Site icon Vistara News

Excise revenue: ಇದು ಎಣ್ಣೆ ಮಹಿಮೆ! ಟಾರ್ಗೆಟ್‌ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್‌ ಹೆಚ್ಚು ವರಮಾನ

Excise revenue excise department went beyond the target and 15 percent more income

ಬೆಂಗಳೂರು: ಈ ಬೇಸಿಗೆಯಲ್ಲಿ ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದ ಕಾರಣ ರಾಜ್ಯದಲ್ಲಿ ಬಿಯರ್ ಅಭಾವ (Beer Shortage) ತೀವ್ರವಾಗಿ ಕಾಡಿತ್ತು. ಅಂದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗಿರಲಿಲ್ಲ. ಆದರೂ ರಾಜ್ಯದಲ್ಲಿ ಬಂಪರ್ ಮದ್ಯ (Excise revenue) ಮಾರಾಟವಾಗಿದೆ. ಮದ್ಯ ದರ ಏರಿಕೆಯ ನಡುವೆ ಅಬಕಾರಿ ವರಮಾನ ಶೇ. 15ರಷ್ಟು ಹೆಚ್ಚಳವಾಗಿದೆ.

ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಕಿಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.

ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಈಗ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಟಾರ್ಗೆಟ್ ರೀಚ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಆದರೂ, ತಲೆಕೆಡಿಸಿಕೊಳ್ಳದೆ ಮದ್ಯ ಪ್ರಿಯರು ಮದ್ಯ ಖರೀದಿ ಮಾಡಿದ್ದಾರೆ.

ಸೃಷ್ಟಿಯಾಗಿತ್ತು ಮದ್ಯದ ಅಭಾವ

ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಮಾರಾಟ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಆಗುತ್ತಿರಲಿಲ್ಲ. ಹೀಗಾಗಿ ಎರಡು ತಿಂಗಳ ಕಾಲ ಬಿಯರ್‌ ಅಭಾವ ಮುಂದುವರಿದಿತ್ತು.

ರಾಜ್ಯದಲ್ಲಿ ಬೇಸಿಗೆ ವೇಳೆ ಅಂದರೆ ಏಪ್ರಿಲ್‌, ಮೇ ವೇಳೆ ನಿತ್ಯ 11.50 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿತ್ತು. ಬೇಸಿಗೆ‌ಗೆ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಸೇಲ್‌ ಆಗುತ್ತಿತ್ತು. ಹೀಗಾಗಿ ಬೇಸಿಗೆ ವೇಳೆ ನಿತ್ಯ ಸರಿ ಸುಮಾರು ಮೂರೂವರೆ ಲಕ್ಷ ಲೀಟರ್‌ ಬಿಯರ್‌ ಹೆಚ್ಚುವರಿಯಾಗಿ ಬೇಕಿತ್ತು. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಸಿಗುತ್ತಿರಲಿಲ್ಲ.

ಈ ವರ್ಷದ ಆರಂಭದ ತಿಂಗಳಲ್ಲಿ ಬಿಯರ್ ಮಾರಾಟ ಕುಸಿತ ಕಂಡಿತ್ತು. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.30 ಮಾರಾಟ ಹೆಚ್ಚಳವಾಗಿತ್ತು. ಅಗತ್ಯ ಇರುವಷ್ಟು ಬಿಯರ್ ಸಂಗ್ರಹ ಇದೆ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿದ್ದವಾದರೂ ಬೇಸಿಗೆ ತೀವ್ರ ಅಭಾವ ಉಂಟಾಗಿತ್ತು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡ ಬಿಯರ್‌ ಉತ್ಪಾದನೆ ಕುಸಿಯಲು ಕಾರಣವಾಗಿತ್ತು. ಇನ್ನು ಸಾರಿಗೆ ಸಮಸ್ಯೆ, ಚುನಾವಣೆ ಸಮಯದಲ್ಲಿ ಮಳಿಗೆಗಳಲ್ಲಿ ಹೆಚ್ಚುವರಿ ಮದ್ಯ, ಬಿಯರ್‌ ಸಂಗ್ರಹಣೆ ಮೇಲೆ ನಿರ್ಬಂಧ ಹೇರಿರುವುದು ಕೂಡ ಬಿಯರ್‌ ಪೂರೈಕೆ ಕುಸಿಯಲು ಕಾರಣವಾಗಿತ್ತು.

ಇದನ್ನೂ ಓದಿ: Rave party: ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ ಹೇಮಾ!

ಬಿಸಿಲಿನ ಝಳದಿಂದ ಹೊರಬರಲು ಜನರು ಹಾಟ್ ಡ್ರಿಂಕ್ಸ್‌ಗಳಿಗಿಂತ ಬೇಸಿಗೆಯಲ್ಲಿ ಬಿಯರ್ ಹೆಚ್ಚು ಕುಡಿಯುತ್ತಾರೆ. ಜತೆಗೆ ಈ ವರ್ಷ ಮಾರಾಟ ಹೆಚ್ಚಳವಾಗಲು ಲೋಕಸಭಾ ಚುನಾವಣೆಯ ಕೊಡುಗೆಯೂ ಇದೆ. ಬಿಯರ್ ಕುಡಿದರೆ ಬಿಸಿಲ ಧಗೆಯಿಂದ ಹೊರಬರಬಹುದು ಎಂದು ನಂಬಲಾಗಿದ್ದು, ಇದು ಬಿಯರ್ ಬಳಕೆ ಹೆಚ್ಚಳವಾಗಲು ಕಾರಣವಾಗಿದೆ. ಇನ್ನು ಮದ್ಯ ಮಾರಾಟದಿಂದ ಈ ವರ್ಷ ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಆರಂಭದಲ್ಲಿಯೇ ಉತ್ತಮ ಮಾರಾಟ ಕಂಡು ಬಂದಿರುವುದರಿಂದ ಆದಾಯ ಹೆಚ್ಚುವ ನಿರೀಕ್ಷೆ ಇದೆ.

Exit mobile version