Site icon Vistara News

Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್‌!

Dengue fever rises across the state including Bengaluru BBMP Commissioner also get fever

ಬೆಂಗಳೂರು: ಮಳೆ ಶುರುವಾದರೆ ಸಾಕು ಇದರ ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಇದೇ ಋತುವಿನಲ್ಲಿ ಡೆಂಗ್ಯೂ ಜ್ವರ (Dengue Fever) ಹೆಚ್ಚಳ ಆಗುವುದರಿಂದ ಎಚ್ಚರ ವಹಿಸುವುದು ಅತಿ ಅವಶ್ಯಕ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗಿದೆ. ಬೆಂಗಳೂರಿನ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು, ಡೆಂಗ್ಯೂ ಧೃಡಪಟ್ಟಿದೆ.

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2022ರಲ್ಲಿ ರಾಜ್ಯದಲ್ಲಿ 7,317 ಡೆಂಗ್ಯೂ ಜ್ವರ (Dengue fever) ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದರು. 2023ರಲ್ಲಿ 2003 ಪ್ರಕರಣಗಳು ವರದಿಯಾಗಿದ್ದವು. 2024ರಲ್ಲಿ ಈ ವರೆಗೆ (ಜೂನ್‌) 85,365 ಶಂಕಿತವಾಗಿದ್ದು, ಇದರಲ್ಲಿ 37,144 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 3,957 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಬೆಂಗಳೂರಲ್ಲಿ 1230 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version