Site icon Vistara News

ಕನ್ನಡ ಸಾಹಿತ್ಯದ ನಿರಾಶಾದಾಯಕ ಪರಿಸ್ಥಿತಿ ಸುಧಾರಿಸಲಿ: ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ನಿರಂಜನ ವಾನಳ್ಳಿ

state govt to draft new book-policy

ಬೆಂಗಳೂರು: ಕನ್ನಡದಲ್ಲಿ ಆಧ್ಯಾತ್ಮಿಕ ಸಾಹಿತ್ಯಕ್ಕೆ ರಾಮಕೃಷ್ಣ ಆಶ್ರಮ ಹಾಗೂ ರಾಷ್ಟ್ರಪ್ರಜ್ಞೆಯ ಸಾಹಿತ್ಯಕ್ಕೆ ರಾಷ್ಟ್ರೋತ್ಥಾನ ಸಾಹಿತ್ಯವು ಗುರುತರವಾದ ಕೊಡುಗೆಯನ್ನು ನೀಡಿದೆ. ಬರೆಯುವವರು ಹಾಗೂ ಓದುವವರು ಕಡಿಮೆಯಾಗಿಲ್ಲ, ಆದರೆ, ಅವರ ಮಧ್ಯೆ ಸರಿಯಾದ ಕೊಂಡಿ ಏರ್ಪಟ್ಟು, ಹಳ್ಳಿಹಳ್ಳಿಗೂ ಕನ್ನಡ ಪುಸ್ತಕಗಳು ತಲುಪಿ, ಕನ್ನಡ ಸಾಹಿತ್ಯದ ನಿರಾಶಾದಾಯಕ ಪರಿಸ್ಥಿತಿ ಸುಧಾರಿಸಬೇಕು. ಈ ದಿಸೆಯಲ್ಲಿ ರಾಷ್ಟ್ರೋತ್ಥಾನ ನವ ಕರ್ನಾಟಕದಂತಹ ಪ್ರಕಾಶನಗಳೂ ಸಕ್ರಿಯವಾಗಿದ್ದು, ಇನ್ನೂ ದೊಡ್ಡ ಸ್ತರದಲ್ಲಿ ಕೆಲಸ ನಡೆಯಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಹೇಳಿದರು.

ನಗರದ ಕೆಂಪೇಗೌಡನಗರದ ಕೇಶವಶಿಲ್ಪ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ವತಿಯಿಂದ ಹಮ್ಮಿಕೊಂಡಿರುವ 1 ತಿಂಗಳ ಕನ್ನಡ ಪುಸ್ತಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ದಿನಗಳಿಂದ ಆರಂಭಿಸಿ, ಇಂದಿನ ದಿನಗಳವರೆಗೂ ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ-ಭಾರತಿ ಗ್ರಂಥಮಾಲೆ ತಮ್ಮ ಮೇಲೆ ಬೀರಿರುವ ಸಕಾರಾತ್ಮಕ ಪ್ರಭಾವವನ್ನು ನೆನೆಯುತ್ತಾ, ಮೊಬೈಲ್, ಟಿವಿ ಬಿಟ್ಟು, ಭಾರತ-ಭಾರತಿ ಪುಸ್ತಕ ಹಿಡಿದರೆ ದಾರಿ ತಪ್ಪಿದ ಮಕ್ಕಳು ಸರಿ ದಾರಿಗೆ ಬರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ | SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಏ.1 ರಿಂದಲೇ ಎಕ್ಸಾಮ್‌ ಶುರು

ಅಂಕಣಕಾರ ಹಾಗೂ ಕಥೆಗಾರ ಪ್ರೊ.ಪ್ರೇಮಶೇಖರ ಮಾತನಾಡಿ, 60ರ ದಶಕದಲ್ಲಿ ಜನ್ಮತಾಳಿದ ರಾಷ್ಟ್ರೋತ್ಥಾನ ಸಾಹಿತ್ಯ ಒಂದು ಐತಿಹಾಸಿಕ ಅಗತ್ಯವಾಗಿತ್ತು. ಇಂದಿನ ದಿನಗಳಲ್ಲಿ ಘಾಸಿಗೊಳಿಸುತ್ತರುವ ಸಾಂಸ್ಕೃತಿಕ ಹೊಡೆತಗಳನ್ನು ಎದುರಿಸಲು ರಾಷ್ಟ್ರೋತ್ಥಾನದ ಸಾಹಿತ್ಯದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದರು.

ಪಠ್ಯಪುಸ್ತಕಗಳನ್ನು ಆಧರಿಸಿ ಇತಿಹಾಸ, ಭವಿಷ್ಯ ಅರಿಯಲು ಹೋಗಬಾರದು ಅವರು, ಪ್ರೊ. ಮಜುಂದಾರ್, ಸೀತಾರಾಂ ಗೋಯಲ್, ಗೀತಾಪ್ರೆಸ್ ಮೊದಲಾದವರ ಸಾಹಿತ್ಯವನ್ನು ಓದಿದರೆ ಆಗುವ ಪ್ರಯೋಜನ ಹಾಗೂ ಪ್ರಭಾವದ ಬಗ್ಗೆ ತಮ್ಮ ಸ್ವಾನುಭವವನ್ನು ಹಂಚಿಕೊಂಡರು.

ಸ್ವಾತಂತ್ರ್ಯಾನಂತರ ಬರೆಯಲಾದ ಇತಿಹಾಸ ಕೇವಲ ಕಾಂಗ್ರೆಸ್ ಕೇಂದ್ರಿತವಾಗಿರುವಂತೆ ನೋಡಿಕೊಂಡು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಲಕ್ಷ ಲಕ್ಷ ಯುವಕರ ಬಲಿದಾನಗಳನ್ನು ಮುಚ್ಚಿ ಹಾಕಲಾಯಿತು. ನಂತರದ ದಿನಗಳಲ್ಲಿ ಇಂತಹ ಅಪೂರ್ಣ ಜ್ಞಾನದಿಂದ ಭಾರತದ ಸಮಸ್ಯೆಗಳನ್ನು ಅವಲೋಕಿಸಿ, ಪರಿಹಾರಕ್ಕಾಗಿ ಎಡಪಂಥವನ್ನು ನೋಡುವಂತಾದದ್ದು ದುರಂತ ಎಂದರು. ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಒಂದು ತಿಂಗಳ ಪುಸ್ತಕ ಹಬ್ಬ
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬವನ್ನು ಬೆಂಗಳೂರಿನ ಕೆಂಪೇಗೌಡನಗರದ ಕೇಶವಶಿಲ್ಪ ಸಭಾಂಗಣದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರ ಪ್ರಸಿದ್ಧ ಸಾಹಿತ್ಯ ಪುಸ್ತಕಗಳೂ ಲಭ್ಯವಿದ್ದು, ಶೇ.50 ವರೆಗೂ ರಿಯಾಯಿತಿ ಸಿಗಲಿದೆ. ಪುಸ್ತಕ ಖರೀದಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ | ನಾಳೆ ಕಲಬುರಗಿಯಲ್ಲಿ ಬಿಜೆಪಿಯಿಂದ ಒಬಿಸಿ ವಿರಾಟ್‌ ಸಮಾವೇಶ, 3 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ

Exit mobile version