ಬೆಂಗಳೂರು: ಚೂರಿ ಇರಿತಕ್ಕೀಡಾಗಿದ್ದ ಬಿಬಿಎಂಪಿಯ ಟಿಪ್ಪುನಗರದ ಮಾಜಿ ಕಾರ್ಪೊರೇಟರ್ ಆಯೂಬ್ ಖಾನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಯೂಬ್ ಸಾವಿಗೀಡಾಗಿದ್ದಾರೆ. ಆಯೂಬ್ ಸೋದರ ಸಂಬಂಧಿ ಮಥೀನ್ ಖಾನ್, ಆಸ್ತಿ ವಿವಾದಕ್ಕೆ ಸಂಬಂಧಿಸಿ ಬುಧವಾರ ಸಂಜೆ ಜಗಳ ಮಾಡಿಕೊಂಡು ಹೊಟ್ಟೆಗೆ ಚಾಕು ಇರಿದು ಹಲ್ಲೆ ಮಾಡಿದ್ದ. ಇದರ ಪರಿಣಾಮ ತೀವ್ರ ರಕ್ತಸ್ರಾವಕ್ಕೀಡಾಗಿದ್ದ ಆಯೂಬ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆರೋಪಿ ಪತ್ತೆಗಾಗಿ ಚಾಮರಾಜಪೇಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಚಾಮರಾಜಪೇಟೆ ಬಳಿಯಿರುವ ವಿನಾಯಕ ಥಿಯೇಟರ್ ಬಳಿ ಘಟನೆ ನಡೆದಿದೆ. ಆಸ್ತಿ ವಿಚಾರದ ಜತೆಗೆ, ರಾಜಕೀಯವಾಗಿ ಬೆಳೆಯುವುದಕ್ಕೆ ಬಿಡುತ್ತಿಲ್ಲ ಎಂಬ ಕೋಪವನ್ನೂ ಸೇರಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.