Site icon Vistara News

ವಿದ್ಯುತ್‌ ಚಾಲಿತ ವಾಹನಗಳ ದರ ಕಡಿಮೆ ಇರಲಿ: ಉತ್ಪಾದಕರಿಗೆ ಸಿಎಂ ಬೊಮ್ಮಾಯಿ ಕಿವಿಮಾತು

cm bommai in ev function

ಬೆಂಗಳೂರು: ವಿದ್ಯುತ್‌ ಚಾಲಿತ ವಾಹನದ (ಇವಿ) ದರ ಜನಸಾಮಾನ್ಯರಿಗೆ ನಿಲುಕುವಂತಿರಬೇಕು. ಆಗ ಮಾತ್ರ ಅವುಗಳ ಬಳಕೆ ಹೆಚ್ಚಾಗುತ್ತದೆ ಎಂದು ಇವಿ ಉತ್ಪಾದಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವತಿಯಿಂದ ಆಯೋಜಿಸಲಾಗಿದ್ದ ಇವಿ ಅಭಿಯಾನ-೨೦೨೨ ಕಾರ್ಯಕ್ರಮ ಹಾಗೂ ೧೫೨ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿದರು.

ಇವಿಗಳಿಗೆ ಉತ್ತಮ ಬ್ಯಾಟರಿ ಮತ್ತು ಮೋಟಾರ್ ಅಗತ್ಯವಿದೆ. ಇವುಗಳನ್ನು ಭಾರತದಲ್ಲಿಯೇ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ನಮ್ಮ ಯುವಕರೇ ಉತ್ಪಾದಿಸುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಸರ್ಕಾರ ಇವಿ ಪಾಲಿಸಿ ರೂಪಿಸಿದೆ. ಬೆಸ್ಕಾಂ ಸಂಸ್ಥೆಯನ್ನು ಇದಕ್ಕೆ ನೋಡಲ್ ಏಜೆನ್ಸಿ ಮಾಡಿ ಬೆಂಗಳೂರಿನಲ್ಲಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಸ್ಟೇಷನ್‍ಗಳ ಅವಶ್ಯಕತೆ ಇದೆ. ಅವುಗಳನ್ನು ಬೆಸ್ಕಾಂ ವತಿಯಿಂದ ಸ್ಥಾಪಿಸಲಾಗುವುದು ಎಂಬ ವಿಶ್ವಾಸವಿದೆ ಎಂದರು.

ಬ್ಯಾಟರಿ ಸ್ವಾಪಿಂಗ್ ಅನ್ನು ಯಶಸ್ವಿಗೊಳಿಸಬೇಕಿದೆ ಎಂದ ಬೊಮ್ಮಾಯಿ, ಮುಂಬರುವ ದಿನಗಳಲ್ಲಿ ಬ್ಯಾಟರಿ ಸ್ವಾಪಿಂಗ್‌ಗೆ ಅತಿ ಹೆಚ್ಚಿನ ಮಹತ್ವವನ್ನು ನಾವೆಲ್ಲರೂ ನೀಡಬೇಕಿದೆ. ಕಡಿಮೆ ವೆಚ್ಚದಲ್ಲಿ ಇವಿಗಳು ಜನಸಾಮಾನ್ಯರಿಗೆ ಲಭಿಸುವಂತಿರಬೇಕು ಎಂದರು.

ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ

ನವೀಕರಿಸಬಹುದಾದ ಇಂಧನಕ್ಕೆ ಬಹಳ ದೊಡ್ಡ ಮಹತ್ವವನ್ನು ನೀಡಲಾಗಿದೆ. ಇಡೀ ಭಾರತದಲ್ಲಿ ಸೌರಶಕ್ತಿಯನ್ನು ಅತಿ ಹೆಚ್ಚು ಉತ್ಪಾದಿಸುತ್ತಿರುವ ರಾಜ್ಯ ಕರ್ನಾಟಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸೌರಶಕ್ತಿಯ ಸಂಗ್ರಹ ಹೇಗೆ ಮಾಡಬೇಕೆನ್ನುವ ಸವಾಲು ನಮ್ಮ ಮುಂದಿದೆ. ಅದಕ್ಕೆ ಪಿಎಸ್‍ಪಿ ಯೋಜನೆಗಳನ್ನು ಕೇಂದ್ರ ಸರ್ಕಾರದ ನೆರವಿನಿಂದ ಕೈಗೊಳ್ಳಲಾಗಿದೆ. 2-3 ಪಿಎಸ್‍ಪಿ ಘಟಕಗಳಳು ಕರ್ನಾಟಕದಲ್ಲಿ ತಲೆ ಎತ್ತಲಿವೆ. ಸೌರಶಕ್ತಿಯ ಸಂಗ್ರಹ ಹಾಗೂ ಮರುಬಳಕೆಗೆ ಇದು ಉತ್ತಮವಾದ ಸಾಧನವಾಗಲಿದೆ.

ಹೈಡ್ರೋಜನ್ ಇಂಧನವನ್ನು ತಯಾರು ಮಾಡಲು ಈಗಾಗಲೇ ಎರಡು ಕಂಪನಿಗಳೊಂದಿಗೆ ಒಪ್ಪಂದ ಮಡಿಕೊಳ್ಳಲಾಗಿದೆ. ಹೈಡ್ರೋಜನ್ ಇಂಧನ ನವೀಕರಿಸಬಹುದಾದ ಇಂಧನಗಳ ಪೈಕಿ ಅತ್ಯುತ್ತಮವಾದ್ದದ್ದು. ಅದಾದರೆ ನಮ್ಮ ದೇಶದ ಇಂಧನ ವೆಚ್ಚವನ್ನು ಉಳಿಸಬಹುದು ಎಂದರು.

ಇದನ್ನೂ ಓದಿ: ಸರ್ಕಾರಿ ಸೇವಾ ನಿವೃತ್ತಿ ನಂತರ ಅನಗತ್ಯ ಅಲೆದಾಟಕ್ಕೆ ಬ್ರೇಕ್;‌ ತ್ವರಿತ ಸೌಲಭ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

Exit mobile version