Site icon Vistara News

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

First successful TAVR surgery in the state at Fortis Hospital

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯು (Fortis Hospital) 75 ವರ್ಷದ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ನಡೆಸುವ ಮೂಲಕ ಅತ್ಯಾಧುನಿಕ ಎಡ್ವರ್ಡ್ಸ್ ಸೇಪಿಯನ್ 3 ಅಲ್ಟ್ರಾ ವಾಲ್ವ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಹಿರಿಯ ಸಲಹೆಗಾರ ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ಅವರ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿ ಕೇವಲ 45 ನಿಮಿಷಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ.

ಇದನ್ನೂ ಓದಿ: Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

ಈ ಕುರಿತು ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಮಿಜೋರಾಂ ರಾಜ್ಯದ 75 ವರ್ಷದ ವನ್ಲಾಲಸಂಗ ಎಂಬ ರೋಗಿಯು ಈ ಮೊದಲು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಹೃದಯದ ಮಹಾಪಧಮನಿಯ ಕವಾಟವು ಚಿಕ್ಕದಾಗುತ್ತಾ ಸಾಗಿದೆ. ಇದರಿಂದ ಇವರ ಹೃದಯಕ್ಕೆ ಸೂಕ್ತ ರೀತಿಯಲ್ಲಿ ರಕ್ತ ಪರಿಚಲನೆ ಸಾಧ್ಯವಾಗುತ್ತಿರಲಿಲ್ಲ. ಕಾಲಕ್ರಮೇಣ ಇದು ವಿಕೋಪಕ್ಕೆ ತಿರುಗಿ, ಅವರು ಎಂದಿನಂತೆ ನಡೆಯಲು ಸಹ ಸಾಧ್ಯವಾಗದೇ ಗಾಲಿಕುರ್ಚಿಯಲ್ಲಿ ಓಡಾಡುವಂತಾಯಿತು.

ಇದಕ್ಕೆ ಸೂಕ್ತ ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗೆ ತೆರಳಿದರೂ ಸಾಧ್ಯವಾಗಲಿಲ್ಲ. ಬಳಿಕ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರ ಪರಿಸ್ಥಿತಿಯನ್ನು ಅವಲೋಕಿಸಿ ಇವರಿಗೆ ಟಿಎವಿಆರ್‌ (TAVR) ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದೆವು. ಸಾಂಪ್ರದಾಯಿಕ ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ಅಪಾಯದ ಜತೆಗೆ, ಚೇತರಿಕೆಯ ಅವಧಿಯೂ ದೀರ್ಘವಾಗಿದೆ. ಹೀಗಾಗಿ ನೂತನ ಚಿಕಿತ್ಸೆಯಾದ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ರಿಪ್ಲೇಸ್‌ಮೆಂಟ್ (TAVR) ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆವು. ಇದು ಕಡಿಮೆ ಅಪಾಯ ನೀಡಲಿದ್ದು, ವೇಗವಾಗಿ ಚೇತರಿಸಿಕೊಳ್ಳಬಹುದಾಗಿದೆ ಎಂದವರು ತಿಳಿಸಿದರು.

ಇದನ್ನೂ ಓದಿ: Karnataka Weather : ರಾಜ್ಯಾದ್ಯಂತ ಜೂನ್‌ ಮೊದಲ ವಾರ ಅಬ್ಬರಿಸಲಿದ್ಯಾ ಮಳೆ; ಕುಸಿಯಲಿದೆ ತಾಪಮಾನ

ಈ ನೂತನ ಶಸ್ತ್ರಚಿಕಿತ್ಸೆಯು ರಾಜ್ಯದಲ್ಲೇ ಮೊದಲ ಬಾರಿಗೆ ನಡೆದಿರುವುದು ವಿಶೇಷ. 45 ನಿಮಿಷಗಳ ಈ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಕೆಲವೇ ಗಂಟೆಗಳಲ್ಲಿ ಸ್ವತಂತ್ರವಾಗಿ ನಡೆಯಲು ಪ್ರಾರಂಭಿಸಿದರು ಎಂದು ಅವರು ವಿವರಿಸಿದರು.

Exit mobile version