Site icon Vistara News

KC Raghu : ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಹಾರ ತಜ್ಞ ಕೆ.ಸಿ.ರಘು ಇನ್ನಿಲ್ಲ

Food Expert KC Raghu No more

ಬೆಂಗಳೂರು: ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಆಹಾರ ಕ್ರಮದ ಕುರಿತು ಟಿಪ್ಸ್‌ ನೀಡುತ್ತಿದ್ದ ಹೆಸರಾಂತರ ಆಹಾರ ತಜ್ಞ ಕೆ.ಸಿ.ರಘು (KC Raghu) (ಅ.15) ಅನಾರೋಗ್ಯದಿಂದ (Food Expert) ನಿಧನ ಹೊಂದಿದ್ದಾರೆ.

ಈ ಕುರಿತು ರಘು ಅವರ ಪತ್ನಿ ಆಶಾ ರಘು ಮಾಹಿತಿ ನೀಡಿದ್ದಾರೆ. ಕೆ.ಸಿ.ರಘು ಬೆಳಗಿನ ಜಾವ ಸುಮಾರು 7.30ಕ್ಕೆ ಅಗಲಿದ್ದಾರೆ. ರಘು ಅವರು ಲಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ದಾಸರಹಳ್ಳಿಯ ಅಮೃತನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಆ್ಯಂಡ್‌ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡು ಹಿಡಿದಿದ್ದರು. ಬಳಿಕ ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆಯಾಗಿತ್ತು. ಕೆ.ಸಿ.ರಘು, ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕೆ.ಸಿ. ರಘು, ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ‘ಆಹಾರ ರಾಜಕೀಯ’ಮತ್ತು ‘ತುತ್ತು ತತ್ವ’ ಪುಸ್ತಕಗಳನ್ನು ಪ್ರಕಟಿಸಿದ್ದರು.

https://x.com/DKShivakumar/status/1713436645280882814?s=20

ಸಂತಾಪ ಸೂಚಿಸಿದ ಡಿಸಿಎಂ ಶಿವಕುಮಾರ್‌

ನಾಡಿನ ಹೆಸರಾಂತ ಆಹಾರ ತಜ್ಞರಾದ ಕೆ.ಸಿ.ರಘು ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಡಿಸಿಎಂ ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟಿಟ್ವರ್‌ (X) ನಲ್ಲಿ ಮಾಡಿದ್ದಾರೆ. ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದು ಆಹಾರದ ಕುರಿತು ಅರಿವು ಮೂಡಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version