ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಅಗಣಿತ ಸಾಧನೆಗೈದು ತೆರೆಮರೆಯಲ್ಲಿರುವ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್‌ನಿಂದ(Kannada Sahitya Parishat) ನೀಡಲಾಗುವ 2021 ಹಾಗೂ 2022ನೇ ಸಾಲಿನ ‘ಶ್ರೀ ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿಗೆ ಡಾ. ಸುರೇಶ ಪಾಟೀಲ್ ಹಾಗೂ ಪ್ರೊ.ಎಲ್.ವಿ.ಶಾಂತಕುಮಾರಿ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ. ವರದಾ ಶ್ರೀನಿವಾಸ ಅವರು ದಿ.ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ದತ್ತಿ ಇಟ್ಟಿದ್ದಾರೆ. ಒಂದು ವರ್ಷ ಪುರುಷ ಸಾಹಿತಿಗೆ, ಮತ್ತೊಂದು ವರ್ಷ ಮಹಿಳಾ ಸಾಹಿತಿಗೆ ಈ ಪ್ರಶಸ್ತಿ ನೀಡಬೇಕು ಹಾಗೂ ಪ್ರಶಸ್ತಿಯನ್ನು ಪ್ರಸಿದ್ಧ ಸಾಹಿತಿಗಳಾಗಿದ್ದೂ, ಇದುವರೆಗೆ ಯಾವುದೇ ಪ್ರಶಸ್ತಿ ಭಾಜನರಾಗದೆ ಎಲೆಮರೆಕಾಯಿಯಂತಿರುವ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಕನಿಷ್ಠ ಐದು ಕೃತಿಗಳನ್ನಾದರೂ ಬರೆದಿರಬೇಕು ಎನ್ನುವುದು ದತ್ತಿಯ ಮೂಲ ಆಶಯವಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ 2021ನೇ ಸಾಲಿನ ಪ್ರಸ್ತುತ ಪ್ರಶಸ್ತಿಗೆ ಡಾ. ಸುರೇಶ ಪಾಟೀಲ್ ಹಾಗೂ 2022ನೇ ಸಾಲಿನ ಪ್ರಶಸ್ತಿಗೆ ಪ್ರೊ.ಎಲ್.ವಿ. ಶಾಂತಕುಮಾರಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 17ರಂದು ಸಂಜೆ 4 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಮಾಡಲಾಗುವುದು. ದತ್ತಿ ಪ್ರಶಸ್ತಿ ಮೊತ್ತ ನಗದು 10 ಸಾವಿರ ರೂಪಾಯಿ ಜತೆಯಲ್ಲಿ ಪ್ರಶಸ್ತಿ ಫಲಕ, ಶಾಲು, ತಾಂಬೂಲಗಳನ್ನು ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Namma clinic | ನಮ್ಮ ಕ್ಲಿನಿಕ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