ಬೆಂಗಳೂರು: ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಭಾರತದ ಚುನಾವಣಾ ಆಯೋಗ (Election Commission of India) ಎಸ್‌ಬಿಐ (SBI)ಯಿಂದ ಪಡೆದ ಚುನಾವಣಾ ಬಾಂಡ್ (Electoral Bonds)ಗಳ ಮಾಹಿತಿಯು ಭಾರತೀಯ ಜನತಾ ಪಕ್ಷದ ಮುಖವಾಡವನ್ನು ಕಳಚಿದೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಹೇಳಿದ್ದಾರೆ. ಬಿಜೆಪಿಯು ಇ.ಡಿ. ಮತ್ತು ಐಟಿಗಳ ಮೂಲಕ ಬೆದರಿಕೆ ಒಡ್ಡಿ ದೇಣಿಗೆ ಸಂಗ್ರಹ ಮಾಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ʻನಾ ಖಾವೂಂಗಾ, ನಾ ಖಾನೇ ದೂಂಗಾʼ ಎಂಬ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಜನಪ್ರಿಯ ಘೋಷಣೆಯನ್ನೇ ಇಟ್ಟುಕೊಂಡು ಬಿಜೆಪಿಯನ್ನು ತಿವಿದರು. ರಾಜ್ಯಸಭಾ ಸದಸ್ಯ ಅಜಯ್ ಮಾಕೇನ್, ಪವನ್ ಖೇರಾ , ಡಿಸಿಎಂ ಡಿಕೆ ಶಿವಕುಮಾರ್, ಸಲೀಂ ಅಹ್ಮದ್ ಅವರ ಉಪಸ್ಥಿತಿಯಲ್ಲಿ ಅವರು ಮಾಧ್ಯಮ ಗೋಷ್ಠಿ ನಡೆಸಿದರು.
ʻʻಇವತ್ತು ಒಂದು ಮಹತ್ವದ ವಿಷಯ ದೇಶದ ಮುಂದೆ ಬಂದಿದೆ. ಎಷ್ಟೇ ತೊಂದರೆ ಆದರೂ ಸರಿ ಜನರಿಗೆ ಅದರ ಹಿಂದಿನ ಸತ್ಯ ತಿಳಿಸಬೇಕು ಎಂದು ಬಂದಿದ್ದೇವೆ. ಪ್ರಧಾನಮಂತ್ರಿ ಹರಿಶ್ಚಂದ್ರನ ಹಾಗೆ ಬಹಳ ಮಾತನ್ನು ಆಡುತ್ತಿದ್ದರು. ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇವತ್ತು ಸುಪ್ರೀಂ ಕೋರ್ಟ್ ನಿಂದ ಎಲ್ಲವೂ ಬಹಿರಂಗವಾಗಿದೆ. ಬಿಜೆಪಿ ಹೇಗೆ ಹಣ ಮಾಡಿದೆ ಎಂಬುದು ಚುನಾವಣಾ ಬಾಂಡ್ ನಿಂದ ಬಯಲಾಗಿದೆʼʼ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ʻʻಬಿಜೆಪಿ ಶೇ. 50ರಷ್ಟು ಹಣವನ್ನು ಚುನಾವಣಾ ಬಾಂಡ್ ಮೂಲಕ ಹಣ ಸಂಗ್ರಹಿಸಿದೆ. ಕಾಂಗ್ರೆಸ್ ಪಾಲು ಕೇವಲ 11% ಇದೆ. ಬಿಜೆಪಿಗೆ ಇಷ್ಟೊಂದು ಬೃಹತ್ ಮೊತ್ತದ ದೇಣಿಗೆ ಯಾಕೆ ಕೊಡಲಾಗಿದೆ? ದೇಣಿಗೆ ಕೊಟ್ಟವರು ಯಾರು..?ʼʼ ಎಂದು ಪ್ರಶ್ನಿಸಿದ ಅವರು, ಇದರ ಹಿಂದಿನ ಸತ್ಯ ಈಗ ಬಯಲಾಗಿದೆ. ಯಾರು ಐಟಿ, ಇಡಿ ದಾಳಿಗೆ ತುತ್ತಾಗಿದ್ದರೋ ಅವರು ದೇಣಿಗೆ ನೀಡಿದ್ದಾರೆ. ಅವರ ಮೇಲೆ ಒತ್ತಡ ಹಾಕಿ ದೇಣಿಗೆ ಸಂಗ್ರಹಿಸಲಾಗಿದೆ ಎಂದು ಆರೋಪಿಸಿದರು.
