Site icon Vistara News

Fraud Case : ಪಿಎಂ ಹೆಸರಲ್ಲಿ ಲೂಟಿ; ಲಕ್ಷ ಲಕ್ಷ ಕಳೆದುಕೊಂಡ ಬೆಂಗಳೂರು ಉದ್ಯಮಿ

Fraud in the name of PM Bengaluru businessman loses lakhs of rupees

ಬೆಂಗಳೂರು: ವ್ಯಕ್ತಿಯೊಬ್ಬ ಪಿಎಂ ಹೆಸರಿನಲ್ಲಿ ಬೆಂಗಳೂರು ಉದ್ಯಮಿಗೆ (Fraud Case) ವಂಚಿಸಿದ್ದಾನೆ. ಉದ್ಯಮಿ ಸುಮಾರು 6.28 ಲಕ್ಷ ರೂ. ಕಳೆದುಕೊಂಡಿದ್ದಾರೆ. ಚಿಕ್ಕಲಸಂದ್ರ ನಿವಾಸಿ ಜಿ. ಹರೀಶ್ ಕಶ್ಯಪ್ (44) ಹಣ ಕಳೆದುಕೊಂಡವರು. ಕಳೆದ ಜನವರಿ 27ರಂದು ಈ ಪ್ರಕರಣವು ಬೆಳಕಿಗೆ ಬಂದಿದೆ.

ದತ್ತ ಪ್ರಸಾದ್ ಎಂಬಾತ 2023 ಅಕ್ಟೋಬರ್ 25 ರಂದು ಪದ್ಮನಾಭ ನಗರದ ಗೋಕುಲ್ ವೆಜ್ ಹೋಟೆಲ್‌ಗೆ ಕಶ್ಯಪ್ ಮತ್ತು ಇತರರನ್ನು ಆಹ್ವಾನಿಸಿದ್ದ. ಈ ವೇಳೆ ಹೊಸ ಇಂಧನ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸೆನೀ ಟ್ರೇಡರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ.

ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಹಣವು ಡಬಲ್‌ ಆಗುತ್ತದೆ ಎಂದು ಆಸೆ ತೋರಿಸಿದ್ದ. ಆತನ ಮಾತಿಗೆ ಮರುಳಾದ ಹರೀಶ್‌ ಕಶ್ಯಪ್ ಸೇರಿದಂತೆ ಹಲವರು ಪ್ರಸಾದ್ ಸೂಚಿಸಿದ ಖಾತೆಗಳಿಗೆ ಆನ್‌ಲೈನ್‌ ಮುಖಾಂತರ ಹಣ ವರ್ಗಾವಣೆ ಮಾಡಿದ್ದಾರೆ. ಕೆಲವು ದಿನಗಳ ನಂತರ, ಹೂಡಿಕೆಗಳು ಹೆಚ್ಚಿನ ಆದಾಯವನ್ನೂ ತಂದುಕೊಟ್ಟಿತ್ತು.

ಆದರೆ ಮೊತ್ತವನ್ನು ಹಿಂದಿರುಗಿಸದೆ ಪ್ರಸಾದ್ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈತನಿಂದ ಸಾಕಷ್ಟು ಮಂದಿ ಇದೇ ರೀತಿಯಲ್ಲಿ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಇನ್ನೂ ಪಿಎಂ ಮುದ್ರಾ ಯೋಜನೆಯ ಹೆಸರಿನಲ್ಲೂ ಜನರು ಸಾವಿರಾರು ರೂ. ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂಗೆ ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ.

ಇದನ್ನೂ ಓದಿ: Train Accident : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಟ್ರಾವೆಲ್ಸ್‌ ಮಾಲೀಕ ಸಾವು

ಸಾಲಬಾಧೆಗೆ ಕಳ್ಳರಾದ ಬ್ಯುಸಿನೆಸ್ ಮೆನ್, ಲೋಕೋ ಪೈಲಟ್‌!

ಒಬ್ಬ ವರ್ಷದ ಹಿಂದೆ ಫ್ಯಾಕ್ಟರಿ ನಡೆಸಿ ಬ್ಯುಸಿನೆಸ್ ಮಾಡುತ್ತಿದ್ದ, ಮತ್ತೊಬ್ಬ ರೈಲ್ವೆ ಇಲಾಖೆಯಲ್ಲಿ ಲೋಕೋ ಪೈಲಟ್‌ ಆಗಿದ್ದ. ಆದರೆ ಇಬ್ಬರಿಗೂ ಇದ್ದ ಸಾಲದ ಹೊರೆಯು ಈಗ ಕಳ್ಳರನ್ನಾಗಿ ಮಾಡಿದೆ.

ಬೆಂಗಳೂರಿನ ಕುಂಬಳಗೋಡು ಮೂಲದ ಮದನ್ ಕುಮಾರ್ ಎಂಬಾತ ಅದೇ ಏರಿಯಾದಲ್ಲಿ ಅಲ್ಯೂಮಿನಿಯಂ ಫ್ಯಾಕ್ಟರಿಯೊಂದನ್ನು ನಡೆಸುತ್ತಿದ್ದ. ಕಳೆದ ವರ್ಷ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಇಡೀ ಫ್ಯಾಕ್ಟರಿ ಸುಟ್ಟು ಭಸ್ಮವಾಗಿತ್ತು. ಫ್ಯಾಕ್ಟರಿಗೆ ಬೆಂಕಿ ಬಿದ್ದ ಪರಿಣಾಮ ಸುಮಾರು 80 ಲಕ್ಷ ರೂ. ನಷ್ಟ ಅನುಭವಿಸಿದ್ದ.

