Site icon Vistara News

Ganesha Chaturthi 2023 : ಬೆಂಗಳೂರಿನ ಹಲವು ಕಡೆ ಈ ದಿನಗಳಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್!

liquor in bar

ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿ (Ganesha Chaturthi 2023) ಸಂಭ್ರಮ ಮನೆ ಮಾಡಿದೆ. ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ವಿಸರ್ಜನೆಗಳು ನಡೆಯುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿಯೂ ಸಂಭ್ರಮ ಜೋರಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು, ದೊಂಬಿಗಳು, ಹೊಡೆದಾಟಗಳು ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಬೆಂಗಳೂರಿನಲ್ಲಿ ಕ್ರಮ ವಹಿಸಲಾಗಿದೆ. ನಗರದ ಹಲವು ಕಡೆ ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ (Ban on sale of liquor) ಮಾಡಿ ಆದೇಶಿಸಲಾಗಿದೆ.

ಹೀಗಾಗಿ ಈ ಆದೇಶ ಒಂದು ದಿನದ ಮಟ್ಟಿಗೆ ಇರಲಿದ್ದು, ಯಾವ ಯಾವ ವಿಭಾಗದಲ್ಲಿ ಯಾವ ಯಾವ ದಿನ ಮದ್ಯ ಮಾರಾಟ ಇರುವುದಿಲ್ಲ ಎಂಬುದನ್ನು ಪೊಲೀಸ್‌ ಇಲಾಖೆ ಪ್ರಕಟಣೆ (Police Department Press Release) ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ: Gift Politics : ಗಿಫ್ಟ್‌ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರಿನ ಕೇಂದ್ರ, ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧ ಮಾಡಿ ಆದೇಶಿಸಲಾಗಿದೆ. ಹೀಗಾಗಿ ಈ ದಿನದಲ್ಲಿ ಆಯಾ ಕಡೆ ಮದ್ಯ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮದ್ಯ ಮಾರಾಟ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸ್‌ ಇಲಾಖೆ ನೀಡಿದೆ.

ganesh festival pooja

ಎಲ್ಲೆಲ್ಲಿ ಮತ್ತು ಯಾವಾಗ ಮದ್ಯ ಮಾರಾಟ ನಿಷೇಧ?

ಉತ್ತರ ವಿಭಾಗ: ಜೆಸಿ ನಗರ , ಆರ್.ಟಿ. ನಗರ, ಹೆಬ್ಬಾಳ ಹಾಗೂ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಿಷೇಧ ಮಾಡಲಾಗಿದೆ. ಇಲ್ಲಿ ಸೆಪ್ಟೆಂಬರ್ 21ರ ಬೆಳಗ್ಗೆ 6 ಗಂಟೆಯಿಂದ ಸೆ. 22ರ ಬೆಳಗ್ಗೆ 6 ಗಂಟೆ ವರೆಗೂ ಮದ್ಯ ಮಾರಾಟವನ್ನು ನಿಷೇಧ ಮಾಡಿ ಆದೇಶವನ್ನು ಹೊರಡಿಸಲಾಗಿದೆ.

ಪೂರ್ವ ವಿಭಾಗ: ಈ ಭಾಗದ ಡಿಜೆ ಹಳ್ಳಿ , ಭಾರತಿ ನಗರ ಹಾಗೂ ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯಲ್ಲಿ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಇಲ್ಲಿ ಸೆಪ್ಟೆಂಬರ್ 23ರ ಬೆಳಗ್ಗೆ 6 ಗಂಟೆಯಿಂದ ಸೆ. 24ರ ಬೆಳಗ್ಗೆ 6 ಗಂಟೆವರೆಗೂ ನಿಷೇಧ ಹೇರಲಾಗಿದೆ.

ಪೂರ್ವ ವಿಭಾಗ: ಈ ಭಾಗದ ಕಮರ್ಷಿಯಲ್ ಸ್ಟ್ರೀಟ್, ಹಲಸೂರು, ಶಿವಾಜಿನಗರ ಭಾಗದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್‌ ಹಾಕಲಾಗಿದೆ. ಇಲ್ಲಿ ಸೆಪ್ಟೆಂಬರ್ 24ರ ಬೆಳಗ್ಗೆ 6 ಗಂಟೆಯಿಂದ ಸೆ. 25ರ ಬೆಳಗ್ಗೆ 6 ಗಂಟೆವರೆಗೂ ನಿಷೇಧ ಮಾಡಿ ಆದೇಶಿಸಲಾಗಿದೆ.

ಈಶಾನ್ಯ ವಿಭಾಗ: ಈ ಭಾಗದ ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ಉಪನಗರ, ಕೊಡಿಹಳ್ಳಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಲ್ಲಿ ಸೆಪ್ಟೆಂಬರ್ 23ರ ಸಂಜೆ 6 ಗಂಟೆಯಿಂದ ಸೆ. 25ರ ಬೆಳಗ್ಗೆ 6 ಗಂಟೆ ವರೆಗೂ ನಿಷೇಧ ಮಾಡಿ ಆದೇಶಿಸಲಾಗಿದೆ.

ಇದನ್ನೂ ಓದಿ: Namma Metro : ಸೆಪ್ಟೆಂಬರ್ 29ರಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗ ಆರಂಭ?

ಇನ್ನು ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಸಹ ಮದ್ಯ ಮಾರಾಟವನ್ನು ನಿಷೇಧ ಮಾಡಿ ಆದೇಶಿಸಲಾಗಿದೆ. ಸೆಪ್ಟೆಂಬರ್ 30ರ ಬೆಳಗ್ಗೆ 6 ರಿಂದ ಅಕ್ಟೋಬರ್ 1ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಾಟ ನಿಷೇಧ ಮಾಡಿದ್ದು, ಎಲ್ಲಿಯೂ ಸಹ ಯಾರೂ ಮಾರಾಟ ಮಾಡಕೂಡದು ಎಂದು ಹೇಳಲಾಗಿದೆ.

Exit mobile version