Site icon Vistara News

Bangalore Kambala : ಅರಮನೆ ಮೈದಾನಲ್ಲಿ ಕೋಣಗಳ ದರ್ಬಾರ್‌; ಎಷ್ಟು ಹೊತ್ತಿಗೆ ಶುರು, ಹೇಗೆ ನಡೆಯುತ್ತೆ ಕಂಬಳ?

Kambala in Banagalore

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ಕೋಣಗಳ ದರ್ಬಾರ್‌ ಶುರುವಾಗಿದೆ. ನವೆಂಬರ್‌ 25 ಮತ್ತು 26ರಂದು ನಡೆಯುವ ಬೆಂಗಳೂರು ಕಂಬಳಕ್ಕಾಗಿ (Bangalore Kambala) ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಬ್ಬದ ವಾತಾವರಣ ಮೈದಳೆದಿದೆ. ಕರಾವಳಿಯ ಜಾನಪದ ಮತ್ತು ಸಾಂಪ್ರದಾಯಿಕ ಕ್ರೀಡೆಯನ್ನು ರಾಜಧಾನಿಯ ಮೂಲಕ ಇಡೀ ಜಗತ್ತಿಗೆ ತೋರಿಸುವ ಈ ಪ್ರಯತ್ನಕ್ಕೆ ಅದ್ಧೂರಿ ಮುನ್ನುಡಿ ಬರೆಯಲಾಗಿದೆ.

ಬೆಂಗಳೂರಿನಲ್ಲಿ ಕಂಬಳಕ್ಕಾಗಿ ನಿರ್ಮಾಣವಾಗಿರುವ ಟ್ರ್ಯಾಕ್

ಅರಮನೆ ಮೈದಾನದಲ್ಲಿ ಶುಕ್ರವಾರದಿಂದಲೇ ಹಬ್ಬದ ಕಳೆ ಕಾಣಿಸುತ್ತಿದೆ. ಶನಿವಾರ ಮತ್ತು ಭಾನುವಾರವಂತೂ ಇಡೀ ಅರಮನೆ ಮೈದಾನ ತುಂಬಿ ತುಳುಕುವ ಲಕ್ಷಣಗಳು ಕಾಣಿಸಿವೆ. ರಾಜಧಾನಿಯಲ್ಲಿ ವಾಹನ ಸಂಚಾರವನ್ನೇ ಬದಲಾಯಿಸುವಷ್ಟು ದೊಡ್ಡ ಮಟ್ಟಿಗೆ ನಡೆಯುತ್ತಿರುವ ಕಂಬಳದಲ್ಲಿ ರಾಜಕಾರಣಿಗಳು, ಅತಿ ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಬಾಲಿವುಡ್‌-ಸ್ಯಾಂಡಲ್‌ವುಡ್‌ ನಟ ನಟಿಯರು ಮತ್ತು ಸಾರ್ವಜನಿಕರು ಸೇರಿದಂತೆ ಸುಮಾರು 6-7 ಲಕ್ಷ ಮಂದಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.

ರಾಜಧಾನಿಯಲ್ಲಿ ನಡೆಯುವ ಮೊದಲ ಕಂಬಳಕ್ಕೆ ಅಖಾಡ ಸಜ್ಜಾಗಿದೆ, ಕೋಣಗಳು ಓಟಕ್ಕೆ ರೆಡಿಯಾಗಿವೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ, ಆಹಾರ ಮೇಳಕ್ಕೆ ಒಲೆ ಉರಿಸಲಾಗಿದೆ, ಜಾನಪದ ಸಂಸ್ಕೃತಿಯ ಸೊಗಡು ಆಗಲೇ ಮೈದಳೆದಿದೆ.

‌ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರಿಂದ ಚಾಲನೆ

ಶನಿವಾರ ಬೆಳಗ್ಗೆ 10.30ಕ್ಕೆ ಬೆಂಗಳೂರು ಕಂಬಳಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಕರೆ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಕಂಬಳೋತ್ಸವವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹಲವು ನಟ-ನಟಿಯರು ಭೇಟಿ ನೀಡಲಿದ್ದರೆ, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಸಂಪುಟದ ಸಚಿವರು ಭಾಗಿಯಾಗಲಿದ್ದಾರೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಅವರು ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ 155 ಮೀಟರ್ ಉದ್ದದ ಕರೆ ನಿರ್ಮಾಣವಾಗಿದ್ದು, ಈ ಜೋಡಿ ಕರೆಗೆ ರಾಜ, ಮಹಾರಾಜ ಅಂತಾ ಹೆಸರಿಡಲಾಗಿದೆ. ನೂರಕ್ಕೂ ಅಧಿಕ ಸ್ಟಾಲ್ ಗಳು ತಲೆ ಎತ್ತಿದ್ದು, ಕರಾವಳಿಯ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸೋಕೆ ಸಿದ್ಧತೆ ನಡೆದಿದೆ.

