ಬೆಂಗಳೂರು: ಸ್ಕೂಲ್ ಬಸ್ ಚಾಲಕನೊಬ್ಬ ಕುಡಿದು (Drunk and drive) ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ವ್ಯಕ್ತಿಯೊಬ್ಬರು (Road Accident) ಬಲಿಯಾಗಿದ್ದಾರೆ. ಇಲ್ಲಿನ ದೊಡ್ಡಬಾಣಸವಾಡಿ ಬಳಿ ಸ್ಕೂಲ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಂಜಿನಪ್ಪ (65) ಎಂಬಾತ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಜಿನಪ್ಪಗೆ ಡಿಕ್ಕಿ ಹೊಡೆಯುವ ಮುನ್ನ ಸ್ಕೂಲ್ ಬಸ್ ಚಾಲಕ ಸುಭಾಷ್ ಎಂಬಾತ (27) ಮೊದಲು ಮಹಿಳೆಗೆ ಗುದ್ದಿದ್ದಾನೆ. ಆದರೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ.
ಖಾಸಗಿ ಶಾಲೆಯ ಮಕ್ಕಳನ್ನು ಮನೆಗೆ ಕರೆದೊಯ್ಯುವ ವೇಳೆ ಈ ದುರ್ಘಟನೆ ನಡೆದಿದೆ. ಕುಡಿದ ಮತ್ತಿನಲ್ಲೇ ಸುಮಾರು 25ಕ್ಕೂ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಬಸ್ ಚಲಾಯಿಸಿದ್ದಾನೆ. ಚಾಲನೆ ಮಾಡುವಾಗ ಚಾಲಕ ಸುಭಾಷ್ ಕಂಠಪೂರ್ತಿ ಕುಡಿದಿದ್ದ ಎನ್ನಲಾಗಿದೆ. ಈತನ ಕುಡಿತದ ಚಾಲನೆಗೆ ಆಂಜಿನಪ್ಪ ಜೀವ ಕಳೆದುಕೊಂಡಿದ್ದಾರೆ.
ಆಂಜಿನಪ್ಪ ಅವರು ಮೆಡಿಕಲ್ ಶಾಪ್ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಸ್ಕೂಲ್ ಬಸ್ ಒಮ್ಮೆಲೆ ಆಂಜಿನಪ್ಪವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಆಂಜಿನಪ್ಪರ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದಾರೆ. ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆಂಜಿನಪ್ಪ ಮೃತಪಟ್ಟಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೆಟ್ರೋ ಸ್ಟೇಷನ್ ಬಳಿ ಹೊತ್ತಿ ಉರಿದ ಕಾರು
ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಕಾರಿನಲ್ಲಿ ಆಕಸ್ಮಿಕ ಬೆಂಕಿಯೊಂದು ಕಾಣಿಸಿಕೊಂಡಿದೆ. ಮೆಟ್ರೋ ಸಿಬ್ಬಂದಿಯೊಬ್ಬರ ಕಾರನ್ನು ಸ್ಟೇಷನ್ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಕಾರು ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