Site icon Vistara News

flyover | ಹೆಬ್ಬಾಳ ಫ್ಲೈಓವರ್‌ ಅಗಲೀಕರಣ: ಸಿಎಂಗೆ ಪತ್ರ ಬರೆದ ಮಾಜಿ ಸಚಿವ ಕೃಷ್ಣಬೈರೇಗೌಡ

flyover

ಬೆಂಗಳೂರು: ನಿತ್ಯಾ ಅತಿ ಹೆಚ್ಚು ಟ್ರಾಫಿಕ್‌ ಜಂಕ್ಷನ್‌ನಲ್ಲಿ ಹೆಬ್ಬಾಳ ಫ್ಲೈಓವರ್‌ ಜಂಕ್ಷನ್‌ ಕೂಡ ಒಂದು. ಟ್ರಾಫಿಕ್‌ ಕಂಟ್ರೋಲ್‌ಗೆ ನಾನಾ ರೂಪುರೇಷೆಗಳನ್ನು ಹಾಕಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆ ಹೆಬ್ಬಾಳ ಫ್ಲೈಓವರ್‌ ಅಗಲೀಕರಣ ಕಾಮಗಾರಿ ಮುಂದುವರಿಸುವಂತೆ ಮಾಜಿ ಸಚಿವ ಕೃಷ್ಣಬೈರೇಗೌಡ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಹೆಬ್ಬಾಳ ಮೇಲ್ಸೇತುವೆ ಬೆಂಗಳೂರಿನ ಪ್ರಮುಖ ಪ್ರವೇಶದ್ವಾರದಂತಿದೆ. ವಾಹನ ಸಂಚಾರ ಅತಿಹೆಚ್ಚು ಇರುವುದರಿಂದ ಹಾಲಿ ಮೇಲ್ಸೇತುವೆಯನ್ನು ಅಗಲೀಕರಿಸಿ, ಹೆಚ್ಚುವರಿ ಲೇನ್‌ಗಳನ್ನು ನಿರ್ಮಿಸಬೇಕಿದೆ. ಈ ಕಾಮಗಾರಿಗೆ 2015-16ರಲ್ಲಿ ಮಂಜೂರಾಗಿ, ಕಾಮಗಾರಿ ಆರಂಭವಾಗಿ ಸುಮಾರು 24.49 ಕೋಟಿ ರೂ. ಖರ್ಚಾಗಿ ಬಳಿಕ 2019 ರಿಂದ ಕಾಮಗಾರಿ ನಿಂತಿದೆ. ಮೇಲ್ಸೇತುವೆ ಅಗಲೀಕರಣ ಆಗದೇ ಇರುವುದರಿಂದ ಪ್ರತಿನಿತ್ಯ ಹತ್ತಾರು ಸಾವಿರ ವಾಹನ ಚಾಲಕರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ, ಸಮಯ ವ್ಯರ್ಥವಾಗಿ ಕಷ್ಟಪಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Traffic | ಹೆಬ್ಬಾಳ ಜಂಕ್ಷನ್‌ ಯೋಜನೆ ಪರಿಶೀಲನೆಗೆ ಕನ್ಸಲ್ಟೆಂಟ್‌ ಸಂಸ್ಥೆ ನೇಮಕ: ಬಿಬಿಎಂಪಿ ಸಭೆಯಲ್ಲಿ ನಿರ್ಧಾರ

ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆದಾಗ, ನಿಂತಿರುವ ಕಾಮಗಾರಿಯನ್ನು ಪುನಃ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದೀರಿ. ಕಾಮಗಾರಿಗೆ ಟೆಂಡ‌ನ್ನು ಏಪ್ರಿಲ್‌ನಲ್ಲಿ ಕರೆಯಲಾಗುವುದು ಹಾಗೂ ಇದಕ್ಕೆ ಬೇಕಾದ ಅನುದಾನವನ್ನು ನೀಡಲಾಗುವುದು ಎಂದಿದ್ದ ಮಾತು ಜನರಲ್ಲಿ ಸಮಸ್ಯೆ ಪರಿಹಾರದ ಆಶಯವನ್ನು ಮೂಡಿಸಿತ್ತು.

ಆದರೆ ತಾವು ನೀಡಿದ ಭರವಸೆಯನ್ನು ಕಾರ್ಯರೂಪಕ್ಕೆ ತರಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದಂತೆ ಕಾಣುತ್ತಿದೆ. ಟೆಂಡರ್ ಕರೆಯುವುದಾಗಲಿ ಬೇಕಾದ ಅನುದಾನಕ್ಕೆ ತಮಗೆ ಕಡತ ಸಲ್ಲಿಸಿರುವುದಾಗಲಿ ಕಾಣುತ್ತಿಲ್ಲ. ತಮ್ಮ ಭರವಸೆಯನ್ನೆ ಅಧಿಕಾರಿಗಳು ಮರೆತಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದ್ದು, ಅಧಿಕಾರಗಳನ್ನು ಕೂಡಲೇ ಎಚ್ಚರಿಸಿ, ನಿಂತಿರುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೃಷ್ಣಬೈರೇಗೌಡ ಮನವಿ ಮಾಡಿದ್ದಾರೆ.

ಟೆಂಡರ್‌ಗೆ ಆಹ್ವಾನ

ಹೆಬ್ಬಾಳ ಫ್ಲೈಓವರ್ ಅಗಲೀಕರಣ ಮಾಡಲೇಬೇಕಿದ್ದು, ಟೆಂಡರ್ ಸಹ ಕರೆಯಲಾಗುತ್ತಿದೆ. ಅಂಡರ್ ಪಾಸ್ ನಿರ್ಮಿಸುವ ವಿಚಾರವಾಗಿ ಈ ಬಗ್ಗೆ ರೈಲ್ವೆ ಇಲಾಖೆ ಅವರನ್ನು ಭೇಟಿ‌ ಮಾಡಿ ಚರ್ಚೆ ನಡೆಸಿದ್ದೆವು. ಆದರೆ ಅಂಡರ್ ಪಾಸ್ ಮಾಡಿದರೆ ಸಾರ್ವಜನಿಕರ ಆಸ್ತಿಗಳಿಗಾಗಿ ನೀಡುವ ಅನುದಾನದ ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ ಫ್ಲೈ ಓವರ್ ಅಗಲಿಕರಣವೇ ಉತ್ತಮ‌ ಎಂದು ಸಿಎಂ ಜತೆಗೆ ಚರ್ಚೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಯೋಜನೆ ವಚ್ಚ ರೂಪಿಸಲಾಗುತ್ತಿರುವುದಾಗಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ | ಟ್ರಾಫಿಕ್‌ ಕಿರಿಕ್‌ | ಹೆಬ್ಬಾಳ ಜಂಕ್ಷನ್ ಬಳಿ ಇಂದಿನಿಂದ ಹೊಸ ರೂಲ್ಸ್

Exit mobile version