Site icon Vistara News

Fire Accident: ರಾಜಧಾನಿಯಲ್ಲಿ ಎರಡು ಬಟ್ಟೆ ಶೋರೂಂ ಬೆಂಕಿಗಾಹುತಿ

marathhalli fire tragedy

ಬೆಂಗಳೂರು: ಸೋಮವಾರ ಮಧ್ಯರಾತ್ರಿ ಸಂಭವಿಸಿದ ಎರಡು ಭಾರೀ ಅಗ್ನಿ ಅವಘಡಗಳಲ್ಲಿ (Fire Accident) ಎರಡು ಬಟ್ಟೆ ಶೋರೂಂಗಳು ಬೆಂಕಿಗಾಹುತಿಯಾಗಿವೆ. ಒಂದು ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಹಾಗೂ ಇನ್ನೊಂದು ಮಲ್ಲೇಶ್ವರಂನಲ್ಲಿ ಸಂಭವಿಸಿವೆ.

ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಬೆಂಕಿನ ಕೆನ್ನಾಲಿಗೆಗೆ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ ಸುಟ್ಟು ಕರಕಲಾಗಿದೆ. ಮೂರಂತಸ್ತಿನ ಕಟ್ಟಡ ಧಗ ಧಗನೆ ಹೊತ್ತಿ ಉರಿದಿದ್ದು, ಕಟ್ಟಡದ ಮುಂದೆ ಇದ್ದ ತೆಂಗಿನ ಮರಕ್ಕೂ ಬೆಂಕಿ ಚಾಚಿಕೊಂಡಿತು. ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಕೂಡ ಬೆಂಕಿಗಾಹುತಿಯಾಗಿದೆ. ಮೂರಂತಸ್ತಿನಲ್ಲಿದ್ದ ಬಟ್ಟೆ ಶೋ‌ ರೂಂ ಮಾತ್ರವಲ್ಲದೆ ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗಳಿಗೂ ಬೆಂಕಿ ತಗುಲಿದೆ. ನಿನ್ನೆ ರಾತ್ರಿ 11.45ರ ಸುಮಾರಿಗೆ ಘಟನೆ ನಡೆದಿದೆ.

ಬೆಂಕಿ ಕಿಡಿ ಹೊತ್ತಿಕೊಂಡಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಅಂಗಡಿ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಬೆಂಕಿ ಚಾಚಿರುವ ಸಂಶಯ ಇದೆ. ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿಯ ಆರ್ಭಟ ಕಂಡು ವಾಹನ ಸವಾರರು ಬೆಚ್ಚಿಬಿದ್ದರು. ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿದವು. ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿದ್ದ ನಾಲ್ವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಯಿತು. ಬೆಂಕಿ ಹಬ್ಬುತ್ತಿದ್ದಂತೆ ಇವರು ಪಕ್ಕದ ಕಟ್ಟಡಕ್ಕೆ ಜಂಪ್ ಆಗಿದ್ದರು. ಒಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೊದಲು ಪಕ್ಕದ ಕಟ್ಟಡಕ್ಕೆ ಹೊತ್ತಿದ್ದ ಬೆಂಕಿ ಆರಿಸಿದರು. ನಂತರ ಕಟ್ಟಡದ ಹೊರಗೆ ಉರಿಯುತ್ತಿದ್ದ ಬೆಂಕಿ ನಂದಿಸಿ ಏಣಿ ಮೂಲಕ ಮೊದಲ ಮಹಡಿಗೆ ಎಂಟ್ರಿ ಕೊಟ್ಟರು. ಹೊಗೆ ಮಧ್ಯೆ ಬ್ರೀತಿಂಗ್ ಅಪರೇಟಸ್ ಧರಿಸಿ ಕಟ್ಟಡದೊಳಗೆ ಹೋಗಿ ಕಟ್ಟಡದ ತುದಿಯಲ್ಲಿ ಕೂತು ಬೆಂಕಿ ಆರಿಸಿದರು.

ಕಟ್ಟರ್‌ನಿಂದ ಶೆಟರ್ ಓಪನ್ ಮಾಡಿ ಓಪನ್ ಮಾಡಿದ ಜಾಗದ ಮೂಲಕ ನೀರು ಹಾಯಿಸಿದರು. ಘಟನೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಗಾಯವಾಗಿದೆ. ಮೊದಲ ಮಹಡಿಯಿಂದ ಗ್ಲಾಸ್ ಒಡೆದು ಬಿದ್ದಾಗ ಸಿಬ್ಬಂದಿಯ ಕೈ ಬೆರಳಿಗೆ ಗಾಯವಾಗಿದೆ. ಪಕ್ಕದಲ್ಲೇ ಇದ್ದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯಲಾಗಿದೆ. ಎರಡೂವರೆ ಗಂಟೆ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂತು. ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಲ್ಲೇಶ್ವರದಲ್ಲೂ ಬೆಂಕಿ

ಮಲ್ಲೇಶ್ವರ ಮುಖ್ಯ ರಸ್ತೆಯಲ್ಲಿರುವ ಒಂದು ಬಟ್ಟೆ ಅಂಗಡಿಯಲ್ಲೂ ಬೆಂಕಿ ಅನಾಹುತ ಸಂಭವಿಸಿದೆ. ಲಕ್ಷಾಂತರ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ಆರಿಸಿದ್ದಾರೆ.

ಇದನ್ನೂ ಓದಿ: NIA Raid: ಬೆಂಗಳೂರಿನಲ್ಲಿ ಮತ್ತೆ ಎನ್‌ಐಎ 20 ಕಡೆ ದಾಳಿ; ಶಂಕಿತ ಉಗ್ರನ ಲಿಂಕೇ ಆಧಾರ

Exit mobile version