ಬೆಂಗಳೂರು: ಉನ್ನತ ಆದರ್ಶ, ಗುರಿಯನ್ನು ತಲುಪಬೇಕೆಂಬ ಹಂಬಲ ಮಾತ್ರವೇ ಸಾಲದು, ಶಾಶ್ವತವಾದ ಯಶಸ್ಸು ನಮ್ಮದಾಗಬೇಕೆಂದರೆ ಪ್ರಾಮಾಣಿಕ ಪರಿಶ್ರಮ ಇರಬೇಕು ಎಂದು ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್‌ನ ಬಾಲಕಿಯರ ಪಿಯು ಕಾಲೇಜು ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾವೊಂದು ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುತ್ತಿರುತ್ತೇವೆ. ಇಲ್ಲಿ ಒಬ್ಬ ವ್ಯಕ್ತಿಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನನ್ನಲ್ಲಿರುವ ಹಣ, ಗೌರವವನ್ನು ನಾನೊಬ್ಬನೇ ಸಾಧಿಸಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಅದು ಸರಿಯಲ್ಲ. ಎಷ್ಟೇ ಸಂಪತ್ತು ಇದ್ದರೂ ಇನ್ನಾರನ್ನಾದರೂ ಆಶ್ರಯಿಸಲೇಬೇಕು. ಕಡೇ ಪಕ್ಷ ಪ್ರಕೃತಿಯನ್ನಾದರೂ ಆಶ್ರಯಿಸಲೇಬೇಕಾಗುತ್ತದೆ. ನಾನು ಎನ್ನುವುದನ್ನು ಗೌಣ ಮಾಡಿಕೊಂಡು ನಾವು ಎನ್ನುವುದನ್ನು ರೂಢಿಸಿಕೊಳ್ಳಬೇಕು. ಭವಿಷ್ಯದಲ್ಲಿ ನಿಮ್ಮಲ್ಲಿ ಅನೇಕರು ಶಿಕ್ಷಕರು, ಜನಪ್ರತಿನಿಧಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಆಗಬಹುದು. ಈ ಎಲ್ಲ ಸಂದರ್ಭದಲ್ಲೂ ನಾನು ಎನ್ನುವ ಪದ ಪ್ರಯೋಜನಕ್ಕೆ ಬರುವುದಿಲ್ಲ. ನಮ್ಮ ದಿನದ ಆರಂಭ ಹಾಗೂ ಅಂತ್ಯದಲ್ಲೂ ನಾವು ಎನ್ನುವುದನ್ನೇ ರೂಢಿಸಿಕೊಂಡರೆ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ನಮ್ಮ ದೇಶದಲ್ಲಿ ಅನೇಕ ಸವಾಲುಗಳಿವೆ. ಈ ಸವಾಲುಗಳನ್ನು ಮೀರಿ ಸಮಾಜದಲ್ಲಿ ಬದಲಾವಣೆ ಆಗಬೇಕೆಂದರೆ ಎರಡು ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೊದಲನೆಯದು ಶಿಕ್ಷಣ, ಎರಡನೆಯದು ಮಾಧ್ಯಮ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಸಲುವಾಗಿ ಇದೀಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಜಗತ್ತಿನಲ್ಲೇ ಶ್ರೇಷ್ಠ ಗುಣಮಟ್ಟದ ಇಂಜಿನಿಯರ್, ವೈದ್ಯರು, ಆಡಳಿತಗಾರರನ್ನು ಸೃಷ್ಟಿಸಿದ ಭಾರತದಲ್ಲಿ ಇಂದು ಉತ್ತಮ ಮಾನವ ಸಂಪನ್ಮೂಲ ಸಿಗುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರು ಸಿಗುತ್ತಿಲ್ಲ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಇಂಜಿನಿಯರ್ ಸಿಗುತ್ತಿಲ್ಲ, ಆಸ್ಪತ್ರೆಗಳಿಗೆ ಉತ್ತಮ ವೈದ್ಯರು ಸಿಗುತ್ತಿಲ್ಲ. ಇದಕ್ಕೆಲ್ಲ ಕಾರಣ, ಶಿಕ್ಷಣ ಪಡೆದವರಲ್ಲಿ ಬಹುತೇಕರು ನೌಕರಿಯ ಕುರಿತೇ ಆಲೋಚನೆ ಮಾಡುತ್ತಾರೆಯೇ ವಿನಃ ಉದ್ಯಮಿಗಳಾಗಲು ಮುಂದಾಗುವುದೇ ಇಲ್ಲ ಎಂದು ತಿಳಿಸಿದರು.
ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮನ್ನು ನಾಯಕರನ್ನಾಗಿ ರೂಪಿಸುತ್ತಿಲ್ಲ ಎಂದ ಹರಿಪ್ರಕಾಶ್ ಕೋಣೆಮನೆ ಅವರು, ನಾವೆಲ್ಲರೂ ನೌಕರಿಯನ್ನು ಹುಡುಕುವ ಬದಲಿಗೆ ನೌಕರಿಯನ್ನು ನೀಡುವವರಾಗಲು ಸಾಧ್ಯವೇ ಎಂದು ಯೋಚಿಸಬೇಕು ಎಂದರು. ಸಮಸ್ಯೆಗಳ ಕುರಿತು ಮಾತನಾಡುತ್ತ ಕೊರಗುವ ಬದಲಿಗೆ ಸಮಾಜದ ಎಲ್ಲ ಕ್ಷೇತ್ರದಲ್ಲೂ ಉತ್ಕೃಷ್ಟತೆಯನ್ನು ತರಲು ಸಾಧ್ಯವೇ ಎಂದು ಯೋಚಿಸಬೇಕು. ನಾನು ಕೆಲಸಕ್ಕೆ ಸೇರುತ್ತೇನೆ. ದುಡಿಯುತ್ತೇನೆ, ಮನೆ ಕಟ್ಟಿಸುತ್ತೇನೆ, ಕಾರು ಖರೀದಿಸುತ್ತೇನೆ ಎನ್ನುವುದಕ್ಕೇ ನಮ್ಮ ಯೋಚನೆ ಸೀಮಿತವಾಗಬಾರದು ಎಂದರು.
ಓಪನ್ ಡಾಟ್ ಮನಿ ಎಂಬ ಸ್ಟಾರ್ಟಪ್ ಸಂಸ್ಥೆಯನ್ನು ಆರಂಭಿಸಿದ ಅನೀಶ್ ಅಚ್ಯುತನ್ ದಂಪತಿಯ ಕುರಿತು ತಿಳಿಸಿದ ಹರಿಪ್ರಕಾಶ್ ಕೋಣೆಮನೆಯವರು, ಅನೀಶ್ ಅವರು ಎರಡು ಹೊತ್ತಿನ ಊಟಕ್ಕೆ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾಗಿದ್ದ ಅನೀಶ್ ಅಚ್ಯುತನ್, ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಫಲ ಸ್ಟಾರ್ಟಪ್ ಸ್ಥಾಪಿಸಿದ್ದಾರೆ. ಇದು ಭಾರತದ ನೂರನೇ ಯೂನಿಕಾರ್ನ್ ಕಂಪನಿಯಾಗಿದ್ದು, ದೇಶದ ಅನೇಕ ವಾಣಿಜ್ಯ ವ್ಯವಹಾರಗಳನ್ನು ಆನ್‌ಲೈನ್ ಮೂಲಕ ನೀಡಲು ಕಾರಣವಾಗಿದೆ. ಅನೀಶ್ ದಂಪತಿ ಅನೇಕ ಪ್ರಯತ್ನಗಳಲ್ಲಿ ವಿಫಲರಾದರೂ ನಂತರ ಓಪನ್ ಡಾಟ್ ಮನಿಯಲ್ಲಿ ಸಫಲರಾಗಿದ್ದಾರೆ. ಈ ಸಂಸ್ಥೆಯನ್ನು ಭಾರತದ ಪ್ರಧಾನಮಂತ್ರಿಯವರು ಇತ್ತೀಚಿನ ಮನ್ ಕೀ ಬಾತ್‌ನಲ್ಲಿ ಉಲ್ಲೇಖಿಸಿದರು ಎಂದು ಉದಾಹರಣೆ ನೀಡಿದರು.
ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ಯಶಸಿಗೆ ಹಣ ಬೇಕಿಲ್ಲ. ಬೇಕಿರುವುದು ಪ್ರಾಮಾಣಿಕತೆ. ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟ ಕೌಶಲವಿರುತ್ತದೆ, ಅದನ್ನು ನಾವು ಕಂಡುಕೊಳ್ಳಬೇಕು. ನಾವು ಯಾರಿಗೂ ಸುಳ್ಳು ಹೇಳುವುದಿಲ್ಲ, ಮನರಂಜನೆಗಳಿಗಿಂತಲೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ, ತಂದೆ ತಾಯಿಯ ಮಾತನ್ನು ಪಾಲಿಸುತ್ತೇವೆ, ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡುವುದರಿಂದ ಯಶಸ್ಸು ಆರಂಭವಾಗುತ್ತದೆ. ಈ ಯಶಸ್ಸು ಶಾಶ್ವತವಾಗಿ ಉಳಿಯುವುದು ಅತಿ ಮುಖ್ಯ. ಅದಕ್ಕಾಗಿ ಪರಿಶ್ರಮ ಬೇಕು. ಪ್ರಾಮಾಣಿಕತೆ ಹಾಗೂ ಪರಿಶ್ರಮಗಳನ್ನು ಒಳಗೊಂಡ ಪ್ರಾಮಾಣಿಕ ಪರಿಶ್ರಮ ಮಾತ್ರವೇ ನಿಜವಾದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀರಾಮ್ ಜಿ.ಕೆ. ಮಾತನಾಡಿ, ಹರಿಪ್ರಕಾಶ್ ಕೋಣೆಮನೆಯವರು ಚಿಕ್ಕ ವಯಸ್ಸಿನವರಾದರೂ ಅವರ ಮಾತುಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುವಂತಹವು. ಹರಿಪ್ರಕಾಶ್ ಕೋಣೆಮನೆಯವರು ಆದರ್ಶ ವ್ಯಕ್ತಿಗಳ ಬಗ್ಗೆ ಮಾತನಾಡಿದರು. ಆದರೆ ಇಂದು ಅವರೇ ನನಗೆ ಒಬ್ಬ ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ. ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಇಂದು ಐನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ನಮಗೆಲ್ಲರಿಗೂ ಸ್ಪೂರ್ತಿ ಎಂದರು.
ಒಳ್ಳೆಯ ಮನಸ್ಸಿನಿಂದ ಯಾವುದೇ ಕೆಲಸವನ್ನು ಮಾಡಿದರೂ ನಮಗೆ ಒಳ್ಳೆಯದಾಗುತ್ತದೆ, ಕಾರ್ಯದಲ್ಲಿ ಸಫಲತೆ ಸಿಗುತ್ತದೆ. ನಾವು ಯಾರಿಗೂ ಹೆದರುವ ಅಗತ್ಯವಿಲ್ಲ. ನಾವು ಮಾಡುವ ಕೆಲಸ ಸರಿಯಾಗಿದ್ದರೆ ಧೈರ್ಯವಾಗಿ ಮುನ್ನುಗ್ಗಬೇಕು. ಪ್ರತಿ ಕೆಲಸ ಮಾಡುವಾಗಲೂ ನಮ್ಮ ದಾರಿ ಸರಿಯಾಗಿದೆಯೇ, ನಮ್ಮ ತಂದೆ ತಾಯಿಯ ಆಶಯದಂತೆ ನಡೆಯುತ್ತಿದ್ದೇವೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಹೆಗಡೆ, ಸಂಸ್ಥೆಯ ಗೌರವ ಕಾರ್ಯದರ್ಶಿ ಲಕ್ಷ್ಮೀ ಉಪಸ್ಥಿತರಿದ್ದರು.