Site icon Vistara News

Gruhajyoti scheme: ಬಾಡಿಗೆದಾರರಿಗೆ ಗುಡ್‌ ನ್ಯೂಸ್;‌ ಹೊಸ ವಿಳಾಸಕ್ಕೆ De-Link ಆಯ್ಕೆ ಕೊಟ್ಟ ಸರ್ಕಾರ!

Gruhajyoti scheme in Karnataka

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾದ ಗೃಹ ಜ್ಯೋತಿ (Gruhajyoti scheme) ಉಚಿತ ವಿದ್ಯುತ್‌ ಯೋಜನೆಯ (Free Eelectricity Scheme) ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆ (Gruhajyoti Rules Change) ಮಾಡಲಾಗಿದೆ. ಇಷ್ಟು ದಿನ ಬಾಡಿಗೆ ಮನೆಯಲ್ಲಿದ್ದವರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಆದರೆ, ಇನ್ನು ಮುಂದೆ ಬಾಡಿಗೆದಾರರು ಮನೆಯನ್ನು ಬದಲಾವಣೆ ಮಾಡಿದರೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಹೌದು, ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದವರಿಗೆ ಕೂಡಲೇ ಹಳೇ ವಿಳಾಸದ ಸಂಪರ್ಕವನ್ನು ರದ್ದು ಪಡಿಸಿ, ಹೊಸ ವಿಳಾಸಕ್ಕೆ ಯೋಜನೆಯ ಫಲವನ್ನು ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಮೇಲೆ ಕೆಲವು ಸಮಸ್ಯೆಗಳು ಉದ್ಭವವಾಗಿದ್ದವು. ಈ ಬಗ್ಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಅದೇನೆಂದರೆ, ಒಂದು ಕಡೆ ಬಾಡಿಗೆ ಮನೆಯಲ್ಲಿದ್ದವರು ನಾನಾ ಕಾರಣಗಳಿಗೆ ಮನೆಗಳನ್ನು ಬದಲಾವಣೆ ಮಾಡಿರುತ್ತಾರೆ. ಆದರೆ, ಹೋಗಿರುವ ಹೊಸ ಮನೆಗೆ ತಮ್ಮ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿ ಸೌಲಭ್ಯವನ್ನು ಪಡೆಯಲು ಆಗುತ್ತಿರಲಿಲ್ಲ. ಇವರು ಈ ಹಿಂದೆ ಇದ್ದ ಮನೆಯ ವಿದ್ಯುತ್‌ ಸಂಪರ್ಕಕ್ಕೆ ಲಿಂಕ್‌ ಆಗಿದ್ದ ಆಧಾರ್‌ ಸಂಖ್ಯೆಯನ್ನು ರದ್ದುಪಡಿಸಲೂ ಬರುತ್ತಿರಲಿಲ್ಲ. ಹೀಗಾಗಿ ಈ ಹಿಂದೆ ಆ ಮನೆಯಲ್ಲಿದ್ದವರು ಬಳಕೆ ಮಾಡುತ್ತಿದ್ದ ಯೂನಿಟ್‌ಗೆ ಹೆಚ್ಚುವರಿ ಶೇ. 10ರಂತೆ ಇವರು ಬಳಕೆ ಮಾಡಬೇಕಿತ್ತು.

ಇದನ್ನೂ ಓದಿ: Free Electricity : ಗೃಹ ಜ್ಯೋತಿ ನಿಯಮ ಬದಲು ; 10% ಬದಲು 10 ಯುನಿಟ್‌ ಹೆಚ್ಚುವರಿ; ಲಾಭಾನಾ? ನಷ್ಟಾನಾ?

ಅದೇ ಈ ಹಿಂದೆ ಇದ್ದವರು ಹೆಚ್ಚುವರಿಯಾಗಿ ಬಳಕೆ ಮಾಡಿದ್ದರೆ ಇವರಿಗೆ ಯಾವುದೇ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಅವರು ಕಡಿಮೆ ಯೂನಿಟ್‌, ಅಂದರೆ 110 ಯೂನಿಟ್‌ ಅನ್ನು ಬಳಕೆ ಮಾಡುತ್ತಿದ್ದು, ಈಗ ಹೊಸದಾಗಿ ಆ ಮನೆಗೆ ಹೋದವರು 150 ಯುನಿಟ್‌ ಸರಾಸರಿ ಬಳಕೆ ಮಾಡುತ್ತಿದ್ದರೆ, ಅಂಥವರಿಗೆ ಕಷ್ಟವಾಗುತ್ತಿತ್ತು. ಅಲ್ಲದೆ, ತಮ್ಮ ಆಧಾರ್‌ ಕಾರ್ಡ್‌ ಅನ್ನು ಹೊಸ ಮನೆಯ ವಿದ್ಯುತ್‌ ಸಂಪರ್ಕಕ್ಕೆ ಜೋಡಣೆ ಮಾಡಲು ಸಹ ಆಗುತ್ತಿರಲಿಲ್ಲ. ಈಗ ರಾಜ್ಯ ಸರ್ಕಾರ ನೀಡಿರುವ ಆದೇಶವು ನಿರಾಳತೆಯನ್ನು ತಂದಿದೆ.

