Site icon Vistara News

Electric Bike taxi Service : ನಿರ್ಬಂಧ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗೆ ಮಾತ್ರ; ರ‍್ಯಾಪಿಡೊ ಸೇವೆಗೆ ತೊಂದರೆ ಇಲ್ಲ

Electric bike taxi service rapido

ಬೆಂಗಳೂರು: ರಾಜ್ಯ ಸರ್ಕಾರವು (Karnataka Government) ಹಿಂಪಡೆದಿರುವ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ (Electric bike taxi Service) ಆದೇಶದಿಂದಾಗಿ ರ‍್ಯಾಪಿಡೊ ಬೈಕ್‌ ಟ್ಯಾಕ್ಸಿಗಳ ಸೇವೆಗೆ (Rapido bike taxi Service) ಯಾವುದೇ ಅಡಚಣೆ ಆಗುವುದಿಲ್ಲ ಎಂದು ರ‍್ಯಾಪಿಡೊ ಕಂಪನಿ (Rapido company) ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರವು ಮಾರ್ಚ್‌ 6ರಂದು ಹೊರಡಿಸಿದ ಆದೇಶದಲ್ಲಿ ವಿದ್ಯುತ್‌ ಚಾಲಿತ ಬೈಕ್‌ ಟ್ಯಾಕ್ಸಿ ಸೇವೆಗೆ ನೀಡಿದ ಆನುಮತಿಯನ್ನು ಹಿಂದಕ್ಕೆ ಪಡೆದಿತ್ತು. ಇದನ್ನು ಎಲ್ಲ ಮಾದರಿಯ ಬೈಕ್‌ ಟ್ಯಾಕ್ಸಿ ಸೇವೆಗಳಿಗೂ ಅನ್ವಯವಾಗಲಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ರ‍್ಯಾಪಿಡೊ ಸಂಸ್ಥೆ ಸ್ಪಷ್ಟನೆಯನ್ನು ನೀಡಿದೆ.

ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕಂಪೆನಿಯು ರಾಜ್ಯ ಸರ್ಕಾರದ ಆದೇಶವು ವಿದ್ಯುತ್‌ ಚಾಲಿತ ವಾಹನಗಳ ಓಡಾಟಕ್ಕೆ ಮಾತ್ರ ಸಂಬಂಧಿಸಿದ್ದಾಗಿದ್ದು ರ‍್ಯಾಪಿಡೊ (Rapido)ಸೇವೆ ಅಭಾಧಿತವಾಗಿ ಮುಂದುವರಿಯಲಿದೆ ಎಂದು ಹೇಳಿದೆ. 2021 ರಲ್ಲಿ ಅಂದಿನ ರಾಜ್ಯ ಸರ್ಕಾರವು ಪರಿಚಯಿಸಿದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಈಗ ರಾಜ್ಯ ಸರ್ಕಾರವು 2024ರಲ್ಲಿ ಹಿಂಪಡೆದಿದೆ. ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಕರ್ನಾಟಕ ರಾಜ್ಯದೊಳಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಮಾತ್ರ ಸಂಬಂಧಿಸಿದೆ. ಪೆಟ್ರೋಲ್‌ ಆಧರಿತ ಬೈಕ್‌ ಟ್ಯಾಕ್ಸಿಗಳ ಸೇವೆಗೆ ಇದು ಅನ್ವಯಿಸುವುದಿಲ್ಲ.

