ್ದು, ತಾವು ಓದಿದ ಪ್ರಜಾಪ್ರಭುತ್ವದ ಯಾವ ಪುಸ್ತಕದ ಯಾವ ಹಾಳೆಯಲ್ಲಿದೆ ತಿಳಿಸಬಹುದೇ ಸಿದ್ದರಾಮಯ್ಯನವರೇ?
  7. ಅಖಿಲ ಭಾರತ ಕಾಂಗ್ರೆಸ್ ಘಟಕದ ಅಧ್ಯಕ್ಷರು ದೆಹಲಿಗೆ ಓಡಿಹೋಗಿ ಅವಿತುಕೊಳ್ಳುವುದಕ್ಕೂ ಮೊದಲು ಯಾವ ಸಾಮಾಜಿಕ ಸೇವೆಗಳಲ್ಲಿ ತೊಗಿಸಿಕೊಂಡಿದ್ದರು ಎನ್ನುವುದು ತಮಗೆ ತಿಳಿದಿಲ್ಲವೇ ಡಿ.ಕೆ. ಶಿವಕುಮಾರ್‌ರವರೇ?
  8. ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್‌ನ ಕುಖ್ಯಾತ ರೌಡಿ ಇಲ್ಯಾಸ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಅಷ್ಟೇ ಅಲ್ಲದೆ ಶಾಸಕ ಯು.ಟಿ.ಖಾದರ್ ಆಪ್ತ ಹೌದೋ ಅಲ್ಲವೋ ಉತ್ತರಿಸಬಹುದೇ ಸಿದ್ದರಾಮಯ್ಯನವರೇ?
  9. ಮೂಡುಬಿದರೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮ್ಮ ಶಿಷ್ಯ ಮಿಥುನ್ ರೈ ಹಿನ್ನೆಲೆ ಏನು ಎಂದು ತಿಳಿಸಬಹುದೇ ಡಿ.ಕೆ. ಶಿವಕುಮಾರ್‌ರವರೇ?
  10. ‘ಬಿಜೆಪಿಯವರು ಯಾರೂ ಕ್ಷೇತ್ರದಲ್ಲಿ ಓಡಾಡದ ಹಾಗೆ ಮಾಡ್ತೀನಿ’ ಎಂದು ತಮ್ಮ ಸಂವಹನ ವಿಭಾಗದ ಮುಖ್ಯಸ್ಥ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿರುವುದು ಭಗವಾನ್ ಬುದ್ಧರ ಅದ್ಯಾವ ಉಪದೇಶದಲ್ಲಿ ಇದೆ ಹೇಳು ಎಂದು ಪ್ರಶ್ನೆ ಮಾಡಿದ್ದೀರಾ ಸಿದ್ದರಾಮಯ್ಯನವರೇ?
  11. ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿ ಕಾರ್ಪೊರೇಟರ್ ಮಾಡಿದ್ದ ಕೆ. ಎಸ್. ಸಮಿವುಲ್ಲಾ ಹಿನ್ನೆಲೆ ಏನು ಎಂದು ಸ್ವಲ್ಪ ತಮ್ಮ ಬಾಯಿಂದಲೇ ಹೇಳಬಹುದೇ ಡಿ.ಕೆ. ಶಿವಕುಮಾರ್‌ರವರೇ?
  12. ಸ್ವತಃ ತಾವೇ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸೀಮಾ ಅವರ ಗಂಡ ಹಾಗೂ ಕೆಪಿಸಿಸಿ ಲೇಬರ್ ಸೆಲ್ ಸದಸ್ಯ ಅಲ್ತಾಫ್ ಖಾನ್ ಒಬ್ಬ ರೌಡಿ ಶೀಟರ್ ಅಷ್ಟೇ ಅಲ್ಲದೇ ತಮ್ಮ ಶಿಷ್ಯ ಜಮೀರ್ ಅಹಮ್ಮದ್ ಖಾನ್ ಅವರ ಅತ್ಯಾಪ್ತ ಎನ್ನುವುದು ಗೊತ್ತಿಲ್ಲವೇ ಸಿದ್ದರಾಮಯ್ಯನವರೇ?
  13. ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್‌ ಜತೆ ರೌಡಿ ಶೀಟರ್‌ಗಳು ಪೋಸ್ ಕೊಟ್ಟು ಏರಿಯಾದಲ್ಲೆಲ್ಲ ಪೋಸ್ಟರ್ ಅಂಟಿಸಿಕೊಳ್ಳುತ್ತಾರಲ್ಲ, ಅದು ಯಾವ ಜನಸೇವೆ ಎನ್ನುವುದನ್ನು ತಿಳಿಸಬಲ್ಲಿರಾ ಡಿ.ಕೆ. ಶಿವಕುಮಾರ್‌ರವರೇ?
  14. ತಾವು ಟಿ. ನರಸೀಪುರ ಶಾಸಕನನ್ನಾಗಿ ಮಾಡಲು ಹೊರಟಿರುವ ಸುನಿಲ್ ಬೋಸ್ ಎಂಬ ಕಾಂಗ್ರೆಸ್ ನಾಯಕನ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಕೇಸ್ ಬುಕ್ ಆಗಿತ್ತು ಎನ್ನುವುದು ಮರೆತು ಹೋಗಿದೆಯೇ ಸಿದ್ದರಾಮಯ್ಯನವರೇ?
  15. ಕಾಂಗ್ರೆಸ್ ಮಾಜಿ ಮಂತ್ರಿ ಮತ್ತು ಶಾಸಕ ವಿನಯ್ ಕುಲಕರ್ಣಿ ಇನ್ನೂ ಯಾವ ಕಾರಣಕ್ಕಾಗಿ ಕೋರ್ಟ್‌ಗೆ ಅಲೆಯುತ್ತಿದ್ದಾರೆ? ಯಾವ ಸಮಾಜ ಸೇವೆಯನ್ನು ಮಾಡಿದ ಘನಾಂಧಾರಿ ಕೆಲಸಕ್ಕಾಗಿ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಬಹುದೇ ಡಿ.ಕೆ. ಶಿವಕುಮಾರ್‌ರವರೇ?
  16. ತಮ್ಮ ಆಪ್ತ ಮಾಜಿ ಸಚಿವ ಕೆ.ಜೆ. ಜಾರ್ಜ್ ಜತೆಯಾಗಿ ಬೆಂಗಳೂರು ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡಿದ್ದ ಕುಖ್ಯಾತ ರೌಡಿ ‘ಬ್ರಿಗೇಡ್ ಆಝಮ್’ ಕುರಿತು ತಮಗೆ ಮಾಹಿತಿ ಇರಲಿಲ್ಲವೇ ಸಿದ್ದರಾಮಯ್ಯನವರೇ? ಎಂದು ಎನ್‌‌. ರವಿಕುಮಾರ್ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | ಬೊಮ್ಮಾಯುಲ್ಲಾ ಖಾನ್, ಗಡ್ಕರಿ ಶೇಕ್: ಸಿದ್ರಾಮುಲ್ಲಾ ಖಾನ್‌ ಎಂದ ಸಿ.ಟಿ. ರವಿಗೆ ಕಾಂಗ್ರೆಸ್‌ ತಿರುಗೇಟು

Exit mobile version