ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ವೇಳೆ ಎಲೆಕ್ಟ್ರಾನಿಕ್ ಸಿಗರೇಟ್ ಪತ್ತೆಯಾಗಿದೆ. ಇದು ಶಿಕ್ಷಕರು ಹಾಗೂ ಪೋಷಕರಲ್ಲಿ ಮತ್ತೊಂದು ಸುತ್ತಿನ ಆತಂಕ ಮೂಡಿಸಿದೆ.
ಇನ್ನೂ ಹದಿಹರೆಯಕ್ಕೆ ಕಾಲಿಡುವ ಮುನ್ನವೇ ವಿದ್ಯಾರ್ಥಿಗಳು ಪ್ರೌಢವಯಸ್ಕರ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಈ ಹಿಂದೆ ಆತಂಕ ವ್ಯಕ್ತವಾಗಿತ್ತು. ಬ್ಯಾಗ್ ಚೆಕ್ಕಿಂಗ್ ವೇಳೆ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು ಸಿಕ್ಕಿದುದು ಇದಕ್ಕೆ ಕಾರಣವಾಗಿತ್ತು, ಈಗ ಮಕ್ಕಳ ಬ್ಯಾಗ್‌ನಲ್ಲಿ ವ್ಯಾಪೋಸ್ ಸರದಿ.
7 ವರ್ಷದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಪತ್ತೆಯಾಗಿದೆ. ನಗರದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಚಾರವನ್ನು ಪೋಷಕರ ಗಮನಕ್ಕೆ ತರಲಾಗಿದೆ. ಇದರಿಂದ ಹಲವು ಆತಂಕಗಳು ಮೂಡಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳು ಬಹು ಸುಲಭವಾಗಿ ತಂಬಾಕು ಚಟಕ್ಕೆ ಬಲಿಯಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಪೋಷಕರಿಗೆ ತಿಳಿಯದೇ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಸಿಗರೇಟ್ ಸೇವಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಗರೇಟ್ ಬ್ಯಾನ್ ಆಗಿದ್ದರೂ ಮಕ್ಕಳಿಗೆ ಸುಲಭವಾಗಿ ಸಿಗುತ್ತಿದೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಸಿಗರೇಟ್ ತರಿಸುತ್ತಿದ್ದಾರೆ. ಮಕ್ಕಳು ಎಲೆಕ್ಟ್ರಾನಿಕ್ ಸಿಗರೇಟ್ ಚಟ ಹಿಡಿಸಿಕೊಳ್ಳದಂತೆ ಕಠಿಣ ಕಾನೂನು ಬೇಕು ಎಂದು ಶಿಕ್ಷಕರು ಹಾಗೂ ಪೋಷಕರು ಆಗ್ರಹಿಸಿದ್ದಾರೆ. ಮಕ್ಕಳ ಕೈಗೆ ಸಿಗರೇಟ್ ಸಿಗದಂತೆ, ಚಿಲ್ಲರೆಯಾಗಿ ಸಿಗರೇಟ್ ಮಕ್ಕಳ ಕೈಗೆ ಅಂಗಡಿಗಳವರು ಕೊಡದಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಲಾಗಿದೆ.
ಇದನ್ನೂ ಓದಿ: ಇಂಡಿಗೋ ವಿಮಾನದ ಟಾಯ್ಲೆಟ್‌ನಲ್ಲಿ ಸಿಗರೇಟ್ ಸೇದಿ ಸಿಕ್ಕಿಬಿದ್ದ; ಒಂದು ಸಿಗರೇಟ್‌ಗಾಗಿ ಜೈಲು ಸೇರಿದ!