Site icon Vistara News

Elephant Attack : ಕೇರಳದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಯಾಕೆಂದರೆ, ಕೊಂದಿದ್ದು ಕರ್ನಾಟಕದ ಆನೆ!

Elephant Attack karnataka Compensation

ಬೆಂಗಳೂರು: ಕೇರಳದ ವಯನಾಡಿನ (Wayanad in Kerala) ಪೂಲ್ಪಳ್ಳಿ ಪ್ರದೇಶದಲ್ಲಿ ಕಳೆದ ಫೆಬ್ರವರಿ 10ರಂದು ಕಾಡಾನೆಯೊಂದು ವಸತಿ ಪ್ರದೇಶಕ್ಕೆ ನುಗ್ಗಿ (Elephant Attack) 42 ವರ್ಷದ ಟ್ಯಾಕ್ಸಿ ಡ್ರೈವರ್‌ ಅಜೀಶ್‌ (Taxi Driver Ajeesh Death) ಎಂಬವರನ್ನು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ (Karnataka Government) 15 ಲಕ್ಷ ರೂ. ಪರಿಹಾರವನ್ನು (15 Lakhs Compensation) ನೀಡಿರುವುದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಪ್ರತಿಪಾದಿಸುವ ಕಾಂಗ್ರೆಸ್‌ ಕೇರಳದಲ್ಲಿ ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿಗೆ ಪರಿಹಾರ ನೀಡುವಾಗ ನಮ್ಮ ಹಕ್ಕು ನೆನಪಾಗಲಿಲ್ಲವೇ? ರಾಹುಲ್‌ ಗಾಂಧಿ ಅವರು ಹೇಳಿದರು ಎಂದ ಮಾತ್ರಕ್ಕೆ ಅವರನ್ನು ಓಲೈಸಲು ಅಜೀಶ್‌ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿರುವುದು ಸರಿಯೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಇದರ ನಡುವೆ, ಕರ್ನಾಟಕ ಯಾಕೆ ಪರಿಹಾರ ಕೊಡಬೇಕಾಗಿ ಬಂತು ಎಂಬ ವಿಚಾರಕ್ಕೆ ಸಂಬಂಧಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಅವರು ಸ್ಪಷ್ಟನೆ ನೀಡಿದ್ದಾರೆ.

ಅಜೀಶ್‌ ಜೋಸೆಫ್‌ ಪನಚಿಯಿಲ್‌ ಎಂಬ ಟ್ಯಾಕ್ಸಿ ಚಾಲಕನ ಸಾವಿನಿಂದಾಗಿ ವಯನಾಡ್‌ ಪ್ರದೇಶದಲ್ಲಿ ದೊಡ್ಡ ಆಘಾತ ಉಂಟಾಗಿದೆ. ದಾಳಿ ಮಾಡಿದ ಆನೆ ಎಲ್ಲಿ ಹೋಗಿದೆ ಎಂದು ಪತ್ತೆ ಹಚ್ಚಲು ಡ್ರೋನ್‌ಗಳನ್ನು ಬಳಸಲಾಗಿದೆ. ಆದರೆ, ಡ್ರೋನ್‌ಗೂ ಸಿಗದೆ ಈ ಆನೆ ತಲೆ ಮರೆಸಿಕೊಂಡಿದೆ. ಈ ನಡುವೆ, ಆನೆ ವಯನಾಡಿನ ಕೇರಳ ಭಾಗದಲ್ಲಿ ದಾಳಿ ನಡೆಸಿ ಕರ್ನಾಟಕದ ಕಾಡಿನ ಪ್ರದೇಶವನ್ನು ಪ್ರವೇಶಿಸಿದೆ. ಆನೆಯನ್ನು ಪತ್ತೆ ಹಚ್ಚಲು ಕೇರಳದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಶತ ಪ್ರಯತ್ನ ನಡೆಸುತ್ತಿದ್ದು, ಅವರಿಗೆ ಕರ್ನಾಟಕದ ತಂಡವೂ ಸಹಾಯ ಮಾಡಿದೆ.

ನಿಜವೆಂದರೆ ಇದು ಕೇರಳದ ಆನೆಯಲ್ಲ, ಕರ್ನಾಟಕದ್ದೇ ಆನೆ!

ಅಜೀಶ್‌ ಅವರನ್ನು ಮನೆಯ ಗೇಟ್‌ ಮುರಿದು ಒಳ ನುಗ್ಗಿ ಕೊಂದು ಹಾಕಿದ ಈ ಪುಂಡಾನೆ ಕರ್ನಾಟಕಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ. ಕರ್ನಾಟಕದ ಈ ಆನೆ ಗಡಿಯನ್ನು ದಾಟಿ ಹೋಗಿ ವಯನಾಡಿನಲ್ಲಿ ಅನಾಹುತ ಸೃಷ್ಟಿಸಿ ಮರಳಿ ಬಂದಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಇದು ಕರ್ನಾಟಕದ ಆನೆಯೇ ಎನ್ನುವುದಕ್ಕೆ ಸಾಕಷ್ಟು ದಾಖಲೆಗಳು ಇವೆ.

ಇದನ್ನೂ ಓದಿ : Congress politics : ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಗೆ ಕರ್ನಾಟಕದಿಂದ 15 ಲಕ್ಷ ರೂ. ಪರಿಹಾರ!

