Site icon Vistara News

Eshwara Khandre : ಅರಣ್ಯ ಒತ್ತುವರಿ ಪ್ರಕರಣ ಇತ್ಯರ್ಥಕ್ಕೆ ಹೆಚ್ಚುವರಿ ಎಫ್‌ಎಸ್‌ಒ ನೇಮಕ: ಸಚಿವ ಖಂಡ್ರೆ

Eshwar Khandre Meeting forest Department1

ಬೆಂಗಳೂರು: ಅರಣ್ಯ ಭೂಮಿ ಒತ್ತುವರಿ (Forest Encroachment) ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಹಲವು ವರ್ಷಗಳ ಹಿಂದೆ ಸೆಕ್ಷನ್ 4 ಆಗಿದ್ದರೂ ಮುಂದಿನ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.)ಗಳನ್ನು ನೇಮಕ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Minister Eshwara Khandre) ಸೂಚಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ನಡೆದ ಉನ್ನತಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೀಸಲು ಅರಣ್ಯ ಎಂದು ಘೋಷಿಸುವ ಪೂರ್ವಭಾವಿಯಾಗಿ ಸೆಕ್ಷನ್ 4 ಆದ ನಂತರವೂ ಒತ್ತುವರಿ ಮತ್ತು ಅಕ್ರಮ ಮಂಜೂರಾತಿಗಳಾಗಿದ್ದು, ಇದನ್ನು ನಿಯಂತ್ರಿಸಲು ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಹೇಳಿದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದ ವಿವಿಧ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳಿಂದ ಯಾವ ಯಾವ ವಲಯದಲ್ಲಿ ಎಷ್ಟು ಪ್ರಕರಣ ಬಾಕಿ ಇದೆ ಎಂಬ ಮಾಹಿತಿ ಪಡೆದ ಸಚಿವರು, ಸೆಕ್ಷನ್ 4 ಆಗಿರುವ ಒಟ್ಟು ಪ್ರದೇಶದಲ್ಲಿ ಜನವಸತಿ, ತಕರಾರು ಮತ್ತು ನ್ಯಾಯಾಲಯದಲ್ಲಿ ಬಾಕಿ ಇಲ್ಲದ ಪ್ರದೇಶಗಳನ್ನು ಮೊದಲ ಹಂತದಲ್ಲಿ ಸೆಕ್ಷನ್ 17 ಮಾಡಿ, ನಂತರ ಉಳಿದ ಪ್ರಕರಣಗಳ ಅಹವಾಲು ಆಲಿಸಿ ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

Eshwara Khandre : ಸಾರ್ವಜನಿಕರಿಗೆ ಜಂಟಿ ಸರ್ವೆಯ ಮಾಹಿತಿ

ಈಗಾಗಲೇ ಅರಣ್ಯ, ಕಂದಾಯ ಭೂಮಿಯ ಜಂಟಿ ಸರ್ವೆ ಆಗಿರುವ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಅರಣ್ಯ ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಸೂಚಿಸಿದ ಸಚಿವರು, ಬೇಡಿಕೆ ಬಂದ ಕಡೆಗಳಲ್ಲಿ ಜಂಟಿ ಸರ್ವೆ ನಡೆಸಲು ಕ್ರಮ ವಹಿಸುವಂತೆ ತಿಳಿಸಿದರು.

ಇದನ್ನೂ ಓದಿ: Eshwara Khandre : ನಗರ ಪ್ರದೇಶದ ಅನಧಿಕೃತ ಸ್ವತ್ತುಗಳಿಗೆ ಇನ್ನು ‘ಬಿ’ ಖಾತೆ?

