ಬೆಂಗಳೂರು: ಮೂಕ ಪ್ರಾಣಿಗಳ ಮೇಲೆ ಕಾರು ಹಾಯಿಸುವುದು ಬೆಂಗಳೂರಿನಲ್ಲಿ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆ. ಈ ಹಿಂದೆ ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಸಾಕು ನಾಯಿಯ ಮೇಲೆ ಕಾರು ಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಅಂದ್ರಹಳ್ಳಿಯ ಶ್ರೀನಿವಾಸ ದೇವಸ್ಥಾನದ ಹತ್ತಿರ ಜೂನ್ 4 ರಂದು ರಾತ್ರಿ 10 ಗಂಟೆಗೆ ಹರೀಶ್ ಎಂಬುವವರು ಬೂಮರ್ ಹೆಸರಿನ ತಮ್ಮ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು. 13 ತಿಂಗಳ ಆ ನಾಯಿಯ ಮೇಲೆ ಇದ್ದಕ್ಕಿದ್ದಂತೆ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ನಾಯಿಯ ಎದೆ ಮತ್ತು ಬಲಗಾಲಿಗೆ ತೀವ್ರ ಗಾಯವಾಗಿತ್ತು. ಕಾರು ನಿಲ್ಲಿಸದೆ ಓಡಿಹೋಗುತ್ತಿದ್ದ ಕಾರು ಚಾಲಕ ಶಿವಕುಮಾರ್‌ನನ್ನು ಹಿಡಿದು ಅದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಯಿಯ ಚಿಕಿತ್ಸೆಗೆ ₹70,000 ಆಗುತ್ತದೆ ಎಂದು ಆಸ್ಪತ್ರೆಯಲ್ಲಿ ಹೇಳಿದರು. ಆದರೆ ತಾನು ನಾಯಿಯ ಚಿಕಿತ್ಸೆಗೆ ಯಾವುದೇ ಹಣ ಕೊಡುವುದಿಲ್ಲವೆಂದು ಹೇಳುತ್ತಿದ್ದ ಶಿವಕುಮಾರ್ ಕೊನೆಗೆ ಕೇವಲ ₹5000 ನೀಡಿ ಆಸ್ಪತ್ರೆಯಿಂದ ಹೊರನಡೆದಿದ್ದ.
ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹರೀಶ್ ದೂರು ನೀಡಿದ್ದರು. ಆದರೆ ಶಿವಕುಮಾರ ತನ್ನ ವಕೀಲರ ಜತೆ ಬಂದು ಒಪ್ಪಂದ ಮಾಡಿಕೊಳ್ಳಲು ಕೇಳಿದ್ದ. ಇದಕ್ಕೆ ಒಪ್ಪದಿದ್ದಾಗ ಬೆದರಿಕೆಯನ್ನು ಸಹ ಹಾಕಿದ್ದ ಎಂದು ಹರೀಶ್ ಹೇಳಿಕೆ ನೀಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಕಾರು ಚಾಲಕ ಶಿವಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿಸಿ ಕೆಲ ಸಮಯದಲ್ಲೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿ, ತನಿಖೆ ಮುಂದುವರೆಸಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ನಡೆದು ನ್ಯಾಐ ದೊರಕಿಸಬೇಕು ಎಂದು ದೂರುದಾರ ಹರೀಶ ಕೋರಿದ್ದಾರೆ.
ಇದನ್ನೂ ಓದಿ: ಕಾರಿಗೆ ಸಿಕ್ಕಿ ನರಳಾಡಿ ನರಳಾಡಿ ಸತ್ತ ಶ್ವಾನ: ಬೆಂಗಳೂರಿನಲ್ಲಿ ಅಮಾನವೀಯ ಘಟನೆ