ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಕುರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಖಂಡನೀಯ. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಭಯೋತ್ಪಾದನಾ ಪ್ರಕರಣವನ್ನು ಖಂಡಿಸುವುದನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿರುವಾಗ ಈ ರೀತಿ ಮಾತನಾಡುವುದು ಸಮಂಜಸವಲ್ಲ. ಅವರು (D K Shivakumar) ಈ ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್. ರವಿಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ನಾಯಕರು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಭದ್ರತೆಯ ವಿಚಾರದಲ್ಲಿ ಇಂತಹ ಬಾಲಿಶ ಹೇಳಿಕೆ ನೀಡುತ್ತಿರುವುದು ವಿಷಾದನೀಯ. ಮಂಗಳೂರು ಕುಕ್ಕರ್ ಸ್ಫೋಟವನ್ನು ಮುಸಲ್ಮಾನರೂ ಸೇರಿ ಇಡೀ ಸಮಾಜ ಖಂಡಿಸಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಾವು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದರ ಮುನ್ಸೂಚನೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ | DK Shivakumar | ಯಾವ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ: ಭಯೋತ್ಪಾದಕ ಹೇಳಿಕೆಗೆ ಡಿಕೆಶಿ ಸಮರ್ಥನೆ
ಡಿ.ಕೆ.ಶಿವಕುಮಾರ್ ಅವರ ಭಯೋತ್ಪಾದನೆ ಸಮರ್ಥನೆ ಕುರಿತು ಕಾಂಗ್ರೆಸ್ ಪಕ್ಷದ ನಿಲುವೇನು? ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವೇನು? ಎಂಬುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್‌ನವರು ಸರ್ಜಿಕಲ್ ಸ್ಟ್ರೈಕ್ ಅನ್ನು ಅಲ್ಲಗಳೆದರು, ಏರ್ ಸ್ಟ್ರೈಕ್ ಅನ್ನು ಅಲ್ಲಗಳೆದರು, ಪುಲ್ವಾಮಾ ದಾಳಿಯನ್ನು ಪಾಕಿಸ್ತಾನದ್ದಲ್ಲ ಎಂದು ಸಮರ್ಥಿಸಿಕೊಂಡರು. ದೇಶದಲ್ಲಿ ನಡೆದ ಬಹುತೇಕ ಭಯೋತ್ಪಾದನಾ ಘಟನೆಗಳನ್ನೂ ಸಮರ್ಥಿಸಿಕೊಂಡರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರು ಇಂತಹ ಬೇಜವಾಬ್ದಾರಿ, ಭಯೋತ್ಪಾದನೆ ಪ್ರಕರಣಗಳನ್ನು ಸಮರ್ಥಿಸುವ ಹೇಳಿಕೆಗಳನ್ನು ನೀಡಿದರೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ. ಕೂಡಲೇ ಡಿ.ಕೆ.ಶಿವಕುಮಾರ್ ಅವರು ಭಯೋತ್ಪಾದನೆ ಕುರಿತ ಹೇಳಿಕೆಯನ್ನು ವಾಪಾಸ್ ಪಡೆದು ಕ್ಷಮೆ ಯಾಚಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.
ಯಾವುದೇ ತನಿಖೆ ಮಾಡದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಹೇಗೆ ಭಯೋತ್ಪಾದಕ ಎಂದು ಪೊಲೀಸರು ಘೋಷಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಅವರು ವಿವಾದಕ್ಕೆ ತುತ್ತಾಗಿದ್ದರು. ಮಂಗಳೂರಿನಲ್ಲಿ ನಡೆದಿದ್ದು ಮುಂಬೈನಲ್ಲಿ ನಡೆದಂಥ ಟೆರರಿಸ್ಟ್ ದಾಳಿಯೇ? ಕಾಶ್ಮೀರದ ಪುಲ್ವಾಮಾ ದಾಳಿಯಂಥ ಘಟನೆಯಾ ಅದು? ಪೊಲೀಸ್ ಅಧಿಕಾರಿಗಳು ಅಷ್ಟು ಬೇಗ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರ ಹಿನ್ನೆಲೆ ಏನು ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದರು. ಇದಕ್ಕೆ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.
ಇದನ್ನೂ ಓದಿ | DK Shivakumar | ಉಗ್ರನನ್ನು ಉಗ್ರ ಎನ್ನದೆ ಡಿಕೆಶಿಯ ಹಾಗೆ ನಮ್ಮ ಬ್ರದರ್ಸ್ ಅನ್ನಬೇಕಿತ್ತಾ?: ಬಿಜೆಪಿ ಟ್ವೀಟ್ ದಾಳಿ