ಬೆಂಗಳೂರು: ಸೈಬರ್ ಪೊಲೀಸರು (Cyber Police) ಎಷ್ಟೇ ಅಪ್‌ಡೇಟ್ ಆಗುತ್ತಿದ್ದರೂ ಸೈಬರ್ ವಂಚಕರು (Cyber Crime) ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವಂಚನೆಗೆ (Cyber Fraud) ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ʼಡಿಜಿಟಲ್ ಅರೆಸ್ಟ್ʼ (Digital Arrest) ಎಂಬ ಹೊಸ ವಿಧಾನದ ವಂಚನೆಗೆ ಇದೀಗ ರಾಜಧಾನಿ ಬೆಚ್ಚಿ ಬಿದ್ದಿದೆ.
ಹಲವಾರು ಮಂದಿಗೆ ಡಿಜಿಟಲ್ ಅರೆಸ್ಟ್ ನೆಪದಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ವಂಚಿಸಲಾಗಿದೆ. 15 ದಿನದ ಅಂತರದಲ್ಲಿ ಏಳು ಜನರಿಗೆ ಮೂರು ಕೋಟಿ ರೂ. ವಂಚನೆ ಮಾಡಲಾಗಿದೆ. ಅಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿವೆ.
ಏನಿದು ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಡಿಜಿಟಲ್ ಅರೆಸ್ಟ್? ಸೈಬರ್ ವಂಚಕರು ಇದರಲ್ಲಿ ಪೊಲೀಸರು ಅಥವಾ ತನಿಖಾ ಸಂಸ್ಥೆಯ ಹೆಸರು ಹೇಳಿಕೊಂಡು ಕರೆ ಮಾಡುತ್ತಾರೆ. ನಿಮ್ಮ ದಾಖಲಾತಿಗಳನ್ನು ಬಳಸಿ (ಆಧಾರ್, ಪಾನ್) ಯಾವುದೋ ಅಪರಾಧ ಮಾಡಲಾಗಿದೆ. ನೀವು ವಿಚಾರಣೆಗೆ ಹಾಜರಾಗಬೇಕು ಎಂದು ಬೆದರಿಸಲಾಗುತ್ತದೆ. ವಿಚಾರಣೆಯಿಂದ ವಿನಾಯಿತಿ ಬೇಕಾದರೆ ಹಣ ಹಾಕಿ, ಇಲ್ಲವಾದರೆ ಅರೆಸ್ಟ್ ಮಾಡ್ತೀವಿ ಎಂದು ಬೆದರಿಕೆ ಹಾಕುತ್ತಾರೆ. ಇದರಿಂದ ಹೆದರಿದವರು, ವಂಚಕರು ಹೇಳಿದ ಖಾತೆಗೆ ಹಣ ಪಾವತಿಸಿ ಕೈ ತೊಳೆದುಕೊಳ್ಳಲು ಮುಂದಾದರೆ ಕೇಡಿಗಳು ತೋಡಿದ ಗುಂಡಿಗೆ ಬಿದ್ದಂತೆಯೇ.
ಹೆಚ್‌ಎಸ್‌ಆರ್ ಲೇಔಟ್ ಮೂಲದ ವೃದ್ಧ ದಂಪತಿಐಿಂದ ಹೀಗೆ 1 ಕೋಟಿ 97 ಲಕ್ಷ ರೂಪಾಯಿಗಳನ್ನು ವಂಚಕರು ಸುಲಿಗೆ ಮಾಡಿದ್ದಾರೆ. ಅಲ್ಲದೆ ಕಳೆದ 15 ದಿನಗಳ ಅಂತರದಲ್ಲಿ ಅಗ್ನೇಯ ವಿಭಾಗ ಒಂದರಲ್ಲೇ ಬರೋಬ್ಬರಿ ಮೂರು ಕೋಟಿಗಳಷ್ಟು ಮೊತ್ತವನ್ನು ಸೈಬರ್ ಖದೀಮರು ವಂಚಿಸಿದ್ದಾರೆ. ಆದರೆ ಪೊಲೀಸರಿಗೆ ಮಾತ್ರ ಇದುವರೆಗೂ ಇದರ ಸುಳಿವು ಪತ್ತೆಯಾಗಿಲ್ಲ.