ನಂತರ ಫ್ಯಾಕ್ಟರಿ ಮೇಲಿನ ಇನ್ಶ್ಯೂರೆನ್ಸ್ ಕ್ಲೈಮ್‌ ಮಾಡಿದ್ದ ಮದನ್ ಕುಮಾರ್‌ಗೆ ಕೇವಲ 2 ಲಕ್ಷ ರೂ. ಹಣ ಮಾತ್ರ ಸಿಕ್ಕಿತ್ತು. ಹೀಗಾಗಿ ಪರಿಚಯಸ್ಥರು ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳಿಂದ ಸಾಲ‌ ಪಡೆದಿದ್ದ. ಆದರೆ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ತಲೆ ಕೆಡಿಸಿಕೊಂಡಿದ್ದ. ಹೀಗಾಗಿ ಯೂಟ್ಯೂಬ್‌ನಲ್ಲಿ ಕಳವು ಮಾಡುವ ಬಗ್ಗೆ ಸರ್ಚ್ ಮಾಡಿದ್ದ ಉದ್ಯಮಿ ಮದನ್ ಕುಮಾರ್, ಕೆ.ಪಿ. ಅಗ್ರಹಾರದ ಟೆಲಿಕಾಂ ಲೇಔಟ್ ಐಷಾರಾಮಿ ಮನೆ ಮೇಲೆ ಕಣ್ಣು ಹಾಕಿದ್ದ. ಇದಕ್ಕಾಗಿ ಕಳ್ಳತನಕ್ಕೆ ಸ್ಕೇಚ್ ಹಾಕಿದ್ದ. ಕಟರ್ ಮಷಿನ್, ಕೈಗೆ ಗ್ಲೌಸ್ ಹಾಕಿಕೊಂಡು ಮನೆಗೆ ನುಗ್ಗಿ ಸುಮಾರು 300 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ.

ಜನವರಿ 17 ರಂದು ಬೆಳಗಿನ ಜಾವ ಮನೆ ಮಂದಿ ವಾಕಿಂಗ್ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಮದನ್ ಕುಮಾರ್ ಮನೆಗೆ ನುಗ್ಗಿ ಹಣ, ಆಭರಣ, ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೆಪಿ ಅಗ್ರಹಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ, ಆರೋಪಿ ಮದನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಕಳವು ಆಗಿದ್ದ 300 ಗ್ರಾಂ ಚಿನ್ನ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:Road Accident: ಉಳುಮೆ ಮಾಡುವಾಗ ಪಲ್ಟಿ ಹೊಡೆದ ಟ್ರ್ಯಾಕ್ಟರ್‌; ರೈತ ಸ್ಥಳದಲ್ಲೇ ಸಾವು

ಪ್ರಯಾಣಿಕರ ವಸ್ತುಗಳನ್ನು ಕದಿಯುತ್ತಿದ್ದ ಲೋಕೋ ಪೈಲಟ್‌

ಮತ್ತೊಂದೆಡೆ ಇದೇ ರೀತಿ ಸಾಲ ತೀರಿಸಲು‌‌ ಪ್ರಯಾಣಿಕರ ವಸ್ತುಗಳನ್ನು ಕಳವು ಮಾಡುತ್ತಿದ್ದ ಲೋಕೋ ಪೈಲೆಟ್ ರೈಲ್ವೆ ಪೊಲೀಸರ ಅತಿಥಿಯಾಗಿದ್ದಾನೆ. ಲೋಕೋ ಪೈಲಟ್ ಪಡಿ ಸ್ವರಾಜ್ ಸುಮಾರು 13 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಒಂದು ವರ್ಷದ ಹಿಂದೆಯಷ್ಟೇ ಬಡವರ ಮನೆಯ ಹುಡುಗಿಯನ್ನು ಮದುವೆಯಾಗಿದ್ದ.

ಮೈ ತುಂಬಾ ಸಾಲ ಮಾಡಿಕೊಂಡಿದ್ದ ಸ್ವರಾಜ್‌ ‌ಅದನ್ನು ತೀರಿಸಲಾಗದೇ ಸಾಲಗಾರರ ಕಾಟ ಎದುರಿಸುತ್ತಿದ್ದ. ಹೀಗಾಗಿ ಸಾಲ‌ ತೀರಿಸಲು ಅಡ್ಡದಾರಿಯನ್ನು ಹಿಡಿದಿದ್ದ. ತಾನು ಕೆಲಸ ಮಾಡುತ್ತಿದ್ದ ರೈಲಿನಲ್ಲೇ ಪ್ರಯಾಣಿಕರು ನಿದ್ರೆಗೆ ಜಾರಿದ ಬಳಿಕ‌ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ.

ಅದೇ ರೀತಿ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ನಾಶ್ ನಾಯರ್ ಎಂಬುವರ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪಡಿ ಸ್ವರಾಜ್ ಕೈ ಚಳಕ ಬೆಳಕಿಗೆ ಬಂದಿದೆ.

ಈತನ ನಡವಳಿಕೆಯಲ್ಲಿ ಅನುಮಾನಗೊಂಡ ಪೊಲೀಸರು ಟ್ರಾಲಿ ಬ್ಯಾಗ್ ಪರಿಶೀಲಿಸಿದ್ದಾರೆ. ಆಗ ಬ್ಯಾಗ್‌ನಲ್ಲಿ ಮೊಬೈಲ್ ಫೋನ್‌ಗಳು ಆಭರಣ ಪತ್ತೆಯಾಗಿತ್ತು. ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ‌ಸದ್ಯ ಆರೋಪಿಯ ಬಂಧನದಿಂದ 5 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 3,33,489 ಮೌಲ್ಯದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version