Site icon Vistara News

Water Price Hike: ಯಾರು ಬೇಕಾದರೂ ಬಯ್ಯಲಿ, ನಾನು ನೀರು ಬೆಲೆ ಏರಿಕೆ ಮಾಡೋನೇ: ಡಿಸಿಎಂ ಡಿಕೆ ಶಿವಕುಮಾರ್‌

DK Shivakumar

ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ (Water Price Hike) ಮಾಡಲೇಬೇಕಿದೆ. ಜಲಮಂಡಳಿ (Bangalore Water Supply and Sewerage Board) ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಸುವವನೇ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ‌ ಸಭೆ ಮತ್ತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಇಂದಿನ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಈ ವಿಷಯ ಇಲ್ಲ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ನಾಗರಿಕರಿಗೆ ಎಷ್ಟು ಮಾಡಿದರೂ ಅಷ್ಟೆ, ಅವರಿಗೆ ಉಪಕಾರ ಸ್ಮರಣೆ ಇಲ್ಲ. ಬೈತಾರೆ, ಕಾಮೆಂಟ್ ಮಾಡ್ತಾರೆ, ವಾಟ್ಸ್ಯಾಪ್‌ನಲ್ಲಿ ಹಾಕ್ತಾರೆ. ನಂತರ ಮರೆತು ಬಿಡ್ತಾರೆ. ನೀರು ಕೊಟ್ಟರೆ ತಗೋತಾರೆ ಅಷ್ಟೆ. ಕೆಲವರು ದುಡ್ಡು ಕಟ್ಟುವವರು ಕಟ್ಟುತ್ತಾರೆ, ಕೆಲವರು ಕಟ್ಟಲ್ಲ. ಮೀಡಿಯಾದವರಾದರೂ ಬೈಯಲಿ, ಜನರಾದರೂ ಬಯ್ಯಲಿ, ವಿರೋಧ ಪಕ್ಷದವರಾದರೂ ವಿರೋಧ ಮಾಡಲಿ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ‌ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

ನೀರಿನ ದರ ಸಾಕಷ್ಟು ವರ್ಷದಿಂದ ಏರಿಸಿಲ್ಲ. 1.40 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ‌. ಮೇಕೆದಾಟು ಯೋಜನೆ ಬಗ್ಗೆ ನನಗೆ ಭರವಸೆ ಇದ್ದು, ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯೂ ಇದ್ದು ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ‌. ಎತ್ತಿನ ಹೊಳೆ ಯೋಜನೆಯೂ ಒಂದು ಹಂತದಲ್ಲಿ ಇದೆ. ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀನಲ್ಲಿ ಯಾರೂ ಬೋರ್‌ವೆಲ್ ಕೊರೆಯುವಂತಿಲ್ಲ. ಯಾರೂ ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ರಾಜ್ಯಪಾಲರು ಸಹಿ ಹಾಕಿದ್ದಾರೆ, ಹೊಸ ಕಾನೂನು ಬಂದಿದೆ ಎಂದು ಅವರು ವಿವರಿಸಿದರು.

ಖಾಸಗೀಕರಣ ಇಲ್ಲ

ಜಲ ಮತ್ತು ಇಂಧನ ಈ ಎರಡೂ ಪ್ರಮುಖವಾಗಿದ್ದು, ಎರಡೂ ಇಲಾಖೆ ನಾನು ನೋಡ್ತಾ ಇದ್ದೇನೆ. ಹಿಂದೆ ಎಸ್.ಎಂ.ಕೃಷ್ಣ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಕುರಿತು ಚರ್ಚೆ ನಡೆದಿತ್ತು. ಅದರ ಬಗ್ಗೆ ಫ್ರಾನ್ಸ್‌ಗೆ ಎಲ್ಲಾ ಹೋಗಿ ನೋಡಿಕೊಂಡು ಹೋಗುತ್ತಿದ್ದಾರೆ. ನಾನೂ ಹೋಗಿ ಬಂದೆ. ನೋಡಿ ಬಂದು ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗುತ್ತೆ ಎಂದು ಮಾಹಿತಿ ‌ನೀಡಿದೆ. ಸಾಕಷ್ಟು ವಿರೋಧ ವ್ಯಕ್ತವಾಯ್ತು. ಆನಂತರ ಕೈ ಬಿಟ್ಟೆವು. ಈಗಲೂ ನಾನು ಸಚಿವನಾದ ಮೇಲೆ ಮತ್ತೆ ಕೆಲವರು ಬಂದರು. ಆಗಲ್ಲ, ನಾನಿರುವವರೆಗೆ ಆಗಲ್ಲ ಅಂತ ಹೇಳಿದ್ದೇನೆ ಎಂದು ಅವರು ಹೇಳಿದರು.

ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ

110 ಹಳ್ಳಿಗಳ ಕಾವೇರಿ ನೀರಿನ ಸಂಪರ್ಕ ಅಭಿಯಾನಕ್ಕೆ ಡಿಕೆಶಿ ಇಂದು ಚಾಲನೆ ನೀಡಿದರು. ವಿಧಾನ ಸೌಧದ ಮುಂಭಾಗದ ಗ್ರಾಂಡ್ ಸ್ಟೆಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಸಂಪರ್ಕದ ಜೊತೆಗೆ ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣಮಿತ್ರ ತರಬೇತಿ ಹಾಗೂ ಯುನೈಟೆಡ್ ನೇಷನ್ ಇನೋವೇಷನ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯುರಿಟಿ ಇನ್ ಬೆಂಗಳೂರು ಸಿಟಿ ಯೋಜನೆಗಳಿಗೂ ಅವರು ಚಾಲನೆ ನೀಡಿದರು.

110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ಅಭಿಯಾನದಡಿ ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಟಿ ದಾಸರಹಳ್ಳಿ, ಬ್ಯಾಟರಾಯನಪುರ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳಿಗೆ ಸೇರಿರುವ ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ದೊರೆಯಲಿದೆ.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರಾ? ಡಿಕೆ ಶಿವಕುಮಾರ್ ಏನಂದ್ರು?

Exit mobile version