Site icon Vistara News

Gruhalakshmi scheme : ಗೃಹಲಕ್ಷ್ಮಿ ಹಣ ಸಿಕ್ಕಿಲ್ಲ ಎಂಬ ಆತಂಕ ಬೇಡ, ಎಲ್ಲ ಮೊತ್ತ ಒಟ್ಟಿಗೇ ಸಿಗಲಿದೆ

Gruhalakshmi Lakshmi Hebbalkar

Gruhalakshmi Lakshmi Hebbalkar

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ (Gruhalakshmi scheme) ನೋಂದಾಯಿಸಿಕೊಂಡ ಗೃಹಿಣಿಯರಲ್ಲಿ ಶೇಕಡಾ 95ರಷ್ಟು ಮನೆ ಒಡತಿಯರಿಗೆ ಈಗಾಗಲೇ ಹಣ ತಲುಪಿದೆ. ತಾಂತ್ರಿಕ ಸಮಸ್ಯೆಯಿಂದಾಗಿ (Technical Problem) ಶೇಕಡಾ 5ರಷ್ಟು ಜನರಿಗೆ ತಲುಪಿಲ್ಲ. ಈ ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ. ಅಷ್ಟೇ ಅಲ್ಲ, ಒಮ್ಮೆ ತಾಂತ್ರಿಕ ಸಮಸ್ಯೆ ಪರಿಹಾರವಾದ ಬಳಿಕ ಬಾಕಿ ಮೊತ್ತವನ್ನೂ ಸೇರಿಸಿಯೇ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬೆಂಗಳೂರಿನ ಜಲಮಂಡಳಿ ಕಚೇರಿಯಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತರಬೇತಿ ಕುರಿತು ಸಚಿವರು ಮಾಹಿತಿ ಪಡೆದುಕೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ತಾಂತ್ರಿಕ ‌ದೋಷ, ಸಿಬ್ಬಂದಿಗಳ ತೊಡಕಿನ ಕುರಿತು ಪರಿಶೀಲನೆ ನಡೆಸಿದರು.

ಶೇಕಡ 95ರಷ್ಟು ಯಶಸ್ವಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಗೃಹಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಪ್ರತಿ ತಿಂಗಳು ಎಷ್ಟು ಹಣ ಜಮಾವಣೆ?

ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 1 ಕೋಟಿ 16 ಲಕ್ಷದ 65 ಸಾವಿರ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿ ಯರ ಆಕೌಂಟ್ ಗೆ ತಲಾ ಎರಡು ಸಾವಿರ ರೂ.ಗಳಂತೆ 2,119 ಕೋಟಿ ಹಣ ಹಾಕಲಾಗಿದೆ. ಈ ಮೂಲಕ ಶೇಕಡಾ 97ರಷ್ಟು ಡಿಬಿಟಿ ಮುಖಾಂತರ ಹಣ ಹಾಕಲಾಗಿದೆ. ಆಗಸ್ಟ್ ತಿಂಗಳಲ್ಲಿ ಐದು ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ. ಸೆಪ್ಟೆಂಬರ್ ನಲ್ಲಿ 82% ಕುಟುಂಬಗಳಿಗೆ ಹಣ ಹಾಕಲಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಆಕೌಂಟ್ ನಲ್ಲಿ ಉಳಿದಿದೆ. ಇನ್ನು ಅಕ್ಟೋಬರ್ ನಲ್ಲಿ 2400 ಕೋಟಿ ರೂ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮೂರು ತಿಂಗಳ ಹಣ ಒಟ್ಟಿಗೆ ಸಿಗಲಿದೆ

ಆಗಸ್ಟ್ 15ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ದರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ದರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ ನೀಡಿದರು. ದೀಪಾವಳಿ ಹಬ್ಬದ ವೇಳೆಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು. ಹೀಗಾಗಿ ಅಧಿಕಾರಿಗಳಿಗೆ ಟ್ರೈನಿಂಗ್ ನೀಡಲಾಗುತ್ತಿದ್ದು, ಇನ್ನು ಹತ್ತು ದಿನದಲ್ಲಿ ಗೃಹಲಕ್ಷ್ಮಿ ಗೊಂದಲ ಕ್ಲಿಯರ್ ಆಗಲಿದೆ ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನಿರ್ದೇಶಕರಾದ ಎಂ.ಎಸ್.ಅರ್ಚನಾ, ಇ-ಗವರ್ನೆನ್ಸ್ ಇಲಾಖೆಯ ನಿರ್ದೇಶಕ ದಿಲೀಶ್ ಉಪಸ್ಥಿತರಿದ್ದರು.

Exit mobile version