Site icon Vistara News

Vistara Kannada Sambhrama : ಜನರ ಪರವಾಗಿ ಮಿಡಿಯುತ್ತಿರುವ ವಿಸ್ತಾರ ನ್ಯೂಸ್‌ ಸಾಧನೆ ಬಿಚ್ಚಿಟ್ಟ ಹರಿಪ್ರಕಾಶ್‌ ಕೋಣೆಮನೆ

Hariprakash konemane

ಬೆಂಗಳೂರು: ಸದಭಿರುಚಿ ಉದ್ದೇಶದೊಂದಿಗೆ ಪ್ರಾರಂಭವಾದ ವಿಸ್ತಾರ ನ್ಯೂಸ್‌ ಇಂದು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದೆ. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪಾರದರ್ಶಕ ಮತ್ತು ಗುಣಮಟ್ಟದ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಅಲ್ಲದೆ, ಜನ ಪರ ಅಭಿಯಾನಗಳ ಮೂಲಕ ಜನರನ್ನೂ ಒಳಗೊಂಡು ಮುನ್ನಡೆಯುತ್ತಿದೆ. ಇಂದು ನಮ್ಮೂರ ಶಾಲೆ – ನಮ್ಮೆಲ್ಲರ ಶಾಲೆ ಅಭಿಯಾನದಿಂದ ರಾಜ್ಯದ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ನಾವು ಕಾರಣರಾಗಿದ್ದೇವೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದು ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ವಿಸ್ತಾರ ಕನ್ನಡ ಸಂಭ್ರಮ (Vistara Kannada Sambhrama) ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು.

ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” (Vistara Kannada Sambhrama) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹರಿಪ್ರಕಾಶ್‌ ಕೋಣೆಮನೆ, ಈಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಅವರು ನಮ್ಮ ವಿಸ್ತಾರ ಚಾನೆಲ್‌ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಅಂದು ಆಡಿದ ಮಾತನ್ನು ನಾನು ನೆನೆಪಿಸಿಕೊಳ್ಳಲು ಇಷ್ಟಪಡುತ್ತೇನೆ. ಒಂದು ಚಾನೆಲ್‌ ಅನ್ನು ನಡೆಸುವುದು ಕಷ್ಟಸಾಧ್ಯ. ಅದರಲ್ಲೂ ಒಂದು ಸದುದ್ದೇಶ ಇಟ್ಟುಕೊಂಡು, ಸದಭಿರುಚಿಯ ಸುದ್ದಿಗಳನ್ನು ನೀಡಿ ಉಳಿದುಕೊಳ್ಳುವುದು ಬಹಳ ಕಷ್ಟ. ಈ ಸವಾಲುಗಳನ್ನು ಮೀರಿ ವಿಸ್ತಾರ ನ್ಯೂಸ್‌ ಬೆಳೆಯಲಿ ಎಂದು ಹೇಳಿದ್ದರು. ಈಗ ವಿಸ್ತಾರ ನ್ಯೂಸ್‌ ಎಲ್ಲ ಸವಾಲುಗಳನ್ನು ಮೀರಿ ಮುನ್ನಡೆಯುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Vistara Kannada Sambhrama : ನಿಮ್ಮ ನಿರ್ಧಾರ ನಿಮ್ಮದಾಗಲಿ; ವಿಸ್ತಾರ ಕನ್ನಡ ಸಂಭ್ರಮದಲ್ಲಿ ಯುವಜನತೆಗೆ ರಮೇಶ್‌ ಕಿವಿಮಾತು

