Site icon Vistara News

ರಸ್ತೆ ಗುಂಡಿ ಮುಚ್ಚಲು ತಡವಾಗಿದ್ದು ನಿಜ: ಆಯುಕ್ತ ತುಷಾರ್‌ ಗಿರಿನಾಥ್‌

bbmp

ಬೆಂಗಳೂರು: ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿಯ ವಿಳಂಬ ಧೋರಣೆ ವಿರುದ್ಧ ಹೈಕೋರ್ಟ್‌ ಮಂಗಳವಾರ ಗುಡುಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಗುಂಡಿ ಮುಚ್ಚಲು ತಡವಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಪೈಥಾನ್ ಯಂತ್ರ ಬಳಸಿ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳದೇ ಇರುವ ಪಾಲಿಕೆಯ ಕಾರ್ಯವೈಖರಿ ಸಂಬಂಧ ಬಿಬಿಎಂಪಿಯನ್ನು ಹೈಕೋರ್ಟ್‌ ತರಾಟೆ ತೆಗೆದುಕೊಂಡಿತ್ತು. ಬಿಬಿಎಂಪಿ ವಿರುದ್ಧ ಕಠಿಣ ಆದೇಶ ಹೊರಡಿಸಲು ನ್ಯಾಯಾಲಯ ಹಿಂಜರಿಯುವುದಿಲ್ಲವೆಂದೂ ಎಚ್ಚರಿಕೆ ನೀಡಿತ್ತು. ಈ ಕುರಿತು ವಿಚಾರಣೆಯನ್ನು ಹೈಕೋರ್ಟ್‌ ಗುರುವಾರ ನಡೆಸಲಿದೆ.

ಇದನ್ನೂ ಓದಿ | ಪ್ರತಿವಾರ 3,000 ರಸ್ತೆ ಗುಂಡಿ ಪ್ರತ್ಯಕ್ಷ: ಅಧಿಕಾರಿಗಳ ತಪ್ಪು ಮಾಹಿತಿ ಎಂದ ಬಿಬಿಎಂಪಿ

ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಈ‌ ಹಿಂದೆ ರಸ್ತೆ ಗುಂಡಿ ಮುಚ್ಚಲು ಅಲ್ಪಾವಧಿ ಟೆಂಡರ್ ನೀಡಲಾಗಿತ್ತು. ಜೂನ್‌ 22ನೇ ತಾರೀಖಿಗೆ ಟೆಂಡರ್‌ ಆಗಿದ್ದು, ಕೆಲಸ ನಿರ್ವಹಣೆ ಸ್ವಲ್ಪ ತಡವಾಗಿದೆ. ಪೈಥಾನ್ ಯಂತ್ರದಿಂದ 1 ಚದರ ಮೀಟರ್ ಗುಂಡಿ ಮುಚ್ಚಲು 8ರಿಂದ 10 ನಿಮಿಷ ತೆಗೆದುಕೊಳ್ಳುತ್ತದೆ. ರಸ್ತೆಗುಂಡಿ ಸಂಬಂಧ ಗುರುವಾರ ಕೋರ್ಟ್ ಮುಂದೆ ಹಾಜರಾಗುತ್ತೇವೆ. ರಸ್ತೆ ನಿರ್ವಹಣೆ ಸಂಬಂಧ ಎಲ್ಲ ಲೆಕ್ಕವನ್ನು ನ್ಯಾಯಾಲದ ಮುಂದೆಯೇ ಸಲ್ಲಿಸಲಿದ್ದೇವೆ ಎಂದರು.