ರಾಜ್ಯ ಸರ್ಕಾರವು ಹೊರಡಿಸಿದ ಅಧಿಸೂಚನೆಯು ಕರ್ನಾಟಕ ರಾಜ್ಯದಲ್ಲಿ ರ‍್ಯಾಪಿಡೊ (Rapido) ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳಿಗೆ ಸಂಬಂಧಿಸಿಲ್ಲ ಮತ್ತು ರ‍್ಯಾಪಿಡೊ (Rapido)ಕರ್ನಾಟಕ ರಾಜ್ಯದಲ್ಲಿ ತನ್ನ ಗ್ರಾಹಕರು ಮತ್ತು ಕ್ಯಾಪ್ಟನ್‌ಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸಲು ಮತ್ತು ಸೇವೆಯನ್ನು ಮುಂದುವರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರ‍್ಯಾಪಿಡೊ (Rapido) ಕರ್ನಾಟಕ ರಾಜ್ಯದಲ್ಲಿ ತನ್ನ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳ ಬಗ್ಗೆ 2021 ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಆಗಸ್ಟ್ 2021 ರಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯವು ರ‍್ಯಾಪಿಡೊ (Rapido) ಪರವಾಗಿ ಮಧ್ಯಂತರ ಆದೇಶವನ್ನು ನೀಡಿತು ಮತ್ತು ರ‍್ಯಾಪಿಡೊ (Rapido) ಅಥವಾ ಅದರ ಸವಾರರ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮವನ್ನು ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಪ್ರಕರಣವನ್ನು ಕೊನೆಯದಾಗಿ ಮಾರ್ಚ್ 7, 2024ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು ಮತ್ತು ಇದೀಗ ಮಧ್ಯಂತರ ಆದೇಶದ ವಿಸ್ತರಣೆಯೊಂದಿಗೆ ಮಾರ್ಚ್ 20, 2024ಕ್ಕೆ ಮುಂದೂಡಲಾಗಿದೆ.

ರ‍್ಯಾಪಿಡೊ (Rapido) ಕಾನೂನು ಮಾನದಂಡಗಳನ್ನು ಎತ್ತಿಹಿಡಿಯಲು ಮತ್ತು ಅದರ ಬಳಕೆದಾರರಿಗೆ ಉನ್ನತ ಮಟ್ಟದ ಸೇವೆಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ನಾವು ಕಾನೂನು ಪ್ರಕ್ರಿಯೆಯೊಂದಿಗೆ ಸಹಕರಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕವಾಗಿರುತ್ತೇವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Electric bike Taxi service : ರಾಜ್ಯದಲ್ಲಿ ಆ್ಯಪ್‌ ಆಧಾರಿತ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ಸ್ಟಾಪ್‌

ಸರ್ಕಾರ ಹೊರಡಿಸಿದ ಹೊಸ ಆದೇಶದಲ್ಲಿ ಏನಿದೆ?

ಸರ್ಕಾರದ ಅಧಿಸೂಚನೆ 14/7/2021ರ ಅನ್ವಯ ಸಾರ್ವಜನಿಕ ಸಾರಿಗೆಗಾಗಿ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಒದಗಿಸುವ ಉದ್ದೇಶದಿಂದ, ಮೋಟಾರು ವಾಹನ ಕಾಯ್ದೆ 1988ರ (1998ರ ಕೇಂದ್ರ ಅಧಿನಿಯಮ 59ರ ಕಲಂ 2ರ ಉಪಕಲಂ (1) ಕ್ರಮ ಸಂಖ್ಯೆ: 38(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ನಗರ ಪ್ರದೇಶಗಳಿಗೆ ಅನ್ವಯಿಸುವಂತೆ ‘ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021’ ಅನ್ನು ಜಾರಿಗೆ ತರಲಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಅಗತ್ಯತೆ ಮತ್ತು ಜಾರಿಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, BMRCL ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿದಂತೆ ವರದಿಯು ಪೂರಕವಾಗಿರುವುದಿಲ್ಲವೆಂದು ತಿಳಿಸಿದೆ. ಪ್ರಸ್ತುತ ಕೆಲವು ಖಾಸಗಿ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರಿಗೇತರ (Non-transport) ದ್ವಿಚಕ್ರ ವಾಹನಗಳನ್ನು ಸಾರಿಗೆ (Transport) ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಹೀಗಾಗಿ ಯೋಜನೆಯನ್ನು ರದ್ದು ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು. ಇದರಲ್ಲಿ ಪೆಟ್ರೋಲ್‌ ಚಾಲಿತ ಬೈಕ್‌ಗಳ ಉಲ್ಲೇಖವಿಲ್ಲ.

Exit mobile version