ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ (Ganesha Chaturthi) ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದೆ. ಹೀಗಾಗಿ ಈ ವೇಳೆ ಯಾವುದೇ ರೀತಿಯ ಗೊಂದಲ ಮತ್ತು ಅವ್ಯವಸ್ಥೆಗೆ ಎಡೆ ಮಾಡಿಕೊಡದೆ ಇರಲು ಬಿಬಿಎಂಪಿ (BBMP prepardeness) ನಿರ್ಧರಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳ (Rules and Regulations) ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ.
ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ ಬಂದಿದ್ದು, ಸಿಲಿಕಾನ್ ಸಿಟಿಗೆ ಗಣಪತಿ ಮೂರ್ತಿಗಳು ಎಂಟ್ರಿ ಕೊಟ್ಟಿವೆ. ಇತ್ತ ಸಿಟಿ ಮಂದಿ ಸಹ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ. ಅವರಿಗೆಲ್ಲ ಬಿಬಿಎಂಪಿ ಕೆಲವು ಸೂಚನೆಗಳನ್ನು ನೀಡಿದೆ. ಇದು ಬಿಬಿಎಂಪಿ ಅಧಿಕಾರಿಗಳು ಪಾಲಿಸಬೇಕಾದ ಮತ್ತು ಗಣೇಶನನ್ನು ಪೂಜೆ ಮಾಡುವವರು ಪಾಲಿಸಬೇಕಾದ ನಿಯಮಗಳು
ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಬಗ್ಗೆ ಹಾಗೂ ಪಾಲಿಕೆ ವತಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಬಿಬಿಎಂಪಿ ಕಮಿಷನರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳು ಭಾಗಿಯಾಗಿ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
ಗಣಪತಿ ಹಬ್ಬಕ್ಕೆ ಬಿಬಿಎಂಪಿ ಮುಂಜಾಗ್ರತಾ ಕ್ರಮಗಳು ಏನು?
- ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬ್ಯಾನರ್ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಬಾರದು.
- ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಮತ್ತಿತರ ಕಡೆಗಳಲ್ಲಿ ವಿಸರ್ಜನೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ
- ಸಣ್ಣ ವಿಗ್ರಹಗಳ ವಿಸರ್ಜನೆಗೆ ಪ್ರತಿ ವರ್ಷದಂತೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸಲಹೆ
- ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು.
- ಮೆರವಣಿಗೆ ವೇಳೆ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟೆಚ್ಚರ
- ವಿಗ್ರಹ ವಿಸರ್ಜನೆ ಆಯ್ಕೆಯಾದ ಕೆರೆಗಳು ಮತ್ತು ಕೃತಕ ಕೊಳಗಳ ಸುತ್ತಲೂ ಸರಿಯಾದ ಬ್ಯಾರಿಕೇಡಿಂಗ್ ಇರಬೇಕು.
- ವಿಗ್ರಹ ವಿಸರ್ಜನೆ ಸ್ಥಳಗಳಲ್ಲಿ ಜೀವರಕ್ಷಕ ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು.
- ಅಗತ್ಯ ಇರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪಗಳನ್ನೂ ಅಳವಡಿಸಬೇಕು
- ರಾಸಾಯನಿಕ ಬಣ್ಣಗಳನ್ನು ಬಳಸುವುದು ಮತ್ತು ಥರ್ಮಾಕೋಲ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹ ನಿಷಿದ್ಧ.
ಇದನ್ನೂ ಓದಿ : Ganesh Chaturthi | 13 ವರ್ಷಗಳಿಂದ ಭಾವೈಕ್ಯ ಸಾರುತ್ತಿರುವ ಗ್ಯಾರೇಜ್ ಗಣೇಶ!
ಬಿಬಿಎಂಪಿ ಈ ಬಾರಿ ಹಬ್ಬಕ್ಕಿಂತ ಮೊದಲೇ ಎಚ್ಚೆತ್ತು ಕ್ರಮಗಳನ್ನು ಘೋಷಿಸಿದೆ. ಅದರಲ್ಲು ಯಾವ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಗಣೇಶನ ಮೂರ್ತಿ ಮಾರುವ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವವರು ಈ ಮೇಲಿನ ಕ್ರಮಗಳನ್ನು ಪಾಲಿಸಿದರೆ ಒಳಿತು. ಇಲ್ಲದಿದ್ದರೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.