Site icon Vistara News

Fraud Case : ಈ ಖದೀಮರಿಗೆ ಕೈಗೆ ಸಿಕ್ಕ ಚಿನ್ನ ಜೇಬಿಗೆ ಬರಲಿಲ್ಲ; ಏನಿದು ಮಹಾ ಎಡವಟ್ಟು

KRPura police have arrested fake BIS officials

ಬೆಂಗಳೂರು: ಪಳಪಳ ಹೊಳೆಯುವ ಚಿನ್ನದ ರಾಶಿ ಮೇಲೆ ಕಣ್ಣು ಹಾಕಿದ ಆ ವಂಚಕರು, ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದರು. ಇನ್ನೇನು ಕೈಗೆ ಸಿಕ್ಕ ಚಿನ್ನಾಭರಣವನ್ನೆಲ್ಲ ಎಗರಿಸಿ ಪರಾರಿ ಆಗಬೇಕೆಂದು ಕೊಂಡವರು ಪೊಲೀಸರ (Fraud Case) ಅತಿಥಿಗಳಾಗಿದ್ದಾರೆ. ಚಿನ್ನದ ಮಳಿಗೆ ಮೇಲೆ ದಾಳಿ ಮಾಡಿದ ನಾಲ್ವರು ನಕಲಿ‌ ಬಿಐಎಸ್ ಅಧಿಕಾರಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಜನವರಿ 27 ರಂದು ಕೆ.ಆರ್.ಪುರದ ಮಹಾಲಕ್ಷ್ಮೀ ಜ್ಯುವೆಲ್ಲರಿ ಶಾಪ್‌ಗೆ ಟಿಪ್‌ಟಾಪ್‌ ಆಗಿ ಬಂದ ಈ ನಾಲ್ವರು, ತಾವು ಬಿಐಎಸ್‌ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ಅವರ ನಡೆ ನುಡಿ ಎಲ್ಲವೂ ಥೇಟ್‌ ಅಧಿಕಾರಿಗಳ ರೀತಿಯಲ್ಲೇ ಇತ್ತು. ಇನ್ನೋವಾ ಕಾರಲ್ಲಿ ಬಂದವರೇ ಚಿನ್ನದ ಮಳಿಗೆ ಮೇಲೆ ರೈಡ್‌ ಮಾಡಿದ್ದರು.

ಹಾಲ್ ಮಾರ್ಕ್ ಇಲ್ಲದ ಚಿನ್ನವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬಂದಿದೆ. ನಗರದ ಹಲವು ಜ್ಯುವೆಲರ್ಸ್ ಶಾಪ್‌ಗಳ ಮೇಲೆ ದಾಳಿ ಆಗಿವೆ, ಅದರಲ್ಲಿ‌ ನಿಮ್ಮದು ಒಂದು ಎಂದಿದ್ದರು. ಅಧಿಕಾರಿಗಳ ಸೋಗಿನಲ್ಲಿ ಸುಮಾರು 40 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ್ದರು. ಮಳಿಗೆ ಮಾಲೀಕರಿಗೆ ಇವರು ನಕಲಿ ಅಧಿಕಾರಿಗಳೆಂದು ಕೊಂಚವೂ ಅನುಮಾನ ಬರಲಿಲ್ಲ. 1 ಕೆ.ಜಿಗೂ ಅಧಿಕ ಚಿನ್ನವನ್ನು ಜಪ್ತಿ ಮಾಡಿದ ಈ ನಾಲ್ವರು, ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ನೋಟಿಸ್‌ ನೀಡಿದ್ದಾರೆ.

ಇದನ್ನೂ ಓದಿ: Fraud Case : ಗಂಡನಿಗೆ ಗಂಡಾಂತರ! ಪೂಜೆ ನೆಪದಲ್ಲಿ ಮಹಿಳೆಯ ಚಿನ್ನ ಕದ್ದ ಬುಡಬುಡಿಕೆ

ಚಿನ್ನದೊಂದಿಗೆ ಸಿಸಿಟಿವಿ ಡಿವಿಆರ್‌ ಕದ್ದು ಎಡವಟ್ಟು

ನೋಟಿಸ್‌ ಕೊಟ್ಟಾಗ ಚಿನ್ನದ ಮಳಿಗೆ ಸಿಬ್ಬಂದಿ, ಮಾಲೀಕರು ಎಲ್ಲರೂ ನಿಜವಾದ ಅಧಿಕಾರಿಗಳೇ ಎಂದೇ ನಂಬಿದ್ದರು. ಆದರೆ ವಾಪಸ್ ಹೋಗುವ ವೇಳೆ ನಕಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದರು. ಅಸಾಮಿಗಳು ಚಿನ್ನದೊಂದಿಗೆ ಜ್ಯುವೆಲ್ಲರಿಯಲ್ಲಿದ್ದ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋಗಿದ್ದರು.

ಇದು ಶಾಪ್ ಸಿಬ್ಬಂದಿಗೆ ಅನುಮಾನ ಮೂಡಿಸಿತ್ತು. ಕೂಡಲೇ ಇನ್ನೋವಾ ಕಾರಲ್ಲಿ ಹೊರಟ್ಟಿದ್ದ ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿದ್ದಾರೆ. ಶಾಪ್‌ ಸಿಬ್ಬಂದಿ ಫಾಲೋ ಮಾಡಿದ್ದು ತಿಳಿಯುತ್ತಿದ್ದಂತೆ ಬೆದರಿದ ನಕಲಿ ಅಧಿಕಾರಿಗಳು ಯಾರ‍್ರಾಬಿರ‍್ರಿ ಕಾರು ಚಲಾಯಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ.

ಅತಿ ವೇಗವಾಗಿ ಕಾರು ಚಲಾಯಿಸಲು ಹೋಗಿ ಬೈಕ್‌ಗಳಿಗೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿತ್ತು. ಇನ್ನೂ ಈ ಘಟನೆಗೂ ಮೊದಲೇ ಜ್ಯುವೆಲರಿ ಶಾಪ್‌ ಸಿಬ್ಬಂದಿ ನಕಲಿ ಅಧಿಕಾರಿಗಳ ಬಗ್ಗೆ ಪೊಲೀಸರ ಗಮನಕ್ಕೂ ತಂದಿದ್ದರು. ಕೂಡಲೇ ಅಲರ್ಟ್ ಆದ ಕೆ.ಆರ್. ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದರು. ಮೂವರು ಸಬ್‌ ಇನ್ಸ್‌ಪೆಕ್ಟರ್‌ಗಳು ಸೇರಿ ಟಿ.ಸಿ ಪಾಳ್ಯ ಜಂಕ್ಷನ್‌ ಸಮೀಪದಲ್ಲಿದ್ದ ನಾಲ್ವರು ನಕಲಿ ಅಧಿಕಾರಿಗಳನ್ನು ಎಡೆಮುರಿ ಕಟ್ಟಿದ್ದಾರೆ.

ಕೆ.ಆರ್‌.ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಳಿಯಿದ್ದ 1ಕೆ.ಜಿಗೂ ಹೆಚ್ಚು ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಶಾಪ್‌ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಈ ನಕಲಿ ಅಧಿಕಾರಿಗಳು ಬಂಧಿಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version