ನಮ್ಮದು ಸದಾ ನಿಖರ – ಜನಪರ

ಜಗತ್ತು ಯಾವಾಗಲೂ ಚಲನಶೀಲತೆಯನ್ನು ಹೊಂದಿರುತ್ತದೆ. ಇದು ಎಲ್ಲದಕ್ಕೂ ಅನ್ವಯವಾಗುತ್ತದೆ. ಮುದ್ರಣ ಮಾಧ್ಯಮದ ಸಹಿತ ಸುದ್ದಿ ವಾಹಿನಿಯೂ ಸಹ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಎಂಬ ಮಾತು ಈಗ ಕೇಳಿ ಬರುತ್ತಿದೆ. ಆದರೆ, ಈಗಿನ ಬದಲಾವಣೆಗಳಿಗೆ ತಕ್ಕಂತೆ ನಮ್ಮಲ್ಲಿ ನಾವು ಬದಲಾವಣೆಯನ್ನು ತಂದುಕೊಂಡರೆ ಸಾಧನೆ ಸುಲಭವಾಗುತ್ತದೆ. ನಾವು ಆ ನಿಟ್ಟಿನಲ್ಲಿ ಈಗ ಹೆಜ್ಜೆ ಹಾಕಿ ಸಾಧನೆ ಮಾಡಿದ್ದೇವೆ. ನಮ್ಮ ಚಾನೆಲ್‌ನ ಧ್ಯೇಯ ವಾಕ್ಯವೇ ನಿಖರ – ಜನಪರ ಎಂಬುದಾಗಿದೆ. ನಾವು ಸುದ್ದಿಯನ್ನು ನಿಖರವಾಗಿ ಬಿತ್ತರಿಸುವುದರ ಜತೆಗೆ ಜನರ ಪರವಾದಂತಹ ಸುದ್ದಿಗಳನ್ನು ನೀಡುತ್ತೇವೆ. ಅದಕ್ಕೇ ನಾವು ಜನಪ್ರಿಯ ಎಂದು ಹಾಕಿಕೊಂಡಿಲ್ಲ. ಜನಪರ ಎಂದು ಹಾಕಿಕೊಂಡಿರುವುದೇ ಸದಾ ನಾವು ಜನರ ಪರ ಎಂಬುದನ್ನು ಹೇಳಲು ಎಂದು ಹರಿಪ್ರಕಾಶ್‌ ಕೋಣೆಮನೆ ತಿಳಿಸಿದರು.

ನಾವು ವಿಷಯವನ್ನು ಎತ್ತರಿಸುತ್ತೇವೆ – ಧ್ವನಿಯನ್ನಲ್ಲ

ನಾವು ಧ್ವನಿಯನ್ನು ಎತ್ತರ ಮಾಡುವುದಿಲ್ಲ. ವಿಷಯವನ್ನು ಎತ್ತರಿಸುತ್ತೇವೆ ಎಂಬುದನ್ನು ನಮ್ಮ ಸುದ್ದಿವಾಹಿನಿಯನ್ನು ಪ್ರಾರಂಭ ಮಾಡುವ ದಿನದಿಂದಲೂ ನಾವು ಹೇಳುತ್ತಾ ಬಂದಿದ್ದೇವೆ. ಅಂದರೆ ನಾವೂ ಹೇಳುತ್ತೇವೆ, ಜನರು ಹೇಳುವುದನ್ನೂ ಕೇಳುತ್ತೇವೆ. ನಮಗೂ ಒಂದು ಹೊಣೆಗಾರಿಕೆ ಇದೆ. ನಾವು ಸಿಎಂ, ಡಿಸಿಎಂ, ಪ್ರಧಾನ ಮಂತ್ರಿ, ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ಹಾಗಾದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬಾರದಾ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ನಾವು ವಿಸ್ತಾರ ನ್ಯೂಸ್‌ ಚಾನೆಲ್‌ ಅನ್ನು ಪ್ರಾರಂಭ ಮಾಡಿದ್ದೇವೆ. ಇದಕ್ಕಾಗಿಯೇ ನಾವು ನಮ್ಮ ಘೋಷವಾಕ್ಯವಾಗಿ ನಿಖರ ಹಾಗೂ ಜನಪರ ಎಂದು ಇಟ್ಟಿರುವುದು ಎಂದು ಹೇಳುವ ಮೂಲಕ ವಿಸ್ತಾರ ನ್ಯೂಸ್‌ನ ಸದ್ದುದ್ದೇಶವನ್ನು ಹರಿಪ್ರಕಾಶ್‌ ಕೋಣೆಮನೆ ಅವರು ಜನರ ಮುಂದೆ ತೆರೆದಿಟ್ಟರು.