ಇನ್ನು ಕಂಬಳದ ಗ್ಯಾಲರಿಯಲ್ಲಿ ಸುಮಾರು 8 ಸಾವಿರ ವಿಐಪಿ ಆಸನಗಳ ವ್ಯವಸ್ಥೆ ಇದ್ದು, ಜನರಿಗೆ ಪ್ರತೇಕ ವ್ಯವಸ್ಥೆ ಮಾಡಲಾಗಿದೆ. ಸದ್ಯ ಕಂಬಳಕ್ಕೆ ಉಚಿತ ಪ್ರವೇಶ ನೀಡಿರೋದರಿಂದ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿಯಾಗೋ ನಿರೀಕ್ಷೆಯಿದೆ. ಕಂಬಳಕ್ಕಾಗಿ KSRTCಯಿಂದ 150 ಹೆಚ್ಚುವರಿ ಬಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ, ಕಂಬಳ ಇತಿಹಾಸ ತಜ್ಞ ಗುಣಪಾಲ ಕಡಂಬ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕಂಬಳ ಹೇಗೆ ನಡೆಯುತ್ತದೆ? ಇದು 30 ಗಂಟೆಗಳ ಮೆಗಾ ಇವೆಂಟ್‌!

ಕಂಬಳ ಆರು ವಿಭಾಗಗಳಲ್ಲಿ ನಡೆಯಲಿದೆ. ಹಗ್ಗದ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಎಂಬ ಎರಡು ವರ್ಗಗಳಿವೆ. ನೇಗಿಲು ವಿಭಾಗದಲ್ಲೂ ಹಿರಿಯ ಮತ್ತು ಕಿರಿಯ ವರ್ಗಗಳಿವೆ. ಉಳಿದಂತೆ ಅಡ್ಡಹಲಗೆ ಮತ್ತು ಕನಹಲಗೆ ವಿಭಾಗಗಳಿವೆ.

ಬೆಳಗ್ಗೆ 10.30ರಿಂದಲೇ ಕೋಣಗಳ ಓಟ ಶುರುವಾಗಲಿದೆ. ಆರಂಭದಲ್ಲಿ ಹಗ್ಗ ಮತ್ತು ನೇಗಿಲಿನ ಕಿರಿಯ ವಿಭಾಗದ ಕೋಣಗಳ ಒಂಟಿ ಓಟವಿರುತ್ತದೆ. ಈ ಕೋಣಗಳು 155 ಮೀಟರ್‌ ಓಡಲು ತೆಗೆದುಕೊಳ್ಳುವ ಸಮಯವನ್ನು ನೋಟ್‌ ಮಾಡಲಾಗುತ್ತದೆ. ಇದು ಅವುಗಳ ನಡುವೆ ಓಟದ ಸ್ಪರ್ಧೆಯನ್ನು ಆಯೋಜಿಸಲು ಅನುಕೂಲವಾಗುತ್ತದೆ.

ಅದೇ ರೀತಿ ಹಗ್ಗ ಮತ್ತು ನೇಗಿಲಿನ ಹಿರಿಯ ವಿಭಾಗದ ಕೋಣಗಳ ಒಂಟಿ ಓಟ ನಡೆದು ಅಲ್ಲೂ ಸಾಲುಗಳ ನಿರ್ಣಯ ಮಾಡಲಾಗುತ್ತದೆ. ಅಡ್ಡಹಲಗೆಯಲ್ಲಿ ಕೂಡಾ ಇದೇ ರೀತಿಯಲ್ಲಿ ಸಾಲು ನಿರ್ಣಯವಾಗುತ್ತದೆ. ಕನಹಲಗೆಯ ಕೋಣಗಳಿಗೆ ಸ್ಪರ್ಧೆ ಇರುವುದಿಲ್ಲ. ಅವು ಒಂಟಿಯಾಗಿ ಓಡುತ್ತಲೇ ನಿಶಾನೆಗೆ ನೀರು ಹಾರಿಸುವ ಸ್ಪರ್ಧೆ.

ಸಾಮಾನ್ಯವಾಗಿ ಸಂಜೆಯವರೆಗೆ ಒಂಟಿ ಓಟವೇ ಹೆಚ್ಚಾಗಿದ್ದು, ಸಂಜೆ ಮತ್ತು ಕತ್ತಲಿನ ಹೊತ್ತಿಗೆ ಕನಹಲಗೆ ಓಟ ಗಮನ ಸೆಳೆಯಲಿದೆ. ಅದಾದ ಬಳಿಕ ಇತರ ವಿಭಾಗಗಳಲ್ಲಿ ಸ್ಪರ್ಧೆ ಆರಂಭವಾಗುತ್ತದೆ.

ಶನಿವಾರ ಮಧ್ಯಾಹ್ನ ಆರಂಭವಾಗುವ ಕಂಬಳ ಮರುದಿನ ಸಂಜೆ ಐದು ಗಂಟೆಗೆ ಮುಕ್ತಾಯವಾಗಬಹುದು ಎಂಬ ನಿರೀಕ್ಷೆ ಇದೆ. ಕೋಣಗಳ ನಡುವಿನ ಓಟಗಳು ಹಂತ ಹಂತವಾಗಿ ನಡೆದು ಒಂದು ಹಂತದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಎಂಟು ಜೋಡಿ ಕೋಣಗಳು ಆಯ್ಕೆಯಾಗುತ್ತವೆ.

