ಬೆಂಗಳೂರು: ಬೆಂಗಳೂರಿನ ಎರಡನೇ ಅತಿ ದೊಡ್ಡ ಅಪಾರ್ಟ್ಮೆಂಟ್ (Apartment) ಸಮುಚ್ಚಯದ ನಿವಾಸಿಗಳ ನಡುವೆ ತುಳಸಿ ಕಟ್ಟೆಯೊಂದರಿಂದ (Tulasi Katte) ಆರಂಭವಾದ ಗಲಾಟೆ ಇದೀಗ ಮಸೀದಿ (Masjid), ಗುರುದ್ವಾರದವರೆಗೂ (Gurdwara) ಮುಟ್ಟಿದೆ. ಧರ್ಮ ದಂಗಲ್‌ಗೆ (Dharma Dangal) ಹೇಗೆ ಕೊನೆ ಹಾಡುವುದು ಎಂದು ತಿಳಿಯದೆ ಅಪಾರ್ಟ್‌ಮೆಂಟ್ ನಿವಾಸಿಗಳು ಪೆಚ್ಚಾಗಿದ್ದಾರೆ.
ಯಲಹಂಕದ ಅಮಾನಿಕೆರೆ ಬಳಿ ಇರುವ, ಸುಮಾರು 3 ಸಾವಿರ ಫ್ಲ್ಯಾಟ್‌ಗಳನ್ನು ಹೊಂದಿರುವ ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್ಮೆಂಟ್‌ನಲ್ಲಿ (Provident Welworth City Yelahanka) ಈ ದಂಗಲ್ ಆರಂಭವಾಗಿದೆ. ಹಿಂದೂಗಳು ಪೂಜಿಸುತ್ತ ಬಂದ ತುಲಸಿ ಕಟ್ಟೆಯನ್ನು ತೆರವು ಮಾಡಲು ಅನ್ಯಮತೀಯರ ಗುಂಪೊಂದು ಒತ್ತಾಯ ಮಾಡಿ ಗಲಭೆ ಸೃಷ್ಟಿಸಿದೆ. ಇದೀಗ ಜಿಲ್ಲಾಡಳಿತ ಇದರಲ್ಲಿ ಮಧ್ಯೆ ಪ್ರವೇಶಿಸುವಂತಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಕೆಲವು ಹಿಂದೂ ನಿವಾಸಿಗಳು ತುಲಸಿ ಕಟ್ಟೆ ನಿರ್ಮಾಣ ಮಾಡಿ ಅಲ್ಲಿ ತಮ್ಮ ಪೂಜೆ ಸಲ್ಲಿಸಿಕೊಳ್ಳುತ್ತಿದ್ದರು. ಇದನ್ನು ಕಂಡು ಕಿಡಿಕಿಡಿಯಾದ ನಿವೃತ್ತ ಕೆಎಎಸ್ ಅಧಿಕಾರಿ ಮಥಾಯಿ ಎಂಬವರು ತುಲಸಿ ಕಟ್ಟೆ ತೆರವು ಮಾಡಲು ಒತ್ತಾಯಿಸಿದ್ದಾರೆ. ಇವರೊಂದಿಗೆ ಇತರ ಕೆಲವರು ಸೇರಿಕೊಂಡಿದ್ದು, ಹಿಂದೂ ನಿವಾಸಿಗಳನ್ನು ವಿರೋಧಿಸಲು ಗುಂಪೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ತುಲಸಿ ಕಟ್ಟೆ ತೆರವು ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಹಿಂದೂ ನಿವಾಸಿಗಳು ಇದನ್ನು ಒಪ್ಪದೆ, ನಿತ್ಯ ಪೂಜೆ ಮುಂದುವರಿಸಿದ್ದಾರೆ. ಇದರಿಂದ ಕ್ರುದ್ಧರಾದ ಅನ್ಯಧರ್ಮೀಯ ಗುಂಪು, ತುಳಸಿ ಕಟ್ಟೆ ತೆರವು ಮಾಡಲು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಜೊತೆಗೆ ಹಲವು ಮುಸ್ಲಿಂ ನಿವಾಸಿಗಳು, ತಮಗೆ ಅಪಾರ್ಟ್‌ಮೆಂಟ್‌ನೊಳಗೆ ಮಸೀದಿ ಬೇಕೆಂದು ಬೇಡಿಕೆಯಿಟ್ಟಿದ್ದಾರೆ.
ಹಿಂದೂ ನಿವಾಸಿಗಳಿಗೆ ತುಳಸಿ ಕಟ್ಟೆಯಿದೆ, ನಮಗೆ ಮಸೀದಿ ಕಟ್ಟಲು ಅವಕಾಶ ಕೊಡಿ ಎಂದು ಅಪಾರ್ಟ್ಮೆಂಟ್ ನಿವಾಸಿಗಳ ಸಂಘಕ್ಕೆ ಮನವಿ ಮಾಡಿದ್ದಾರೆ. ಮಸೀದಿ ಕಟ್ಟಲು ಮನವಿ ಬೆನ್ನಲ್ಲೇ ಸಿಕ್ಖ್ ನಿವಾಸಿಗಳೂ ಗುರುದ್ವಾರ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ. ಇದೀಗ 15 ಸಾವಿರ ಜನ ಸಂಖ್ಯೆ ಇರುವ ಅಪಾರ್ಟ್ಮೆಂಟ್ ಮತೀಯ ಗುಂಪುಗಳಾಗಿ ಛಿದ್ರವಾಗಿದ್ದು, ಧರ್ಮ ದಂಗಲ್ ಆರಂಭವಾಗಿದೆ.
ಈ ಸಮಸ್ಯೆಯನ್ನು ಪರಿಶೀಲಿಸಲು ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ಒಂದು ತಂಡ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲಿದೆ. ತುಲಸಿ ಕಟ್ಟೆ, ಮಸೀದಿ, ಗುರುದ್ವಾರದ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದೆ. ಬಹುಸಂಖ್ಯಾತ ಹಿಂದೂ ನಿವಾಸಿಗಳು ಶಾಂತಿಯುತವಾಗಿ ನಡೆಸಿಕೊಂಡು ಹೋಗುತ್ತಿದ್ದ ತುಲಸಿ ಪೂಜೆಗೆ ಈ ಧರ್ಮ ದಂಗಲ್‌ನಿಂದಾಗಿ ಅಡ್ಡಿಯಾಗಿದೆ ಎಂದು ಇಲ್ಲಿನ ನಿವಾಸಿಗಳು ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್!