ʻʻಕಾಂಗ್ರೆಸ್ ಪಕ್ಷದ ಅಕೌಂಟ್ ನಲ್ಲಿದ್ದ ಎಲ್ಲ ಹಣವನ್ನು ಫ್ರೀಜ಼್ ಮಾಡಲಾಗಿದೆ. ಹೀಗೆ ಮಾಡಿದರೆ ನಾವು ಚುನಾವಣೆಗೆ ಹೋಗುವುದು ಹೇಗೆ? ನೀವು ದೇಣಿಗೆ ಮೂಲಕ ಸಾವಿರಾರು ಕೋಟಿ ಸಂಗ್ರಹ ಮಾಡಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು, ಸಣ್ಣ ಪುಟ್ಟ ಲೀಡರ್ಸ್ ಕೊಟ್ಟಿರುವ ಹಣವನ್ನ ಫ್ರೀಜ್ ಮಾಡಿದ್ದೀರಿʼʼ ಎಂದು ಹೇಳಿದ ಖರ್ಗೆ ಅವರು, ಬಿಜೆಪಿಯ ಅಕೌಂಟ್‌ಗಳನ್ನು ಫ್ರೀಜ್ ಮಾಡಬೇಕು. ಸ್ಪೆಷಲ್ ಟೀಮ್ ಮೂಲಕ ತನಿಖೆ ನಡೆಸಬೇಕು. ದೇಣಿಗೆ ನೀಡಲು ಯಾರಾದರೂ ಹಿಂಸೆ ಕೊಟ್ಟಿದ್ದಾರಾ? ಒತ್ತಡ ಹಾಕಿದ್ದಾರಾ..? ಎಲ್ಲವನ್ನೂ ತನಿಖೆಗೆ ಒಳಪಡಿಸಬೇಕುʼʼ ಎಂದು ಹೇಳಿದರು.
ಇದನ್ನೂ ಓದಿ : Electoral Bonds: ಚುನಾವಣಾ ಬಾಂಡ್ ಗಳಿಕೆಯಲ್ಲಿ ಕಾಂಗ್ರೆಸ್ ಅನ್ನೂ ಹಿಂದಿಕ್ಕಿದ ಟಿಎಂಸಿ! ಬಿಜೆಪಿ ಪಡೆದದ್ದೆಷ್ಟು?
ಇಲ್ಲಿ ಬಿಜೆಪಿ ಏನೂ ಇಲ್ಲ, ಎಲ್ಲವೂ ಮೋದಿ.. ಮೋದಿ.. ಮೋದಿ
ʻʻಸುಪ್ರೀಂ ಕೋರ್ಟ್ ಎಲ್ಲ ಸತ್ಯಗಳನ್ನೂ ಬಹಿರಂಗಗೊಳಿಸಿದೆ. ಪ್ರಧಾನಿ ಮೋದಿ ಅವರು ಎಲ್ಲವನ್ನೂ ನಾನೇ ನಾನೇ ಎಂದು ಹೇಳಿಕೊಳ್ಳುತ್ತಾರೆ. ಇದು ಮೋದಿ ಸರ್ಕಾರ್, ಮೋದಿ ಕಿ ಗ್ಯಾರಂಟಿ ಅಂತ ಹೇಳುತ್ತಿದ್ದರು. ಕನಿಷ್ಠ ಬಿಜೆಪಿ ಅಂತನೂ ಕೂಡ ಹೇಳುತ್ತಿರಲಿಲ್ಲ. 56 ಇಂಚಿನ ಎದೆ ಅವರಿಗೆ ಇರಬಹುದೇನೋ, ಆದರೆ, ಆವರೂ ಪಾರದರ್ಶಕವಾಗಿರಬೇಕುʼʼ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಎಲ್ಲ ಬಾಂಡ್‌ಗಳ ವಿವರ ನೀಡಲು ಅಜಯ್ ಮಾಕೆನ್ ಒತ್ತಾಯ
ರಾಜ್ಯಸಭಾ ಸದಸ್ಯ ಅಜಯ್ ಮಾಕೆನ್ ಅವರು ಮಾತನಾಡಿ, 22,217 ಚುನಾವಣಾ ಬಾಂಡ್ ವಿತರಿಸಲಾಗಿದೆ. ಆದರೆ 18,871 ಬಾಂಡ್ ಗಳ ಬಗ್ಗೆ ಮಾಹಿತಿ ಮಾತ್ರ ವೆಬ್‌ಸೈಟ್ ನಲ್ಲಿ ಹಾಕಲಾಗಿದೆ. 3346 ಬಾಂಡ್ ಗಳ ಬಗ್ಗೆ ಮಾಹಿತಿಯೇ ಇಲ್ಲ. ಈ 3346 ಬಾಂಡ್‌ಗಳಲ್ಲಿ 2,500 ಕೋಟಿ ಮೊತ್ತ ಇದೆ ಎಂದು ಹೇಳಿದರು.
ಐಟಿ, ಇಡಿ ಬಳಸಿ ಕಿರುಕುಳ ನೀಡಿ ದೇಣಿಗೆ ಸಂಗ್ರಹಿಸಿರುವುದು ಸ್ಪಷ್ಟವಾಗಿದೆ. ಚುನಾವಣಾ ಬಾಂಡ್ ಅಸಾಂವಿಧಾನಿಕ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಕೋರ್ಟ್ ಈ ದೇಣಿಗೆ ಹಣವನ್ನ ಹೇಗೆ ಚುನಾವಣೆಗೆ ಬಳಸಿಕೊಳ್ತಾರೆ ಎಂದು ಪ್ರಶ್ನೆ ಮಾಡಿದ ಅವರು, ಕೋರ್ಟ್ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಿಜೆಪಿಯ ಅಕೌಂಟ್‌ಗಳನ್ನು ಸ್ಥಗಿತಗೊಳಿಸಬೇಕು, ಸ್ಪೆಷಲ್ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹ ಎಂದು ಮಾಕೆನ್ ಹೇಳಿದರು.