ನಾನು ಯಾರ ಜತೆಯೂ ಡೀಲ್ ಮಾಡಿಕೊಂಡಿಲ್ಲ

ಚಾಮರಾಜಪೇಟೆಯ ಈದ್ಗಾ ಮೈದಾನ ಸಂಬಂಧ ಜಮೀರ್ ಅಹಮದ್ ಜತೆ ಆಯುಕ್ತ ತುಷಾರ್ ಗಿರಿನಾಥ್ ಶಾಮೀಲು ಆಗಿದ್ದಾರೆ ಎಂಬ ಕುರಿತು ಸ್ಪಷ್ಟನೆ ನೀಡಿದ ತುಷಾರ್‌ ಗಿರಿನಾತ್‌, ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ವಕ್ಫ್ ಬೋರ್ಡ್‌ಗೆ ಖಾತಾ ಮಾಡಿ ಕೊಡುವುದಾಗಿ ನಾನು ಹೇಳಿಲ್ಲ. ದಾಖಲೆ ಇದ್ದರೆ ನೀಡಿ ಎಂದು ಕೇಳಿದ್ದೇನೆ ಅಷ್ಟೇ. ೧೯೮೫ರಲ್ಲಿ ಇದು ಸುನ್ನಿ ಬೋರ್ಡ್‌ಗೆ ಸೇರಿದ‌ ಜಾಗ ಎಂದು ವಕ್ಫ್ ಬೋರ್ಡ್ ಒಂದು ನೋಟಿಫಿಕೇಷನ್ ಮಾಡಿದೆ. ಇದುವರೆಗೂ ಇದು ನಮ್ಮ‌ ಜಾಗ ಎಂದು ವಕ್ಫ್ ಬೋರ್ಡ್ ದಾಖಲೆ ನೀಡಿಲ್ಲ. ೧೯೭೪ರಲ್ಲಿ ಸರ್ವೆ ನಡೆದಾಗಲೂ ವಕ್ಫ್ ಬೋರ್ಡ್ ಆಕ್ಷೇಪಣೆ ಸಲ್ಲಿಸಿಲ್ಲ. ಮಾಲೀಕರು ಯಾರು ಇದ್ದರೂ ದಾಖಲೆ ನೀಡಲಿ, ಕಾನೂನು ಬದ್ಧವಾಗಿ ಖಾತಾ ಮಾಡಿಕೊಡುತ್ತೇವೆ. ಖಾತಾ ಮಾಡುವಾಗ ಅಳತೆ, ದಾಖಲೆ ನೋಡಿ ಖಾತಾ ಮಾಡಿಕೊಡುತ್ತೇವೆ. ಯಾರ ಜತೆಯೂ ಡೀಲ್ ಮಾಡಿಕೊಂಡಿಲ್ಲ ಎಂದರು.

ತೆರಿಗೆ ವಸೂಲಿ

ಮಂತ್ರಿ ಮಾಲ್ ಬಾಕಿ ತೆರಿಗೆ ಸಂಗ್ರಹ ವಿಚಾರವಾಗಿ ಮಾತನಾಡಿದ ಆಯುಕ್ತರು, ತೆರಿಗೆ ಪಾವತಿಯಾಗಿಲ್ಲವೆಂದು ಮಾಲ್‌ಗಳಿಗೆ ಬೀಗ ಹಾಕುವುದು ಬೇಡವೆಂದು ಹೈಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅಕೌಂಟ್ ಅಟ್ಯಾಚ್ ಮಾಡಲು ನಿರ್ಧಾರ ಮಾಡಲಾಗಿದೆ. ಮಂತ್ರಿ ಮಾಲ್‌ ೨೭ ಕೋಟಿ ರೂ. ಬಾಕಿ ಪಾವತಿಸಲು ಗುರುವಾರದ ಗಡುವು ನೀಡಲಾಗಿದೆ. ಬಾಕಿ ಪಾವತಿ ಮಾಡದೇ ಇದ್ದರೆ, ಅಕೌಂಟ್ ಅಟ್ಯಾಚ್‌ ಮಾಡಲಾಗುತ್ತದೆ. ಕೇವಲ ಮಂತ್ರಿ ಮಾಲ್ ಅಲ್ಲ, ಯಾರೇ ದೊಡ್ಡ ಸುಸ್ತಿದಾರರು ಇದ್ದರೂ ಈ ವಿಧಾನವನ್ನೇ ಮುಂದುವರೆಸಲು ಕ್ರಮ ವಹಿಸಲಾಗುತ್ತದೆ ಎಂದರು.

ಇದನ್ನೂ ಓದಿ | ರಾತ್ರಿಯಿಡೀ ರಸ್ತೆ ಗುಂಡಿ ಮುಚ್ಚಿಸಿದ BBMP ಮುಖ್ಯ ಆಯುಕ್ತ

Exit mobile version