ಇದು ಬೇಲೂರಿನಲ್ಲಿ ಸೆರೆಯಾದ ಮಕ್ನಾ

ವಯನಾಡಿನಲ್ಲಿ ಅನಾಹುತವನ್ನು ಸೃಷ್ಟಿಸಿರುವ ಈ ಆನೆ 2023ರ ನವೆಂಬರ್‌ನಲ್ಲಿ ಹಾಸನ ಜಿಲ್ಲೆಯಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದ ಆನೆಯಾಗಿದೆ. ಅದನ್ನು ಅಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಶಕ್ಕೆ ಪಡೆದು ಬಂಡೀಪುರ ಹುಲಿ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಜತೆಗೆ ಅದರ ಚಲನವಲನಗಳನ್ನು ಗಮನಿಸಲು ರೇಡಿಯೊ ಕಾಲರ್‌ಗಳನ್ನು ಕೂಡಾ ಅಳವಡಿಸಲಾಗಿತ್ತು.

ಸುಮಾರು ಎರಡು ತಿಂಗಳ ಬಳಿಕ ಇದೇ ಆನೆ ವಯನಾಡಿನಲ್ಲಿ ಕಾಣಿಸಿಕೊಂಡಿತ್ತು. ಅಂದರೆ ಕರ್ನಾಟಕದ ಗಡಿಯನ್ನು ದಾಟಿ ಅದು ಕೇರಳದ ಭಾಗಕ್ಕೆ ಹೋಗಿತ್ತು. ಅಲ್ಲಿ ದಾಳಿ ನಡೆಸಿ ಮರಳಿ ಕರ್ನಾಟಕದ ಗಡಿಯನ್ನೇ ಪ್ರವೇಶ ಮಾಡಿದೆ. ಕಳೆದ 10 ದಿನಗಳಿಂದ ಈ ಆನೆಗಾಗಿ ಗಡಿ ಭಾಗದಲ್ಲಿ ಹುಡುಕಾಟ ನಡೆಯುತ್ತಿದೆ. ಈಗಲೂ ಅದು ಕರ್ನಾಟಕದ ಗಡಿಯೊಳಗೇ ಇದೆ ಎನ್ನಲಾಗಿದೆ. ಕರ್ನಾಟಕದ ಆನೆ ದಾಳಿಗೆ ಸಂಬಂಧಿಸಿ ಈ ಭಾಗದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದನ್ನು ಮಾನವೀಯ ನೆಲೆಯಿಂದ ಪರಿಗಣಿಸಿ ಪರಿಹಾರ ನೀಡುವಂತೆ ವಯನಾಡ್‌ ಸಂಸದರಾಗಿರುವ ರಾಹುಲ್‌ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದನ್ನು ಪರಿಗಣಿಸಿ ಅರಣ್ಯ ಇಲಾಖೆ ಕರ್ನಾಟಕದಲ್ಲಿ ಆನೆ ದಾಳಿ ಸಾವಿಗೆ ನೀಡುವ ಪರಿಹಾರವನ್ನು ಕೇರಳದ ವ್ಯಕ್ತಿಗೂ ನೀಡಿದೆ.

ಆನೆಗಳಿಗೆ ಗಡಿ ಇಲ್ಲ ಎಂದು ವಾದಿಸಿದ್ದ ಈಶ್ವರ ಖಂಡ್ರೆ

ಆನೆಗಳ ವಿಚಾರದಲ್ಲಿ ಅವುಗಳಿಗೆ ಗಡಿ ಇಲ್ಲ, ಕರ್ನಾಟಕದ ಆನೆ, ತಮಿಳುನಾಡಿನ ಆನೆ ಎಂಬ ಲೆಕ್ಕವಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ವಾದಿಸಿದ್ದರು. ಇದೇ ವಾದವನ್ನು ಆರಂಭದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೂ ಮುಂದಿಟ್ಟಿದ್ದರು. ಆದರೆ, ಕೊನೆಗೆ ರಾಹುಲ್‌ ಗಾಂಧಿ ಅವರೇ ಈ ವಿಚಾರವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರಿಂದ ಅವರು ಪರಿಹಾರ ನೀಡಲು ಮುಂದಾದರು ಎನ್ನಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವುದು ಕರ್ನಾಟಕದಲ್ಲಿ

ದೇಶದಲ್ಲಿ ಒಟ್ಟು 30000ಕ್ಕೂ ಅಧಿಕ ಆನೆಗಳಿವೆ. ಆದರೆ, ಅತಿ ಹೆಚ್ಚು ಆನೆಗಳಿರುವುದು ಕರ್ನಾಟಕ ರಾಜ್ಯದಲ್ಲಿ. ಕರ್ನಾಟಕದಲ್ಲಿ ಪ್ರಸಕ್ತ 6395 ಆನೆಗಳಿವೆ. ಎರಡನೇ ಅತಿ ಹೆಚ್ಚು ಸಂಖ್ಯೆಯ ಆನೆಗಳಿರುವುದು ಅಸ್ಸಾಂನಲ್ಲಿ (5719), ಕೇರಳದಲ್ಲಿ 3054, ತಮಿಳುನಾಡಿನಲ್ಲಿ 2961 ಆನೆಗಳಿವೆ.

Exit mobile version