Site icon Vistara News

HC Thammesh Gowda | ತಮ್ಮೇಶ್ ಗೌಡ ನೇತೃತ್ವದಲ್ಲಿ ಬ್ಯಾಟರಾಯನಪುರದ ಆಟೋ ಚಾಲಕರಿಂದ ಸ್ವಾಭಿಮಾನ ಸಂಗಮ

HC Thammesh Gowda

ಬೆಂಗಳೂರು: ಕೇಸರಿ ಫೌಂಡೇಶನ್ ಸ್ಥಾಪಿಸಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿರುವ ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ (HC Thammesh Gowda) ಅವರು, ನವ ಬ್ಯಾಟರಾಯನಪುರ ನಿರ್ಮಾಣ ಮಾಡುವ ಉದ್ದೇಶದಿಂದ ಜನರ ಅಭಿಪ್ರಾಯಯವನ್ನು ಸಂಗ್ರಹಿಸುವ ಸಲುವಾಗಿ ಬ್ಯಾಟರಾಯನಪುರ ಜನಾಭಿಪ್ರಾಯ ಯಾತ್ರೆ ಪ್ರಾರಂಭಿಸಿದ್ದಾರೆ.

ಕಾರ್ಯಕ್ರಮದ ಭಾಗವಾಗಿ ಸಹಕಾರ ನಗರದ ಆಟದ ಮೈದಾನದಲ್ಲಿ ಮಂಗಳವಾರ ಸಂಜೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಆಟೋ ಚಾಲಕರಿಂದ ಸ್ವಾಭಿಮಾನ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರದ ಎಲ್ಲ ವಾರ್ಡ್‌ಗಳಿಂದ ಸಾವಿರಾರು ಆಟೋ ಚಾಲಕರು ಪಾಲ್ಗೊಂಡಿದ್ದರು.

ಮೊದಲಿಗೆ ಆಟೋಗಳ ಬೃಹತ್ ರ‍್ಯಾಲಿ ಬ್ಯಾಟರಾಯನಪುರ ವಾರ್ಡ್, ಕೊಡಿಗೆಹಳ್ಳಿ ವಾರ್ಡ್‌ನಲ್ಲಿ ಸಾಗಿ ಸಹಕಾರ ನಗರದಲ್ಲಿರುವ ಆಟದ ಮೈದಾನಕ್ಕೆ ತಲುಪಿತು. ವೇದಿಕೆಯಲ್ಲಿ ಆಟೋ ಚಾಲಕರು ತಮ್ಮ ಕಷ್ಟಗಳನ್ನು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ದುಸ್ಥಿತಿಯನ್ನು ತಮ್ಮೇಶ್ ಗೌಡರ ಬಳಿ ಹಂಚಿಕೊಂಡು, ಕ್ಷೇತ್ರದ ಅಭಿವೃದ್ಧಿಗೆ ಅನೇಕ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ತಮ್ಮೇಶ್ ಗೌಡ ಮಾತನಾಡಿ, ಆಟೋ ಚಾಲಕರು ಅತ್ಯಂತ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಇವರ ಕಷ್ಟಗಳನ್ನು ಕ್ಷೇತ್ರದ ಶಾಸಕರು ಕೇಳುತ್ತಿಲ್ಲ. ಹೀಗಾಗಿ ಇವರ ಧ್ವನಿಯಾಗಿ ನಾನು ನಿಲ್ಲುವ ನಿರ್ಧಾರ ಮಾಡಿದ್ದೇನೆ. ಬ್ಯಾಟರಾಯನಪುರದಲ್ಲಿ ಬದಲಾವಣೆ ತರುವಂತಹ ಸಾಮರ್ಥ್ಯ ನಮ್ಮ ಈ ಆಟೋ ಚಾಲಕರಿಗಿದೆ ಎಂದು ಹೇಳಿದರು.

ಬಡವರು, ಮಧ್ಯಮ ವರ್ಗದವರನ್ನು ಕಳೆದ 15 ವರ್ಷಗಳಿಂದ ಕಡೆಗಣಿಸಲಾಗುತ್ತಿದೆ. ಸರ್ಕಾರದ ಅನೇಕ ಯೋಜನೆಗಳಡಿಯಲ್ಲಿ ಬಡ ಜನರಿಗೆ ನಿವೇಶನ ಮತ್ತು ಮನೆಗಳನ್ನು ಕೊಡಬಹುದಾಗಿತ್ತು. ಆದರೆ, ಯಾರಿಗೂ ಇದುವರೆಗೂ ಒಂದು ನಿವೇಶನ, ಮನೆ ಕೊಟ್ಟಿಲ್ಲ. ಕ್ಷೇತ್ರದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಬದಲಾವಣೆ ತರಲು ಯತ್ನಿಸುತ್ತಿದ್ದೇನೆ, ಇದಕ್ಕೆ ಜನರ ಬೆಂಬಲ ಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Health Infrastructure | 2022ರಲ್ಲಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಳದಲ್ಲಿ ಗಮನಾರ್ಹ ಸಾಧನೆ: ಡಾ. ಕೆ. ಸುಧಾಕರ್‌

Exit mobile version