Site icon Vistara News

Cubbon Park : ‌ತಿಂಗಳ 2, 4ನೇ ಶನಿವಾರ ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಓಡಾಟಕ್ಕೆ ಅವಕಾಶ; ಪರ-ವಿರೋಧ

Cubbon Park Bangalore

ಬೆಂಗಳೂರು: ಬೆಂಗಳೂರು ನಗರದ ಅಸ್ಮಿತೆ ಮತ್ತು ಲ್ಯಾಂಡ್‌ ಮಾರ್ಕ್‌ಗಳಲ್ಲಿ ಒಂದಾದ ಕಬ್ಬನ್ ಪಾರ್ಕ್​ ಉದ್ಯಾನದಲ್ಲಿ (Cubbon Park) ವಾಹನಗಳ ಸಂಚಾರಕ್ಕೆ (Vehicular Movement) ಸಂಬಂಧಿಸಿ ಪೊಲೀಸ್‌ ಇಲಾಖೆ, ತೋಟಗಾರಿಕಾ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಹಿಂದೆ ಇಲ್ಲಿ ಎಲ್ಲಾ ಶನಿವಾರ ಮತ್ತು ಭಾನುವಾರ, ಸರ್ಕಾರಿ ರಜಾ ದಿನಗಳಂದು ವಾಹನ ಸಂಚಾರಕ್ಕೆ ನಿಬಂಧವಿತ್ತು. ಇನ್ನು ಮುಂದೆ ತಿಂಗಳ 2 ಮತ್ತು 4ನೇ ಶನಿವಾರ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ 8 ರಂದು ತೋಟಗಾರಿಕಾ ಇಲಾಖೆ (Horticulture Department) ಆದೇಶ ನೀಡಿದೆ.

ಕಬ್ಬನ್‌ ಪಾರ್ಕ್‌ನ ಒಳಗಡೆ ಸಾಗುವ ರಸ್ತೆಯು ಬೆಂಗಳೂರಿನ ಹಲವು ಭಾಗಗಳಿಗೆ ಸಂಪರ್ಕ ಕೊಂಡಿಯಾಗಿದೆ. ಹೀಗಾಗಿ ಇಲ್ಲಿ ಓಡಾಡಲು ಅವಕಾಶ ನೀಡಿರುವುದು ವಾಹನಿಗರಿಗೆ ಸಂತಸವನ್ನು ತಂದಿದೆ. ಆದರೆ, ಈ ರೀತಿಯ ಸಾರ್ವಜನಿಕ ಓಡಾಟವು ಪರಿಸರಕ್ಕೆ ಮಾರಕ, ರಜಾದಿನಗಳಂದು ಅಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಬರುವ ನಡಿಗೆದಾರರು, ಪರಿಸರ ಪ್ರೇಮಿಗಳಿಗೆ ತೊಂದರೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

ಹೊಸ ಆದೇಶದ ಪ್ರಕಾಋ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಸುಗಮ ಸಂಚಾರಕ್ಕಾಗಿ ಕಬ್ಬನ್ ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್​ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

Cubbon Park Bangalore1

ಯಾವ ಕಾರಣಕ್ಕಾಗಿ ಮತ್ತೆ ಸಂಚಾರಕ್ಕೆ ಅವಕಾಶ?

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್​ನ ನೂರಕ್ಕೂ ಹೆಚ್ಚು ​​ಸದಸ್ಯರು ಮತ್ತು ಕಬ್ಬನ್ ಪಾರ್ಕ್‌ಗೆ ನಿತ್ಯ ಭೇಟಿ ನೀಡುವವರು ಪಾರ್ಕ್​ನೊಳಗೆ ಸಂಚಾರಕ್ಕೆ ಅವಕಾಶ ನೀಡುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೀಗಾಗಿ 2023 ರ ಅಕ್ಟೋಬರ್​​​ನಲ್ಲಿ ಪಾರ್ಕ್​ನೊಳಗೆ ಸಂಚಾರಕ್ಕೆ ಅವಕಾಶ ನಿಷೇಧಿಸಲಾಗಿತ್ತು. ಕೆಲವು ವರ್ಷಗಳಿಂದ ಕಬ್ಬನ್ ಪಾರ್ಕ್‌ನೊಳಗೆ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಇತರ ಸಾರ್ವತ್ರಿಕ ರಜಾದಿನಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧಿವಿದೆ.

