ರಾಯಚೂರು: ರಾಜ್ಯದಲ್ಲಿ ಶಕ್ತಿ ಯೋಜನೆಯಿಂದಾಗಿ (Shakthi Scheme) ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ (Free Bus Service) ಮಾಡುತ್ತಿದ್ದಾರೆ. ಇದು ಮಹಿಳೆಯರ ಸಬಲೀಕರಣ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಇದೇ ಬಸ್ ಪ್ರಯಾಣ ಕೆಲವು ಮಹಿಳೆಯರ ಪಾಲಿಗೆ ಇದು ಪ್ರಾಣ ಸಂಕಟವೂ ಆಗಿದೆ ಎನ್ನುವುದಕ್ಕೆ ನಿದರ್ಶನವೊಂದು ಸಿಕ್ಕಿದೆ (Harassment Case). ಸರ್ಕಾರಿ ಬಸ್‌ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕಂಡಕ್ಟರ್ ಲೈಂಗಿಕವಾಗಿ ಕಿರುಕುಳ (Sexual Harassment) ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಾಯಚೂರಿನಿಂದ ಬೆಂಗಳೂರಿಗೆ (Raichur To Bengaluru Bus) ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಕಂಡಕ್ಟರ್ ತನ್ನ ಸೊಂಟ ಮುಟ್ಟಿದ್ದಾನೆ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ರಾಯಚೂರು ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಂಡಕ್ಟರ್ ಲಕ್ಷ್ಮೀ ಕಾಂತ್ ರೆಡ್ಡಿ ಮೇಲೆ ಈ ದೂರು ನೀಡಲಾಗಿದೆ. ಆದರೆ ಕಂಡಕ್ಟರ್ ಆರೋಪವನ್ನು ತಳ್ಳಿ ಹಾಕಿದ್ದು, ಇದೊಂದು ಪಿತೂರಿ ಎಂದಿದ್ದಾನೆ.
ಈ ಘಟನೆ ನಡೆದಿರುವುದು ಫೆಬ್ರವರಿ 18ರ ರಾತ್ರಿ. ರಾಯಚೂರಿನಿಂದ ಕೆಎ-36,ಎಫ್-1532 ನಂಬರ್ನ ಬಸ್ ಹೊರಟಿತ್ತು. ಬಸ್ ಸ್ವಲ್ಪ ಮುಂದಕ್ಕೆ ಬರುತ್ತಿದ್ದ ಡ್ರೈವರ್ ಲೈಟ್ ಆಫ್ ಮಾಡಿದ್ದ. ಆಗ ರಾಯಚೂರು ನಗರ ಘಟಕದ ಕಂಡಕ್ಟರ್ ಲಕ್ಷ್ಮಿಕಾಂತ್ ರೆಡ್ಡಿ ಕಿರುಕುಳ ನೀಡಲು ಮುಂದಾಗಿದ್ದಾನೆ.
ದೂರುದಾರ ಮಹಿಳೆ ಡ್ರೈವರ್‌ನ ಹಿಂಬದಿ ಸೀಟಿನಲ್ಲಿ ಒಬ್ಬರೇ ಇದ್ದರು. ಆಕೆ ಒಬ್ಬರೇ ಇರುವುದರಿಂದ ಆಕೆಯ ಮೇಲೆ ಕಣ್ಣು ಹಾಕಿದ್ದ ಕಂಡಕ್ಟರ್ ಲೈಟ್ ತೆಗೆಯುತ್ತಿದ್ದಂತೆಯೇ ಡ್ರೈವರ್ ಮತ್ತು ಕಂಡಕ್ಟರ್‌ಗೆ ಮೀಸಲಿದ್ದ ಸೀಟಿಗೆ ಬಂದಿದ್ದ. ಅಲ್ಲಿಂದಲೇ ಪಕ್ಕದಲ್ಲಿ ಮಲಗಿದ್ದ ಈ ಮಹಿಳೆಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದ.
ಫ್ರೀ ಟಿಕೆಟ್ ಹರಿದು ತನ್ನ ಜೇಬ್ನಲ್ಲಿ ಇಟ್ಟುಕೊಂಡ ಆತ ಟಿಕೆಟ್ ಬೇಕಾದ್ರೆ ಲೈಂಗಿಕವಾಗಿ ಸಹಕರಿಸು, ಇಲ್ಲ ಫೈನ್ ಬೀಳುತ್ತದೆ ಎಂದು ಹೇಳಿದ್ದ. ಮಾತ್ರವಲ್ಲ ಸಹಕರಿಸುವಂತೆ ಹಠ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
ಸೀಟಿನಲ್ಲಿ ನನ್ನ ಕಡೆ ಮಲಗಿಕೊಂಡು ಮೊದಲು ಸೊಂಟಕ್ಕೆ ಕೈ ಹಾಕಿದ ಕಂಡಕ್ಟರ್ ನನ್ನ ಯಾವ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಆರಾಮ ಇಲ್ಲ, ಹೃದಯದ ಸಮಸ್ಯೆ ಇದೆ ಎಂದು ಹೇಳಿಕೊಂಡರೂ ಕಿರುಕುಳ ಮುಂದುವರಿಸಿದ್ದಾನೆ. ರಾತ್ರಿ ಎಂಟು ಗಂಟೆಯಿಂದ ರಾತ್ರಿ 2 ಗಂಟೆಯವರೆಗೂ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : Alimony Case : ಗಂಡನ ತಂದೆ-ತಾಯಿ ಸೊಸೆಗೆ ಜೀವನಾಂಶ ನೀಡಬೇಕಾಗಿಲ್ಲ ಎಂದ ಹೈಕೋರ್ಟ್
ಆದರೆ, ಕಂಡಕ್ಟರ್ ಲಕ್ಷ್ಮೀಕಾಂತ್ ರೆಡ್ಡಿ ಮಾತ್ರ ತಾನು ಹಾಗೆ ಮಾಡಿಯೇ ಇಲ್ಲ. ಮಹಿಳೆ ಹೇಳಿದ್ದು ನಿಜವಲ್ಲ ಎಂದೆಲ್ಲ ವಾದಿಸಿದ್ದಾನೆ. ಇದು ಸಂಸ್ಥೆಯೊಳಗಿನ ಕೆಲವರ ಕಿತಾಪತಿ ಎನ್ನುವುದು ಆತನ ಹೇಳಿಕೆ. ಆದರೆ, ಅವರಿಗೂ ಈ ಮಹಿಳೆಗೆ ಕಿರುಕುಳ ನೀಡಿದ್ದಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ನೀಡುವುದಿಲ್ಲ.
ಈ ಪ್ರಕರಣದಿಂದ ಹುಟ್ಟಿಕೊಂಡಿರುವ ದೊಡ್ಡ ಪ್ರಶ್ನೆ ಏನೆಂದರೆ, ಈ ರೀತಿ ಎಲ್ಲ ಆದರೆ ಮಹಿಳೆಯರು ರಾತ್ರಿ ಬಸ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುವುದು ಹೇಗೆ ಮತ್ತು ಎಷ್ಟು ಸುರಕ್ಷಿತ?