ಬೆಂಗಳೂರು: ವಿಧಾನಸೌಧದ ಒಳಕ್ಕೆ ಪ್ರವೇಶಿಸಲು ನಕಲಿ ಪಾಸ್‌ಗಳ (Fake pass) ಬಳಕೆ ಆಗುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದು, ಇದಕ್ಕೆ ತಡೆ ಹಾಕಿದ್ದಾರೆ.
ಇಷ್ಟು ದಿನ ವಿಧಾನಸೌಧಕ್ಕೆ ಎಂಟ್ರಿಯಾಗಲು ಅನೇಕ ಮಂದಿ ನಕಲಿ ಪಾಸ್‌ಗಳನ್ನು ಬಳಸುತ್ತಿದ್ದರು. ಕೊನೆಗೂ ತಿಪ್ಪೇರುದ್ರಪ್ಪ ಕೇಸ್ ಬಳಿಕ ಭದ್ರತಾ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಸಿಸಿಬಿ ಮುಖ್ಯಸ್ಥರಾಗಿದ್ದ ಡಾ.ಶರಣಪ್ಪ ಅವರಿಂದ ವಿಧಾನಸೌಧ ಭದ್ರತೆ ನೇತೃತ್ವ ನಡೆಯುತ್ತಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರ ವಿಚಾರಣೆ ನಡೆಸಲಾಗುತ್ತಿದೆ.
ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ ಮುನ್ನೂರು ನಕಲಿ ಪಾಸ್ ಪತ್ತೆಯಾಗಿದೆ. ಅಧಿಕೃತ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿಸಿ, ಹಳೆಯ ಪಾಸ್‌ಗಳು, ಅವಧಿ ಮುಗಿದಿರುವ ಪಾಸ್‌ಗಳು, ವಾಹನಗಳ ಕೆಲ ಪಾಸ್‌ಗಳು ಸಹ ನಕಲಿ ಮಾಡಿ ಬಳಸುತ್ತಿರುವುದು ಪತ್ತೆಯಾಗಿವೆ.
ಎಂಎಲ್‌ಎ, ಎಂಎಲ್‌ಸಿ ಗಳಿಗೆ ನೀಡಿರುವ ಪಾಸ್‌ಗಳನ್ನು ಕಲರ್ ಝೆರಾಕ್ಸ್ ಮಾಡಿ ವಿಧಾನಸೌಧದೊಳಕ್ಕೆ ಎಂಟ್ರಿ ಕೊಡಿಸಲಾಗುತ್ತಿದೆ. ಅವಧಿ ಮುಗಿದಿರುವ ಪಾಸ್‌ಗಳು, ಕಲರ್ ಜೆರಾಕ್ಸ್ ಪಾಸ್‌ಗಳನ್ನು ಸೀಜ್ ಮಾಡಲಾಗಿದೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್‌ಗಳ ಬಳಕೆಯಾಗುತ್ತಿದೆ.
ಇದರೊಂದಿಗೆ ನಕಲಿ ಪಾಸ್ ಬಳಸಿ ವಿಧಾನಸೌಧ ಪ್ರವೇಶಿಸಿ ತಿರುಗಾಡುತ್ತಿದ್ದವರಿಗೆ ಬ್ರೇಕ್ ಹಾಕಲಾಗಿದೆ. ನಕಲಿ ಪಾಸ ಬಳಸುತ್ತಿದ್ದ ಎಲ್ಲರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಿಧಾನಸೌಧ ಹಾಗೂ ಸುತ್ತಮುತ್ತ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದ್ದು, ವಿಧಾನಸೌಧಕ್ಕೆ ಎಂಟ್ರಿಯಾಗುವ ಎಲ್ಲಾ ಗೇಟ್‌ಗಳಲ್ಲಿ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ನಕಲಿ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಬಳಸಿ ವಂಚಿಸುತ್ತಿದ್ದ ವಿದೇಶಿಗರ ಬಂಧನ