ಬೆಂಗಳೂರು: ನಕಲಿ ಚಿನ್ನವನ್ನು ಕೊಟ್ಟು 10 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ಅಸಲಿ ಆಭರಣವನ್ನು ಜ್ಯುವೆಲ್ಲರಿ ಅಂಗಡಿಯಿಂದ ಪಡೆದು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಗಳ ಮದುವೆಗೆ ಹಳೆಯ ಆಭರಣ ಕೊಟ್ಟು ಹೊಸ ಆಭರಣ ತೆಗೆದುಕೊಳ್ಳಲೆಂದು ಬಂದಿದ್ದ ತಂಡವೊಂದು, ನಕಲಿ ಆಭರಣ ಕೊಟ್ಟು ಹತ್ತು ಲಕ್ಷ ರೂ. ಮೌಲ್ಯದ ಅಸಲಿ ಆಭರಣದೊಂದಿಗೆ ಪರಾರಿಯಾಗಿದೆ. ಹಿರಿಯ ಮಹಿಳೆ ಹಾಗೂ ಗ್ಯಾಂಗ್ ಈ ವಂಚನೆ ನಡೆಸಿದೆ. ಹಿರಿಯ ಮಹಿಳೆ ಹಾಗೂ ಜೊತೆಯಲ್ಲಿದ್ದವರ ಮರಳು ಮಾತಿಗೆ ಆಭರಣ ಅಂಗಡಿ ಮಾಲೀಕ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಕೆಂಪಾಪುರ ದಾಸರಹಳ್ಳಿಯ ಚೌಡೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಘಟನೆ ನಡೆದಿದೆ. ಇಲ್ಲಿನ ಧನಲಕ್ಷ್ಮಿ ಜ್ಯುವೆಲರ್ಸ್ ಅಂಗಡಿಗೆ ಇಬ್ಬರು ಗಂಡಸರು ಮತ್ತು ಮಹಿಳೆ ಬಂದಿದ್ದರು. ನನ್ನ ಮಗಳ ಮದ್ವೆ ಇದೆ. ನನ್ನ ತಾಯಿಯ ಹಳೆ ಆಭರಣ ಕೊಟ್ಟು ಹೊಸ ಒಡವೆ ಖರೀದಿ ಮಾಡಬೇಕು ಎಂದು ರಾಹುಲ್ ಎಂಬಾತ ಹೇಳಿದ್ದ. ನಂಬಿಸಲು ನಾಗವಾರದ ನಿವಾಸಿ ಎಂದಿದ್ದ. ಮಾತನಾಡುತ್ತಿದ್ದಂತೆ ಮಹಿಳೆ ಬ್ಯಾಗಿಂದ 240 ಗ್ರಾಂ ತೂಕದ ಗುಂಡಿನ ಸರವನ್ನು ತೆಗೆದುಕೊಟ್ಟಿದ್ದಳು. ಚಿನ್ನದ ಪರಿಶೀಲನೆಗೆ ಒಂದು ಗುಂಡನ್ನು ಅಂಗಡಿ ಮಾಲೀಕ ತೆಗೆದುಕೊಂಡಿದ್ದ. ಅದು ಅಸಲಿಯಾಗಿತ್ತು. ಮರುದಿನ ತಂಡ ಮತ್ತೆ ಬಂದಿತ್ತು. ತಂದಿದ್ದ ಗುಂಡಿನ ಸರ ನಿನ್ನೆ ತಂದಿದ್ದೇ ಇರಬಹುದು ಎಂದು ಅಂಗಡಿ ಮಾಲೀಕ ಮೋಸ ಹೋಗಿದ್ದಾರೆ. ಅದನ್ನೆ ಬಂಡವಾಳ ಮಾಡಿಕೊಂಡ ಕಿಲಾಡಿಗಳು ಚಿನ್ನದ ಶಾಪಿಂಗ್ ನಡೆಸಿದ್ದಾರೆ. 10 ಲಕ್ಷ ರೂ.ಗಳ ಹೊಸ ಚಿನ್ನದ ಆಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಉಂಗುರ, ಓಲೆ, ಚೈನ್ ಸೇರಿದಂತೆ 168 ಗ್ರಾಂ ತೂಕದ ಅಸಲಿ ಆಭರಣ ಖರೀದಿಸಿದ್ದಾರೆ. ಬೆಳ್ಳಿ ದೀಪ, ಕುಂಕುಮ ಬಟ್ಟಲು , ಕಾಲ್ ಚೈನ್ ಅಂತ ಕಾಲು ಕೆ.ಜಿ. ಬೆಳ್ಳಿ ಸಾಮಗ್ರಿ ಖರೀದಿಸಿ ಎಸ್ಕೇಪ್ ಆಗಿದ್ದಾರೆ.
ಗ್ರಾಹಕರಿಂದ ಎಕ್ಸ್ ಚೇಂಜ್ ಮಾಡಿದ್ದ 240 ತೂಕದ ಗುಂಡಿನ ಸರದ ಮಾರಾಟಕ್ಕೆ ಚಿಕ್ಕಪೇಟೆಗೆ ಬಂದಿದ್ದ ಅಂಗಡಿ ಮಾಲೀಕ ಓಂ ಪ್ರಕಾಶ್ ಅವರಿಗೆ, ವಂಚಕರ ಮೋಸ ಆಗ ಗೊತ್ತಾಗಿದೆ. ಬಳಿಕ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.