Site icon Vistara News

Dengue Fever : ಡೆಂಗ್ಯೂ ಭೀತಿ- ಸೊಳ್ಳೆಗಳ ನಾಶಕ್ಕೆ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Dengue Fever

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗುತ್ತಿದೆ. ಹೀಗಾಗಿ ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರೇ ಫೀಲ್ಡಿಗಿಳಿದು ಜಾಗೃತಿ ಮೂಡಿಸಲು ಮುಂದಾದರು. ಡೆಂಗ್ಯೂ ನಿಯಂತ್ರಣಕ್ಕೆ ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ನಡೆಸುತ್ತಿರುವ ಈಡಿಸ್ ಲಾರ್ವಾ ನಾಶಪಡಿಸುವ ಅಭಿಯಾನದಲ್ಲಿ ಸಚಿವರು ಭಾಗಿಯಾದರು.

ಬೆಂಗಳೂರಿನ ವಸಂತನಗರ, ರಾಮಸ್ವಾಮಿಪಾಳ್ಯದಲ್ಲಿ ಮನೆ ಮನೆಗೆ ತೆರಳಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳ ಪರಿಶೀಲನೆ ನಡೆಸಿದರು. ಲಾರ್ವಾ ನಾಶಪಡಿಸುವ ಔಷಧಿ ಸಿಂಪಡಿಸಿದ ಸಚಿವರು, ಫಾಗಿಂಗ್ ಕೂಡ ಮಾಡುವ ಮೂಲಕ ತಳ ಮಟ್ಟದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿಗಳ ಕಾರ್ಯಕ್ಕೆ ಉತ್ಸಾಹ ತುಂಬಿದರು. ಅಲ್ಲದೇ ನಿವಾಸಿಗಳಲ್ಲಿ ಡೆಂಗ್ಯೂ ವಿಚಾರವಾಗಿ ಎಚ್ಚರ ವಹಿಸಿ, ನೀರು ಶೇಖರಣೆಯಾಗದಂತೆ ಮುಂಜಾಗೃತೆ ಕ್ರಮಗಳನ್ನು ಅನುಸರಿಸಿ ಎಂದು ಕರೆ ನೀಡಿದರು.

ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಡೀಟ್(Odomos) ಕ್ರೀಮ್ ವಿತರಿಸಿದ ಆರೋಗ್ಯ ಸಚಿವರು, ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸಿದರು. ಅಲ್ಲದೆ ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ನಿಮ್ಮ ಮನೆಯಲ್ಲಿ ಪೋಷಕರು ಹಾಗೂ ಸುತ್ತಮುತ್ತಲಿನ ಮನೆಯವರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಗಂಭೀರ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

100 ಮೀ ಅಂತರದಲ್ಲಿ ಡೆಂಗ್ಯೂ ಹೆಚ್ಚಾದರೆ ಹಾಟ್‌ ಸ್ಪಾಟ್‌ ಎಂದು ಗುರುತು

100 ಮೀಟರ್ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಬೆಂಗಳೂರಿನ ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲಿನಿಕ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವ ಕೊಳಗೇರಿ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.

ನಗರದಲ್ಲಿ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಬೇಕು. ಜೊತೆಗೆ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಫೀವರ್ ಪರೀಕ್ಷೆ, ಲಾರ್ವಾ ಸರ್ವೆ, ಫಾಗಿಂಗ್, ಸ್ಪ್ರೇ ಹಾಗೂ ಡೆಂಘೀ ಹರಡದಂತೆ ಮುಂಜಾಗ್ರತಾ ವಹಿಸಲು ಬಿತ್ತಿ ಪತ್ರಗಳನ್ನು ವಿತರಿಸಿ ಅರಿವು ಮೂಡಿಸಬೇಕು. ಇದಲ್ಲದೆ ಸೊಳ್ಳೆಗಳು ಕಚ್ಚದಂತೆ ಡೀಟ್(Odomos) ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸುವಂತೆ ಅಧಿಕಾರಿಗಳಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ನಗರದಲ್ಲಿ ಡೆಂಗ್ಯೂ ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 3161 ತಂಡಗಳಿಂದ 25 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಪ್ರತಿನಿತ್ಯ ಸರಾಸರಿ 130 ರಿಂದ 150 ಪ್ರಕರಣಗಳು ಕಂಡು ಬರುತ್ತಿವೆ.

ಶೀಘ್ರ ಉಚಿತ ಡಯಾಲಿಸಿಸ್ ಕೇಂದ್ರ ಆರಂಭ

ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರ ಶೀಘ್ರದಲ್ಲಿ ಪ್ರಾರಂಭಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ಬಡವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಅದಕ್ಕಾಗಿ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಆರಭಿಸಬೇಕೆಂದು ತಿಳಿಸಿದರು ವಸಂತನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇದೇ ವೇಳೆ ಭೇಟಿ ನೀಡಿ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತರಾದ ಡಿ. ರಂದೀಪ್, ಎನ್.ಎಚ್.ಎಮ್ ಎಂ.ಡಿ ಡಾ. ನವೀನ್ ಭಟ್ ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version