ಜನಪರ ಅಭಿಯಾನ ನಮ್ಮದು

ವಿಸ್ತಾರ ನ್ಯೂಸ್‌ ಪ್ರಾರಂಭದಲ್ಲಿಯೇ ನಾವು ಜನರ ಪರವಾದ ಎರಡು ಅಭಿಯಾನವನ್ನು ಪ್ರಾರಂಭ ಮಾಡಿದೆವು. ಆ ಮೂಲಕ ಜನರ ಸಮಸ್ಯೆಗಳಿಗೆ ಧನಿಯಾದೆವು. ಮೊದಲನೆಯದಾಗಿ “ನಮ್ಮೂರ ಶಾಲೆ – ನಮ್ಮೆಲ್ಲರ ಶಾಲೆ” ಎಂಬ ಅಭಿಯಾನವನ್ನು ಪ್ರಾರಂಭ ಮಾಡಿದೆವು. ಇಂದು ರಾಜ್ಯದ ಉದ್ದಗಲಕ್ಕೆ ಇರುವಂತಹ 300 ಶಾಲೆಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಿಕೊಡುವ ಕೆಲಸವನ್ನು ಮಾಡಿದ್ದೇವೆ. ಆ ಮೂಲಕ ನಾವು ಹೇಳುತ್ತೇವೆ ಇದು ನಿಖರ – ಜನಪರ ಎಂದು. ಅಲ್ಲದೆ, ಎರಡನೆಯದಾಗಿ, ನಾನು ರಾತ್ರಿ 9 ಗಂಟೆಗೆ ಬರುವ ಪ್ರೈಮ್‌ ಟೈಮ್‌ನಲ್ಲಿ ಜನರಿಂದ ಸಮಸ್ಯೆಯನ್ನು ಕೇಳಿ, ಅಲ್ಲಿಯೇ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿ ಜನರೇ ವೀಕ್ಷಕ ವರದಿಗಾರರಾಗಿದ್ದಾರೆ ಎಂದು ವಿಸ್ತಾರ ನ್ಯೂಸ್‌ನ ಜನಪರ ಕಾಳಜಿಯನ್ನು ಹರಿಪ್ರಕಾಶ್‌ ಕೋಣೆಮನೆ ಬಿಚ್ಚಿಟ್ಟರು.

10 ಯುಟ್ಯೂಬ್‌ ಚಾನೆಲ್‌

ಟಿವಿ ಒಂದೇ ಶಾಶ್ವತ ಎಂದು ನಾನು ಹೇಳಲು ಸಾಧ್ಯವಿಲ್ಲ. ಇಂದು ಡಿಜಿಟಲ್‌ ಮಾಧ್ಯಮ ಸಹ ಬೆಳೆಯುತ್ತಿದೆ. ಹಾಗಾಗಿ ನಾವು 10 ಯುಟ್ಯೂಬ್‌ ಚಾನೆಲ್‌ ಅನ್ನು ನಾವು ಪ್ರಾರಂಭ ಮಾಡಿದ್ದೇವೆ. ಇನ್ನು 100 ವರ್ಷಗಳನ್ನು ದಾಟಿ ನಮ್ಮ ವಿಸ್ತಾರ ಚಾನೆಲ್‌ ಮುನ್ನಡೆಯುತ್ತದೆ ಎಂಬ ವಿಶ್ವಾಸ ನನಗೆ ಇದೆ. ಇಲ್ಲಿ ಯಾವುದೇ ಭಾಷೆ, ಪಕ್ಷಗಳ ಎಲ್ಲೆ ಇಲ್ಲದೆ, ಸಮಾಜ ಹಿತವನ್ನು ನಾವು ಬಯಸುತ್ತಾ ಹೆಜ್ಜೆ ಹಾಕುತ್ತಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ನನ್ನಿಂದ ಅಲ್ಲ. ನಾವು ಎಂದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಪರಿಪ್ರಕಾಶ್‌ ಕೋಣೆಮನೆ ಹೇಳಿದರು.

ವಿಸ್ತಾರ ನ್ಯೂಸ್‌ ಪಿಲ್ಲರ್‌ಗಳು ಇವರೇ

ನಮ್ಮ ಡಿಜಿಟಲ್‌ ಮಾಧ್ಯಮ ಪ್ರಾರಂಭವಾಗಿ ಒಂದೂವರೆ ವರ್ಷ ಆಗಿದೆ. ನಮ್ಮ ಕಂಪನಿಗೆ ಪಾರದರ್ಶಕವಾಗಿ ಹೂಡಿಕೆ ಮಾಡಲಾಗಿದೆ. ನಾನು ನಾಲ್ಕನೆಯ ಪಿಲ್ಲರ್‌ ಆಗಿದ್ದೇನೆ. ಮೊದಲ ಪಿಲ್ಲರ್‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ಎರಡನೇ ಪಿಲ್ಲರ್‌ ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌ ಹಾಗೂ ಮೂರನೇ ಪಿಲ್ಲರ್‌ ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಇದನ್ನೂ ಓದಿ: Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಹೇಗಿತ್ತು ಮನರಂಜನೆಯ ಸುಗ್ಗಿ; ಇಲ್ಲಿವೆ ಫೋಟೊ ಝಲಕ್‌

ಡಿಸಿಎಂ ಡಿ.ಕೆ. ಶಿವಕುಮಾರ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕರಾಗಿರುವ ಕಿರಣ್‌ ಕುಮಾರ್‌ ಡಿ.ಕೆ. ಸೇರಿದಂತೆ ಹಲವು ಗಣ್ಯರು‌, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version