ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Ayodhya Rama Janmabhumi) ಶ್ರೀರಾಮ ಮಂದಿರದ (Rama Mandir) ಲೋಕಾರ್ಪಣೆ ಕಾರ್ಯಕ್ರಮ ಜನವರಿ 22ರಂದು ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು ಅಯೋಧ್ಯೆಯಲ್ಲಿ (ಶನಿವಾರ) ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಆರಂಭವಾಗುತ್ತಿದ್ದಂತೆಯೇ ದೇಶದ ಬೇರೆ ಬೇರೆ ಭಾಗಗಳಿಂದ ನೇರ ವಿಮಾನ ಯಾನ (Flight to Ayodhya) ಆರಂಭವಾಗಲಿದೆ. ಹಾಗೆ ವಿಮಾನ ಯಾನ ಆರಂಭವಾಗುವ ಸ್ಥಳಗಳಲ್ಲಿ ಬೆಂಗಳೂರು ಕೂಡಾ ಒಂದು. ಜನವರಿ 17ರಂದು ಅಯೋಧ್ಯೆಗೆ ಬೆಂಗಳೂರು (Bangalore-Ayodhya Flight) ಮತ್ತು ಕೋಲ್ಕೊತಾದಿಂದ ನೇರ ವಿಮಾನ ಯಾನ ಆರಂಭವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಪ್ರಕಟಿಸಿದೆ.
ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಜತೆಗೆ ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳು ಓಡಾಡಲಿವೆ. ಮುಂದೆ ಹಂತ ಹಂತವಾಗಿ ಬೇರೆ ಬೇರೆ ನಗರಗಳಿಂದ ಅಯೋಧ್ಯೆಗೆ ನೇರ ಸಂಪರ್ಕ ದೊರೆಯಲಿದೆ. ಇದುವರೆಗೆ ಅಯೋಧ್ಯೆಗೆ ನೇರವಾಗಿ ವಿಮಾನದಲ್ಲಿ ಹೋಗುವುದು ಸಾಧ್ಯವಿರಲಿಲ್ಲ. ಒಂದೋ ಲಕ್ನೋ ವಿಮಾನ ನಿಲ್ದಾಣ, ಇಲ್ಲವೇ ವಾರಾಣಸಿಗೆ ಹೋಗಿ ಅಲ್ಲಿಂದ ಅಯೋಧ್ಯೆಗೆ ಹೋಗಬೇಕಾಗಿತ್ತು. ಲಕ್ನೋ ವಿಮಾನ ನಿಲ್ದಾಣ ಕೂಡಾ ದೊಡ್ಡದೇನಲ್ಲ.
ಇದೀಗ ಅಯೋಧ್ಯೆ ವಿಮಾನ ನಿಲ್ದಾಣದ ಉದ್ಘಾಟನೆಯೊಂದಿಗೆ ನೇರವಾಗಿ ಅಯೋಧ್ಯೆಗೆ ಹೋಗಿ ಬರಲು ಅವಕಾಶ ಸಿಗಲಿದೆ.
ಸಮಯ-ವೇಳಾಪಟ್ಟಿ ಹೇಗೆ?
- ಬೆಂಗಳೂರು-ಅಯೋಧ್ಯೆ ಮಾರ್ಗದಲ್ಲಿ ಮೊದಲ ವಿಮಾನವು ಜನವರಿ 17 ರ ಬೆಳಿಗ್ಗೆ 8.05 ಕ್ಕೆ ಹೊರಟು 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ.
- ಅದೇ ರೀತಿ ಹಿಂತಿರುಗುವ ವಿಮಾನವು ಅಯೋಧ್ಯೆಯಿಂದ ಮಧ್ಯಾಹ್ನ 3.40 ಕ್ಕೆ ಹೊರಡಲಿದ್ದು, ಸಂಜೆ 6.10 ಕ್ಕೆ ಬೆಂಗಳೂರಿಗೆ ತಲುಪಲಿದೆ.
- ಅಯೋಧ್ಯೆ-ಕೋಲ್ಕತ್ತಾ ಮಾರ್ಗದಲ್ಲಿ, ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಟೇಕ್ ಆಫ್ ಆಗಲಿದೆ. ಮಧ್ಯಾಹ್ನ 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ.
- ಕೋಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10ಕ್ಕೆ ಅಯೋಧ್ಯೆಯನ್ನು ತಲುಪಲಿದೆ.
ಬೆಂಗಳೂರಿನಿಂದ ವಾರಕ್ಕೆ ಮೂರು ವಿಮಾನ - ಅಯೋಧ್ಯೆ ಮತ್ತು ಬೆಂಗಳೂರು ಹಾಗೂ ಅಯೋಧ್ಯೆ ಮತ್ತು ಕೋಲ್ಕೊತಾ ನಡುವೆ ವಾರಕ್ಕೆ ಮೂರು ತಡೆರಹಿತ, ನೇರ ವಿಮಾನ ಯಾನ ಇರಲಿದೆ.
- ವೇಳಾಪಟ್ಟಿ ಮತ್ತು ಬುಕ್ಕಿಂಗ್ ವ್ಯವಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವೆಬ್‌ಸೈಟ್ (airindiaexpress.com), ಆಪ್‌ಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ : PM Narendra Modi: ಪಿಎಂ ಮೋದಿ ಆಗಮನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಯೋಧ್ಯೆ!