ಬೆಂಗಳೂರು: ಇಂಗ್ಲಿಷ್ ವರ್ಣಮಾಲೆಯಲ್ಲಿ (English Alphabet) 26 ಅಕ್ಷರಗಳಿರುವುದು ಗೊತ್ತಿರುವ ಸಂಗತಿ. ಆದರೆ, ನಗರದ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ (LISAA School of Design) ವಿದ್ಯಾರ್ಥಿಗಳು, 27ನೇ ಅಕ್ಷರ ವಿನ್ಯಾಸಗೊಳಿಸುವ ಸವಾಲು ಕೈಗೆತ್ತಿಕೊಂಡಿದ್ದು, ಆ ಮೂಲಕ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ನಗರದ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್‌ನಲ್ಲಿ ಗುರುವಾರ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಲಿಸಾ ಸ್ಕೂಲ್ ಆಫ್ ಡಿಸೈನ್ ಮತ್ತು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್ ಲಿಸಾ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರದ ಮುಖ್ಯ ಉದ್ದೇಶ ಹೊಸ ಅಕ್ಷರವನ್ನು ವಿನ್ಯಾಸಗೊಳಿಸುವುದಾಗಿತ್ತು.
ಈ ಕುರಿತು ಬೆಂಗಳೂರಿನ ಲಿಸಾ ಸ್ಕೂಲ್ ಆಫ್ ಡಿಸೈನ್ ಸಂಸ್ಥಾಪಕರು ಮತ್ತು ನಿರ್ದೇಶಕಿ ಅವಿ ಕೆಸ್ವಾನಿ ಅವರು ಮಾತನಾಡಿ, “ಭಾಷೆಯೊಂದು ಸಂವಹನ ಕ್ರಿಯೆಗೆ ನೆರವಾಗುವ ಮಾಧ್ಯಮ. ಅದರಂತೆ ಎಲ್ಲಾ ಅಕ್ಷರಗಳಿಗೂ ಅದರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ನಾವು ವಿನ್ಯಾಸಕಾರರು ಈ ಮೂಲಕ ಹೊಸ ಯೋಚನೆಗಳನ್ನು ಹೊರತರಲು ವೇದಿಕೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ನಮ್ಮ ಉದ್ದೇಶ ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಸವಾಲೊಂದನ್ನು ನೀಡುವುದಾಗಿದೆ. ಮೂಲತಃ ಫ್ರೆಂಚ್ ಸ್ಕೂಲ್ ಆಫ್ ಡಿಸೈನ್ ಆಗಿರುವುದರಿಂದ ಇಂಗ್ಲಿಷ್ ಮಾತನಾಡುವವರು ಕೆಲ ಫ್ರೆಂಚ್ ಉಚ್ಚಾರಣೆ ಮಾಡಲು ಕಷ್ಟಪಡುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ 27ನೇ ಅಕ್ಷರವನ್ನು ವಿನ್ಯಾಸಗೊಳಿಸುವ ಮೂಲಕ ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗೆ ಸೇತುವೆ ಕಲ್ಪಿಸುವುದಾಗಿದೆ” ಎಂದು ಹೇಳಿದರು.
ಇದನ್ನೂ ಓದಿ | ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ
ಫ್ರಾನ್ಸ್‌ನ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಜೊತೆಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದು, ಈ ಮೂಲಕ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಕರಕುಶಲ ಕೇಂದ್ರ ಮತ್ತು ಮೈಸೂರಿನ ಅರಮನೆಯ ಪರಿಚಯ ಮಾಡಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.