Eshwara Khandre : ಹೊರ ಗುತ್ತಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ

ಹೊರಗುತ್ತಿಗೆ ನೌಕರರಿಗೆ ಸಕಾಲದಲ್ಲಿ ವೇತನ ಆಗುತ್ತಿಲ್ಲ, ಆನೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗೆ ಆಹಾರ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪರಾಮರ್ಶೆ ನಡೆಸಿದ ಸಚಿವರು ಆಯಾ ತಿಂಗಳೇ ಸಿಬ್ಬಂದಿಗೆ ವೇತನ ಆಗುವಂತೆ ಕ್ರಮವಹಿಸಬೇಕು. ವನ್ಯಜೀವಿ ಕಾರ್ಯಾಚರಣೆ ನಡೆಸುವ ಸಿಬ್ಬಂದಿಗೆ ಸಾಕಷ್ಟು ಪ್ರಮಾಣದ ಆಹಾರ ಧಾನ್ಯ ಅಥವಾ ಅದಕ್ಕೆ ಸಮನಾದ ಹಣವನ್ನು ನೀಡುವಂತೆ ಸೂಚನೆ ನೀಡಿದರು.

15 ದಿನಕ್ಕೊಮ್ಮೆ ನೀರುಗುಂಡಿ ಮೇಲ್ವಿಚಾರಣೆಗೆ ಸೂಚನೆ

ಬೇಸಿಗೆಯಲ್ಲಿ ಕಾಡಿನಲ್ಲಿರುವ ಜಲಗುಂಡಿಗಳು ಬರಿದಾದರೆ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ವನ್ಯಜೀವಿಗಳಿಗೆ ಕಾಡಿನೊಳಗೆ ನೀರು ಲಭ್ಯವಾಗುವಂತೆ ಕ್ರಮವಹಿಸಲು ಮತ್ತು ಕಾಡಿನ ಕೆರೆಕಟ್ಟೆಗಳಿಗೆ ನೀರು ಹರಿಸಿ (ಮರುಪೂರಣ), ಪ್ರತಿ 15 ದಿನಕ್ಕೊಮ್ಮೆ ಮೇಲ್ವಿಚಾರಣೆ ಅಥವಾ ಪರಿವೀಕ್ಷಣೆ ಮಾಡುವಂತೆ ಸ್ಪಷ್ಟ ನಿರ್ದೇಶನವನ್ನು ಈಶ್ವರ ಖಂಡ್ರೆ ನೀಡಿದರು.

ಕಾಡ್ಗಿಚ್ಚು- ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ

ಈ ಬಾರಿ ಫೆಬ್ರವರಿಯಲ್ಲಿಯೇ ಬಿರು ಬೇಸಿಗೆ ಆರಂಭವಾಗಿದ್ದು, ಮುಳ್ಳಯ್ಯನಗಿರಿ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಮೊದಲಾದ ಕಡೆಗಳಲ್ಲಿ ಕಾಡ್ಗಿಚ್ಚಿನಿಂದ ಸಾಕಷ್ಟು ಸಸ್ಯಸಂಪತ್ತು ಭಸ್ಮವಾಗಿದೆ. ಮಳೆಗಾಲದವರೆಗೆ ಕಾಡ್ಗಿಚ್ಚು ಪ್ರಕರಣ ಹೆಚ್ಚಾಗದಂತೆ ತೀವ್ರ ಕಟ್ಟೆಚ್ಚರ ವಹಿಸಲು ಸೂಚಿಸಿದರು.
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದಲ್ಲಿ ನಿರ್ದಾಕ್ಷಿಣ್ಯವಾಗಿ ಬಂಧಿಸಿ, ಕಠಿಣ ಶಿಕ್ಷೆ ಆಗುವಂತೆ ಕ್ರಮವಹಿಸಲು ಸೂಚಿಸಿದರು.

Eshwara Khandre : ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಮತ್ತು ಸಿಂಹ ಸಫಾರಿಯಿರುವ ರೀತಿಯಲ್ಲೇ ಪ್ರತ್ಯೇಕ ಚಿರತೆ ಸಫಾರಿ ಆರಂಭಿಸಲು ಸೂಚಿಸಿದ ಸಚಿವರು, ಚಿರತೆ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೂ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

Exit mobile version