ಬೆಂಗಳೂರು: ನಡುರಾತ್ರಿ ಎರಡು ಬೈಕ್‌ನಲ್ಲಿ ವಿಧಾನ ಸೌಧ ನೋಡಲು ಹೋಗಿದ್ದ ಮೂವರು ಸ್ನೇಹಿತರಲ್ಲಿ ಒಬ್ಬ ಅಪಘಾತದಲ್ಲಿ (Road accident) ಮೃತಪಟ್ಟಿದ್ದಾರೆ. ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸವೆನ್ ಮಿನಿಸ್ಟರ್ ಕ್ವಾಟ್ರಸ್ ಬಳಿ ರಾತ್ರಿ ೨ ಗಂಟೆಯ ಹೊತ್ತಿಗೆ ಘಟನೆ ನಡೆದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ರಾಜೇಶ್ ಎಂಬವರು ಮೃತಪಟ್ಟಿದ್ದಾರೆ.
ರಾಜೇಶ್ , ಪರಶುರಾಮ್, ಗೋವಿಂದರಾಜು ಮೂವರು ಒಂದೇ ರೂಮಿನಲ್ಲಿ ವಾಸವಾಗಿದ್ದಾರೆ. ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ರಾತ್ರಿ ರೂಮಿಗೆ ಬಂದ ಬಳಿಕ ಬೈಕ್‌ನಲ್ಲಿ ಜಾಲಿ ರೈಡ್ ಮೂಲಕ ವಿಧಾನಸೌಧ ನೋಡಿಕೊಂಡು ಬರೋಣ ಎಂದು ನಿರ್ಧರಿಸಿದ್ದಾರೆ. ರಾಜೇಶ್ ಮತ್ತು ಪರಶುರಾಮ್ ಒಂದು ಬೈಕ್‌ನಲ್ಲಿ ಹೊರಟರೆ ಗೋವಿಂದ ರಾಜು ಇನ್ನೊಂದು ಬೈಕ್‌ನಲ್ಲಿದ್ದರು.
ರಾಜೇಶ್ ಮತ್ತು ಪರಶುರಾಮ್ ಅವರು ಸಾಗುತ್ತಿದ್ದ ಬೈಕ್ ಮಾರ್ಗ ಮಧ್ಯೆ ತಿರುವಿನಲ್ಲಿ ಸ್ಕಿಡ್ ಆಗಿ ಬಿದ್ದ ಪರಿಣಾಮವಾಗಿ ರಾಜೇಶ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಹಿಂದೆ ಕುಳಿತಿದ್ದ ಪರಶುರಾಮ್ ಅವರಿಗೂ ಗಾಯಗಳಾಗಿವೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ.
ಅಪಘಾತ ಸಂಭವಿಸುವಾಗ ಗೋವಿಂದ ರಾಜು ಅವರು ಹಿಂದಿನಿಂದ ಬೈಕ್‌ನಲ್ಲಿ ಬರುತ್ತಿದ್ದರು. ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದು ತಮ್ಮ ಸಂಪರ್ಕದ ಮೂಲಕ ಕೂಡಲೇ ಆಂಬ್ಯುಲೆನ್ಸ್ ತರಿಸಿಕೊಂಡು ಗೆಳೆಯರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ತಲೆಗೆ ಗಂಭೀರ ಏಟು ಬಿದ್ದಿದ್ದರಿಂದ ರಾಜೇಶ್ ಬದುಕುಳಿಯಲಿಲ್ಲ. ಪರಶುರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕರು ಕುಡಿತದ ಮತ್ತಿನಲ್ಲಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Road Accident: ಖಾಸಗಿ ಬಸ್, ಬೈಕ್ ಡಿಕ್ಕಿಯಾಗಿ ತಂದೆ, ಮಗಳ ದಾರುಣ ಸಾವು