ಹಗ್ಗ ಹಿರಿಯ/ಕಿರಿಯ ಮತ್ತು ನೇಗಿಲಿನಲ್ಲಿ ಕ್ವಾರ್ಟರ್‌ ಫೈನಲ್‌ ನಡೆದು ಬಳಿಕ ಸೆಮಿಫೈನಲ್‌, ಆ ಬಳಿಕ ಫೈನಲ್‌ ನಡೆಯಲಿದೆ. ಎಲ್ಲ ವಿಭಾಗಗಳಲ್ಲೂ ಈ ಹಂತಗಳು ಒಂದಾದನಂತರ ಇನ್ನೊಂದು ನಡೆಯುತ್ತವೆ. ಅಂತಿಮವಾಗಿ ನಡೆಯುವುದು ಕೂಟದಲ್ಲೇ ಅತ್ಯಂತ ಪ್ರತಿಷ್ಠಿತವಾದ ಹಗ್ಗ ಹಿರಿಯ ವಿಭಾಗದ ಕೋಣಗಳ ಓಟ.

ಇತಿಹಾಸದಲ್ಲೇ ಮೊದಲ ಬಾರಿ ಮೂರನೇ ಬಹುಮಾನವೂ ಇದೆ

ಸಾಮಾನ್ಯವಾಗಿ ಕಂಬಳಗಳಲ್ಲಿ ಮೊದಲ ಮತ್ತು ಎರಡನೇ ಬಹುಮಾನ ಹಾಗೂ ವಿಜೇತ ಕೋಣಗಳನ್ನು ಓಡಿಸಿದವರಿಗೆ ಬಹುಮಾನ ನೀಡಲಾಗುತ್ತದೆ. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರು ಕಂಬಳದಲ್ಲಿ ಮೂರನೇ ಬಹುಮಾನ ಕೂಡಾ ಇದೆ.

ಮೊದಲನೇ ಬಹುಮಾನ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಇದ್ದರೆ, ಎರಡನೇ ಬಹುಮಾನ 8 ಗ್ರಾಂ ಚಿನ್ನ ಮತ್ತು 50 ಸಾವಿರ ರೂ. ನಗದು ಬಹುಮಾನವಿದೆ. ಮೂರನೇ ಬಹುಮಾನ ಪಡೆದವರಿಗೆ ನಾಲ್ಕು ಗ್ರಾಂ ಚಿನ್ನ ಮತ್ತು 25 ಸಾವಿರ ರೂ. ಬಹುಮಾನವಿದೆ. ಅದರ ಜತೆಗೆ ವಿಜೇತ ಕೋಣಗಳನ್ನು ಓಡಿಸಿದ ಜಾಕಿಗಳಿಗೆ ಕೂಡಾ ಚಿನ್ನ ಮತ್ತು ನಗದು ಬಹುಮಾನವಿದೆ.

ಇದನ್ನೂ ಓದಿ : Bangalore Kambala : ಕ್ರಿಕೆಟ್‌ಗಿಂತಲೂ ಮೊದಲೇ ಶುರುವಾಗಿತ್ತು DAY and NIGHT ಕಂಬಳ!

ಕಂಬಳಕ್ಕೆ ಉಚಿತ ಪ್ರವೇಶ, ಆದರೆ ಸ್ಪೆಷಲ್‌ ಗೇಟ್‌ ಇದೆ

ಬೆಂಗಳೂರು ಕಂಬಳಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಸಿಗಲಿದೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಪ್ರತ್ಯೇಕ ಪ್ರವೇಶವಿರುತ್ತದೆ. ವಿವಿಐಪಿಗಳಳಿಗೆ ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ.

ಕಂಬಳ ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.

ಇದನ್ನೂ ಓದಿ: Bangalore Kambala: ಬೆಂಗಳೂರಿಗೆ ಬಂದ ಕೋಣಗಳಿಗೆ ಕುಡಿಯಲು ಮಂಗಳೂರಿನಿಂದಲೇ ನೀರು; ಯಾಕೆ?

ಬೆಂಗಳೂರು ಕಂಬಳದ ಪ್ರಮುಖಾಂಶಗಳು

  1. ಬೆಂಗಳೂರು ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗಿದೆ.
  2. ಕಂಬಳದ ಟ್ರ್ಯಾಕ್‌ಗೆ ರಾಜ-ಮಹಾರಾಜ ಎಂದು ಹೆಸರು ಇಡಲಾಗಿದೆ.
  3. ಸಾಂಸ್ಕೃತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ.
  4. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ, ಹುಲಿ ಕುಣಿತವೂ ಇದೆ.
  5. ಕರಾವಳಿ ಮತ್ತು ನಾಡಿನ ನಾನಾ ಖಾದ್ಯ ವೈವಿಧ್ಯಗಳ ಆಹಾರ ಮೇಳವಿದೆ.

Exit mobile version