ಡಿ‌ – ಲಿಂಕ್ ಮತ್ತು ರೀ- ಲಿಂಕ್‌ಗೆ ಅವಕಾಶ

ಗೃಹ ಜ್ಯೋತಿ” ಯೋಜನೆಯ ನೋಂದಣಿ ವ್ಯವಸ್ಥೆಯಾದ ಸೇವಾ ಸಿಂಧು ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯವನ್ನು ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶದಲ್ಲೇನಿದೆ?

“ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿ ನೀಡಲಾಗಿದೆ. ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್‌ ಬಿಲ್ಲನ್ನು ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.

“ಗೃಹ ಜ್ಯೋತಿ” ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ತಂತ್ರಾಂಶದ ಮೂಲಕ ನೋಂದಣಿ ಮಾಡಬಹುದಾಗಿರುತ್ತದೆ. ಆದರೆ, ಸೇವಾ ಸಿಂಧು ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯವನ್ನು ಪ್ರಸ್ತುತ ಕಲ್ಪಿಸಿರುವುದಿಲ್ಲ. ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಂತಹ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಈಗಾಗಲೇ ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು De-Link ಅವಕಾಶ ಮಾಡಿಕೊಡಬೇಕಾಗುತ್ತದೆ. ಆದ್ದರಿಂದ, ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಈ ಸಂಬಂಧ, ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೀಗಾಗಿ ಇನ್ನು ಮುಂದೆ ಬಾಡಿಗೆ ಮನೆಯನ್ನು ಬದಲಾವಣೆ ಮಾಡುವವರು ಹಳೇ ಮನೆಯ ವಿದ್ಯುತ್‌ ಸಂಪರ್ಕದ ಆರ್‌ ಆರ್‌ ನಂಬರ್‌ಗೆ ಜೋಡಿಸಿದ್ದ ಆಧಾರ್‌ ಸಂಖ್ಯೆಯನ್ನು De-Link ಮಾಡಬಹುದಾಗಿದೆ. ಆಗ ಹೊಸ ಮನೆಯ ಆರ್‌ ಆರ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು Re-Link ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Gruha Lakshmi: ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿದ್ದನ್ನು ತಿಳಿಯೋದು ಹೇಗೆ? ಇಲ್ಲಿದೆ ಸಿಂಪಲ್‌ ಟ್ರಿಕ್ಸ್!‌

ಇದೊಂದು ಸ್ಪಷ್ಟತೆ ಇಲ್ಲ!

ಇಲ್ಲಿ ಇನ್ನೊಂದು ತಾಂತ್ರಿಕ ಪ್ರಶ್ನೆ ಎದುರಾಗಿದ್ದು, ಹೊಸ ಮನೆಗೆ ಬಂದ ಬಳಿಕ ಮೊದಲು ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಅಲ್ಲಿ ವಾಸವಾಗುವ ಬಾಡಿಗೆದಾರರು ಈ ಹಿಂದಿನ ಮನೆಯಲ್ಲಿ ಬಳಕೆ ಮಾಡುತ್ತಿದ್ದ ವಿದ್ಯುತ್‌ ಸರಾಸರಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆಯೋ ಅಥವಾ ಈಗ ಬಂದಿರುವ ಮನೆಯಲ್ಲಿ ಹಿಂದಿನವರು ಬಳಕೆ ಮಾಡುತ್ತಿದ್ದ ಸರಾಸರಿ ವಿದ್ಯುತ್‌ ಬಳಕೆಗಷ್ಟೆ ಉಚಿತ ಬಿಲ್‌ ಅನ್ನು ನೀಡಲಾಗುತ್ತದೆಯೋ ಎಂಬುದು ಮಾತ್ರ ಸ್ಪಷ್ಟತೆ ಇಲ್ಲ.

Exit mobile version