ಹೊಸ ನಿಯಮದಡಿ ಕಬ್ಬನ್ ಪಾರ್ಕ್ ಒಳಗೆ ಸಂಚಾರಕ್ಕೆ ಅವಕಾಶ ನೀಡುವುದರಿಂದ ಹೊರಗಿನ ರಸ್ತೆಗಳಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಕಬ್ಬನ್ ಪಾರ್ಕ್‌ನೊಳಗೆ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಅನುಚೇತ್ ಹೇಳಿದ್ದಾರೆ.

ಇದನ್ನೂ ಓದಿ : Bandipur National Park: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ: ಈಶ್ವರ ಖಂಡ್ರೆ

Cubbon Park Bangalore1

ವಿರೋಧ ಮಾಡುವವರು ನೀಡುವ ಕಾರಣಗಳೇನು?

  1. ಪಾರ್ಕ್​​ನೊಳಗೆ ಸಂಚಾರಕ್ಕೆ ಅನುವು ಮಾಡಿಕೊಡುವ ಆದೇಶಕ್ಕೆ ಇತ್ತೀಚೆಗೆ ರಚನೆಯಾಗಿರುವ ಕಬ್ಬನ್ ಪಾರ್ಕ್ ಸಂರಕ್ಷಣಾ ಸಮಿತಿಯು ವಿರೋಧ ವ್ಯಕ್ತಪಡಿಸಿದೆ. ವಾಹನ ಸಂಚಾರಕ್ಕೆ ಅನುವುಮಾಡಿಕೊಡುವುದರಿಂದ ಕಬ್ಬನ್ ಪಾರ್ಕ್‌ಗೆ ಬರುವ 3,000, 5,000 ಮಂದಿಗೆ ತೊಂದರೆಯಾಗಲಿದೆ ಎನ್ನುವುದು ಅದರ ಅಭಿಪ್ರಾಯ.
  2. ಕಬ್ಬನ್ ಪಾರ್ಕ್ ನಗರದೊಳಗೆ ಉದ್ಯಾನ ವಿಹಾರಿಗಳಿಗೆ ಓಡಾಡಲು ಪ್ರಮುಖ ಸ್ಥಳವಾಗಿದೆ. ಮತ್ತೊಂದು ಹೋಲಿಕೆ ಮಾಡಬಹುದಾದ ಹಸಿರು ಪ್ರದೇಶವಾದ ಲಾಲ್‌ಬಾಗ್ ವಾಹನ ದಟ್ಟಣೆಯಿಲ್ಲದೆ ಕಾರ್ಯನಿರ್ವಹಿಸಬಹುದಾದರೂ ಕಬ್ಬನ್ ಪಾರ್ಕ್‌ಗೆ ಅದೇ ಸವಲತ್ತು ಏಕೆ ಸಿಗುವುದಿಲ್ಲ ಎಂದು ನಾಗರಿಕರ ಗುಂಪಿನ ಹೆರಿಟೇಜ್ ಬೇಕು ಸಂಸ್ಥಾಪಕಿ ಪ್ರಿಯಾ ಚೆಟ್ಟಿ ರಾಜ್‌ಗೋಪಾಲ್ ಕೇಳುತ್ತಾರೆ.
  3. ‘ಬ್ರ್ಯಾಂಡ್ ಬೆಂಗಳೂರು’ ಪ್ರಚಾರದತ್ತ ಅಧಿಕಾರಿಗಳು ಗಮನಹರಿಸುತ್ತಿರುವುದರಿಂದ, ನಾಗರಿಕರಿಗಿಂತ ವಾಹನಗಳಿಗೆ ಆದ್ಯತೆ ನೀಡುವುದು ಈ ಪರಿಕಲ್ಪನೆಯ ಮೂಲತತ್ವಕ್ಕೆ ವಿರುದ್ಧವಾಗಿದೆ. ನಾಗರಿಕರ ಅಭಿಪ್ರಾಯ ಸಂಗ್ರಹಿಸದೆ ಈ ನಿರ್ಧಾರವನ್ನು ಮಾಡಲಾಗಿದೆ.
  4. ಕಬ್ಬನ್‌ ಪಾರ್ಕ್‌ನಲ್ಲಿ ಛಾಯಾಗ್ರಹಣ ಮತ್ತು ಕ್ಯಾಮೆರಾ ಬಳಕೆಯ ಮೇಲೆ ನಿಷೇಧವಿದೆ. ಆದರೆ, ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದಾರೆ ಅಂದರೆ ಇದು ಹಾಸ್ಯಾಸ್ಪದ.
  5. ಇಂಥ ನಡೆಯು ಉದ್ಯಾನದ ಗಾಳಿಯ ಗುಣಮಟ್ಟ ಮತ್ತು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಅಪಾಯಕ್ಕೆ ತಳ್ಳುತ್ತದೆ.
Exit mobile version