ಬೆಂಗಳೂರು: ಆ ನಯವಂಚಕರು ದೊಡ್ಡ ದೊಡ್ಡ ಉದ್ಯಮಿಗಳನ್ನೇ (Fraud Case) ಟಾರ್ಗೆಟ್ ಮಾಡುತ್ತಿದ್ದರು. ಅದರಲ್ಲೂ ದೇವರು, ಆಧ್ಯಾತ್ಮದ ನಂಬಿಕೆ ಇತ್ತು ಅಂದರೆ ಮುಗಿತು ವಂಚನೆಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಉದ್ಯಮಿಯೊಬ್ಬರನ್ನು ವಂಚಿಸಲು ಮುಂದಾಗಿದ್ದ ಗ್ಯಾಂಗ್ ಜಯನಗರ ಪೊಲೀಸರ ಅತಿಥಿಗಳಾಗಿದ್ದಾರೆ.
ಅದೃಷ್ಟದ ಚೆಂಬಿನ ಹಿಂದೆ ಬಿದ್ದ ಉದ್ಯಮಿಯೊಬ್ಬ ಲಕ್ಷ ಲಕ್ಷ ಕಳೆದುಕೊಂಡಿದ್ದ. ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕಳೆದುಕೊಂಡ ಹಣ ವಾಪಸ್ ಸಿಕ್ಕಿದ್ದು, ಅಂತರರಾಜ್ಯ ವಂಚಕ ಶಿವಶಂಕರ್, ಅಬ್ದುಲ್ ಸುಕ್ಕುರ್ ಹಾಗೂ ಸನ್ನಿ ಗಿಲ್ ಎಂಬುವವರು ಸಿಕ್ಕಿಬಿದ್ದಿದ್ದಾರೆ.
ಈ ಮೂವರು ತಮ್ಮ ಬಳಿ ಅದೃಷ್ಟ ಖುಲಾಯಿಸುವ ಚಮತ್ಕಾರಿ ಪಾತ್ರೆ ಇದೆ. ಅದನ್ನೂ ಮನೆಯಲ್ಲಿ ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ. ಇದಕ್ಕೆ ವಿದೇಶಿ ಮಾರ್ಕೆಟ್‌ನಲ್ಲಿ ಕೋಟಿ ಕೋಟಿ ಬೆಲೆ ಇದೆ ಎಂದು ಬಣ್ಣ ಬಣ್ಣದ ಮಾತುಗಳನ್ನು ಹೇಳಿ ನಂಬಿಸುತ್ತಿದ್ದರು. ಅದೇ ರೀತಿ ಬೆಂಗಳೂರಿನ ಉದ್ಯಮಿಯೊಬ್ಬರನ್ನು ಟಾರ್ಗೆಟ್ ಮಾಡಿ, ಒಂದೂವರೆ ಕೋಟಿ ಕೊಟ್ಟರೆ ಈ ಅದೃಷ್ಟದ ಪಾತ್ರೆ ಕೊಡುವುದಾಗಿ ನಂಬಿಸಿದ್ದಾರೆ. ಕೊನೆಗೆ 70 ಲಕ್ಷ ರೂಪಾಯಿಗೆ ಡೀಲ್ ಮುಗಿಸಿದ್ದರು.
ವಿಡಿಯೊದಲ್ಲಿ ತೋರಿಸಿದ್ದ ಅದೃಷ್ಟ ಚೆಂಬನ್ನು ಕೊಡುತ್ತೇವೆ ದುಡ್ಡು ರೆಡಿ ಮಾಡಿಕೊಳ್ಳಿ ಎಂದಿದ್ದರು. ತಾಮ್ರದ ಪಾತ್ರೆ ತೆಗೆದುಕೊಂಡು ಯಡಿಯೂರು ಕೆರೆ ಬಳಿ ಬಂದು ಹಣ ತೆಗೆದುಕೊಳ್ಳಲು ವ್ಯವಹಾರ ನಡೆಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಜಯನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಉದ್ಯಮಿಗೆ ವಂಚಿಸಿ ಪಡೆದಿದ್ದ 70 ಲಕ್ಷ ರೂ. ಹಣವನ್ನು ಸೀಜ್ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನಲ್ಲಿರುವ ಸುಮಾರು 20 ಉದ್ಯಮಿಗಳನ್ನು ಟಾರ್ಗೆಟ್ ಮಾಡಿಕೊಂಡು ವಂಚಿಸುವುದಕ್ಕೆ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಆದರೆ ಅದಕ್ಕೂ ಮೊದಲೇ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ
ನಕಲಿ ದಾಖಲೆ ಕೊಟ್ಟು 22 ಬ್ಯಾಂಕ್‌ಗಳಿಗೆ ವಂಚನೆ
ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸಿದ್ದ ಖತರ್ನಾಕ್ ಫ್ಯಾಮಿಲಿಯ ಬಂಧನವಾಗಿದೆ. ಒಂದೇ ಕುಟುಂಬದ ಐವರು ಆರೋಪಿಗಳು ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸುಮಾರು 22 ಬ್ಯಾಂಕ್‌ಗಳಿಗೆ ವಂಚಿಸಿ, ಬರೋಬ್ಬರಿ 10 ಕೋಟಿ ರೂ. ಸಾಲ ಪಡೆದಿದ್ದರು.
ನಾಗೇಶ್, ಸತೀಶ್, ವೇದ, ಶೋಭಾ, ಸುಮ, ಶೇಷಗಿರಿ ಬಂಧಿತ ಆರೋಪಿಗಳಾಗಿದ್ದಾರೆ. ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆಯುತ್ತಿದ್ದರು. ನಕಲಿ ದಾಖಲೆಗಳನ್ನು ಡೀಡ್ ಮಾಡಿಸಿ, ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಮಾಡಿಸುತ್ತಿದ್ದರು. ಬಳಿಕ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಲ್ಲಿ ಕಂತು ಸಾಲ ಹಾಗೂ ಯಂತ್ರೋಪಕರಣ ಸಾಲ ಪಡೆಯುತ್ತಿದ್ದರು. ಹೀಗೆ ಒಟ್ಟು 22 ಬ್ಯಾಂಕ್‌ಗಳಲ್ಲಿ ಹತ್ತು ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚನೆ ಮಾಡಿದ್ದಾರೆ. ಸದ್ಯ ಪತಿ, ಪತ್ನಿ ಹಾಗೂ ಈಕೆ ಸೋದರಿ, ಭಾವ ಹಾಗೂ ಅವರ ಸ್ನೇಹಿತೆ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಹತ್ತು ದಿನ ಕಸ್ಟಡಿಗೆ ಪಡೆದು ಜಯನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