ಬೆಂಗಳೂರು: ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ (Guru Purnima 2024) ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಗರದ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ.
ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ರಾಮ-ಕೃಷ್ಣʼ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ವಲಯದ 9 ಪ್ರಮುಖ ನಿರೀಕ್ಷೆಗಳಿವು
ಗುರು ಪೂರ್ಣಿಮಾ ಮಹೋತ್ಸವದಲ್ಲಿ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.
ಮಹೋತ್ಸವದಲ್ಲಿ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ ಕೆಂಚಾಂಬ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಹೇಶ್, ಆನೇಕಲ್‌ನ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸೋಮೇಶ್ ರೆಡ್ಡಿ ಹಾಗೂ ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿ ಶಶಾಂಕ ಆಚಾರ್ ಪಾಲ್ಗೊಂಡಿದ್ದರು.
ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್; ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
ಬೆಂಗಳೂರಿನ ಬಸವನಗುಡಿಯ ಭವಾನಿ ಕಲ್ಯಾಣ ಮಂಟಪ, ಯಲಹಂಕದ ಆರ್.ವಿ. ಕಲ್ಯಾಣ ಮಂಟಪ ಹಾಗೂ ಚಂದಾಪುರದ ಯಾರೆಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲಿ ಸೇರಿದಂತೆ ದೇಶದಾದ್ಯಂತ 71 ಕ್ಕೂ ಅಧಿಕ ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು.