Site icon Vistara News

Caste Certificate : ಜಾತಿ ಪ್ರಮಾಣಪತ್ರ ನೀಡುವುದು ವಿಳಂಬವಾದರೆ ಜಿಲ್ಲಾಧಿಕಾರಿ ಮೇಲೆಯೇ ಕ್ರಮ; ಸಿಎಂ ಎಚ್ಚರಿಕೆ

Siddaramaiah Warning

ಬೆಂಗಳೂರು: ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಸಮುದಾಯಕ್ಕೆ (Gonda Community) ಸೇರಿರುವ ಬಗ್ಗೆ ನಾಗರಿಕ ಹಕ್ಕುಗಳ ಜಾರಿ ವಿಭಾಗದವರು (Civil rights enforcement Cell- ಸಿಆರ್.ಇ ಸೆಲ್) ಪರಿಶೀಲಿಸಿ ವರದಿ ಕೊಟ್ಟ ನಂತರವೂ ಜಾತಿ ಪ್ರಮಾಣಪತ್ರ (Caste Certificate) ನೀಡುವುದು ವಿಳಂಬವಾದರೆ ಜಿಲ್ಲಾಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡಿದ್ದಾರೆ ಎಂದು ಅಮಾನತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದರು.

ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಹಾಗೂ ಕೊಡುಗು ಜಿಲ್ಲೆಯಲ್ಲಿ ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪತ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ನೀಡುವ ಸಂಬಂಧ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಗೊಂಡ ಸಮುದಾಯದವರ ಅಹವಾಲುಗಳನ್ನು ಸಮಗ್ರವಾಗಿ ಕೇಳಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಸಿ.ಆರ್.ಇ ಸೆಲ್ ಇರುವುದು ಹಕ್ಕುಗಳ ರಕ್ಷಣೆಗಾಗಿ ಹಾಗೂ ಪ್ರಕರಣಗಳ ವಿಚಾರಣೆಗಾಗಿ. ಸಿಆರ್‌ಇ ಸೆಲ್ ವಿಚಾರಣೆ ಮಾಡಿ ನೀಡಿದ ವರದಿಯನ್ನು ಅಂಗೀಕರಿಸಬೇಕು. ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಎನ್ನುವ ಸಮುದಾಯ ಎಸ್.ಟಿ ಗೆ ಸೇರಿದೆ. ಶಾಲಾ ದಾಖಲಾತಿ, ಪೋಷಕರ ಇತಿಹಾಸ ವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದೂರುಗಳಿದ್ದರೆ ತನಿಖೆ ಮಾಡಿ, ಸ್ವಯಂಪ್ರೇರಿತ ಬೇಡ

ಪ್ರಮಾಣಪತ್ರ ನೀಡಲು ಅನಗತ್ಯವಾಗಿ ವಿಳಂಬ ಮಾಡಬಾರದು. ದೂರುಗಳು ಇದ್ದರೆ ತನಿಖೆ ಮಾಡಿಸಬೇಕು. ದೂರುಗಳು ಇಲ್ಲದೆ ಹೋದರೆ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದರು. ಸಿ.ಆರ್.ಇ ಸೆಲ್ ನವರು ತನಿಖೆ ಮಾಡಿದ ವರದಿ ನೀಡಿದ ಕೂಡಲೇ ಅಂಗೀಕರಿಸಿ, ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಅನಗತ್ಯವಾಗಿ ವಿಳಂಬ ಸಲ್ಲದು ಎಂದ ಸಿಎಂ

ಕೊಡಗು ಜಿಲ್ಲೆಯ ಕುರುಬ ಸಮುದಾಯದವರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ. ಅನಗತ್ಯವಾಗಿ ವಿಳಂಬ ಮಾಡದೇ ತ್ವರಿತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು. ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿವೇತನಗಳನ್ನು ನೀಡಬಹುದು ಎಂದು ಸೂಚಿಸಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನಸೇವಾ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಲಬುರಗಿ, ಬೀದರ್, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್, ಗೊಂಡ ಹಾಗೂ ಕುರುಬ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: CM Siddaramaiah: ಅಂಬಾನಿ, ಅದಾನಿ ಜೇಬಿನಲ್ಲಿ ಹಣವಿದ್ದರೆ ಬಡವರು ಉದ್ಧಾರವಾಗಲ್ಲ ಎಂದ ಸಿದ್ದರಾಮಯ್ಯ

Exit mobile version